ನವ ದೆಹಲಿ: ಕೇಂದ್ರ ಸರ್ಕಾರ ಮತ್ತು ಭಾರತೀಯ ಮಕ್ಕಳ ಕಲ್ಯಾಣ ಪರಿಷತ್ತು (ICCW) ನೀಡುವ ಈ ಸಾಲಿನ ಶೌರ್ಯ ಪ್ರಶಸ್ತಿಗೆ ಕರ್ನಾಟಕದ ಕೆ.ಆರ್. ದೀಕ್ಷಿತ್ (8) ಕೀರ್ತಿ ವಿವೇಕ್ ಎಂ. ಸಾಹುಕಾರ (12) ಆಯ್ಕೆಯಾಗಿದ್ದಾರೆ. ಬುಧವಾರ (ಜ.25) ದೆಹಲಿಯ ನೆಹರೂ ಸ್ಟೇಡಿಯಂನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 2020ರಲ್ಲಿ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹುಬ್ಬಳ್ಳಿ ಮೂಲದ ಆದಿತ್ಯ ಅವರಿಗೂ ಇದೇ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
ತಾಯಿಯ ಜೀವ ಕಾಪಾಡಿದ ಪೋರ ದೀಕ್ಷಿತ್ ಕೆ.ಆರ್
ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಕೂಡ್ಲೂರು ಎಂಬ ಸಣ್ಣ ಗ್ರಾಮದ ಬಾಲಕ ದೀಕ್ಷಿತ್ ಕೆ.ಆರ್ ತನ್ನ ತಾಯಿಯ ಜೀವ ಕಾಪಾಡಿ ಹೀರೋ ಆಗಿದ್ದಾನೆ. 2021ರಲ್ಲಿ ನಡೆದ ಘಟನೆ ಇದು. 2021ರ ನವೆಂಬರ್‌ನಲ್ಲಿ ತಾಯಿ ಅರ್ಪಿತಾ ರಾಗಿ ಮಿಷನ್‌ನಲ್ಲಿ ಕೆಲಸ ಮಾಡುವ ಸಂದರ್ಭ ಅವರ ತಲೆಕೂದಲು ಮೆಷಿನ್‌ಗೆ ಸಿಕ್ಕಿ ಹಾಕಿಕೊಂಡು ಸೆಳೆದಿತ್ತು. ರಾಗಿ ಮೆಷಿನ್ ತುಂಬಾ ರಕ್ತ ತುಂಬಿಕೊಂಡಿತ್ತು. ಹೊರಗಡೆ ಆಡುತ್ತಿದ್ದ ಬಾಲಕ ದೀಕ್ಷಿತ್ ಅಮ್ಮನ ಕೂಗು ಕೇಳಿ ಕೂಡಲೇ ಓಡಿ ಬಂದು ಮೈನ್ ಸ್ವಿಚ್ ಆಫ್ ಮಾಡಿದ್ದ. ತಿರುಗುತ್ತಿದ್ದ ಮೆಷಿನ್ ಬಂದ್ ಆಗಿತ್ತು. ನಂತರ ನಿಧಾನವಾಗಿ ಅಮ್ಮನ ಕೂದಲನ್ನು ಮೆಷಿನ್‌ನಿಂದ ಬಿಡಿಸಿ, ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ. ನಂತರ ತಾಯಿ ಅರ್ಪಿತಾರನ್ನು ಆಸ್ಪತ್ರೆಗೆ ಸೇರಿಸಿ, ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಅವರು ಬದುಕುಳಿದಿದ್ದರು. ಪ್ರತಿ ಮಗನಿಗೆ ತಾಯಿ ಜನ್ಮ ನೀಡಿದ್ದರೆ, ಇಲ್ಲಿ ಮಗನೇ ತಾಯಿಗೆ ಪುನರ್ಜನ್ಮ ನೀಡಿದ್ದಾನೆ.
ಕುಟುಂಬವನ್ನು ರಕ್ಷಿಸಿದ ಕೀರ್ತಿ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಜುನಾಥ್ ಸಾಹುಕಾರ, ಶೃತಿ ಸಾಹುಕಾರ ದಂಪತಿಯ ಪುತ್ರ ಕೀರ್ತಿ ವಿವೇಕ್ ಎಂ ಸಾಹುಕಾರ್ ತನ್ನ ಕುಟುಂಬವನ್ನು ರಕ್ಷಿಸಿದ್ದಾನೆ. 2022ರ ಆಗಸ್ಟ್ 21ರಂದು ವಿವೇಕ್ ಕುಟುಂಬ ಜಗಳೂರಿನಿಂದ 25 ಕಿಲೋಮೀಟರ್ ದೂರದಲ್ಲಿರುವ ಅಗಸನಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ಪ್ರವಾಸ ಕೈಗೊಂಡಿತ್ತು. ಕೀರ್ತಿಯ ತಂದೆ ಕಾರು ಓಡಿಸುತ್ತಿದ್ದರು. ತಾಯಿ ಮತ್ತು 9 ವರ್ಷದ ಸಹೋದರಿ ಸಾತ್ವಿಕ ಕಾರಿನಲ್ಲಿದ್ದರು. ದುರದೃಷ್ಟವಶಾತ್ ಕಾರು ಅಪಘಾತಕ್ಕೀಡಾಯಿತು. ಕಡಿದಾದ ದಾರಿಯಲ್ಲಿ ಕಾರಿನ ಚಕ್ರಕ್ಕೆ ನಾಯಿಯೊಂದು ಸಿಕ್ಕಿ ಕೀರ್ತಿಯ ತಂದೆ ಬ್ರೇಕ್ ಹಾಕಿದಾಗ ಕಾರು ಪಲ್ಟಿ ಹೊಡೆದು ಐದು ಅಡಿ ಆಳದ ಕಂದಕಕ್ಕೆ ಬಿದ್ದಿತು. ಬಾಗಿಲುಗಳು ಲಾಕ್ ಆಗಿದ್ದರಿಂದ ತೆಗೆಯಲಾಗಲಿಲ್ಲ. ಸಹೋದರಿಗೆ ಗಾಯವಾಗಿತ್ತು. ತಾಯಿ ಕೈ ಮುರಿದು ಪ್ರಜ್ಞೆತಪ್ಪಿದ್ದರು. ಬೆನ್ನುಮೂಳೆಗೆ ಪೆಟ್ಟು ಬಿದ್ದಿದ್ದರಿಂದ ತಂದೆಗೆ ಡ್ರೈವರ್ ಸೀಟಿನಿಂದ ಚಲಿಸಲು ಸಾಧ್ಯವಾಗಲಿಲ್ಲ. ಈ ಸ್ಥಿತಿಯಲ್ಲಿ ಧೈರ್ಯ ತುಂಬಿಕೊಂಡ ಕೀರ್ತಿ, ತನ್ನ ಗಾಯಗಳನ್ನೂ ಲೆಕ್ಕಿಸದೆ ಕಾರಿನಲ್ಲಿದ್ದ ಸ್ಟೀಲ್ ನೀರಿನ ಬಾಟಲ್‌ನಿಂದ ಕಾರಿನ ಮುಂಭಾಗದ ಗಾಜನ್ನು ಒಡೆದ. ಮೊದಲು ತಂಗಿಯನ್ನು ರಕ್ಷಿಸಿ ನಂತರ ತಂದೆಯನ್ನು ಹೊರಗೆ ತಂದ. ನಂತರ ಪೊಲೀಸ್ ಆಂಬ್ಯುಲೆನ್ಸ್‌ಗೆ ಫೋನ್ ಮಾಡಿದ. ಹೀಗೆ ತಂದೆ ತಾಯಿ ತಂಗಿಯ ಪ್ರಾಣ ಉಳಿಸಿದ್ದ.
ಮುಳುಗುತ್ತಿದ್ದ ಮೂವರನ್ನು ಕಾಪಾಡಿದ ಆದಿತ್ಯ
ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಆದಿತ್ಯ ಮಲ್ಲಿಕಾರ್ಜುನ ಶಿವಳ್ಳಿಯು ನೀರಿನಲ್ಲಿ ಮುಳುಗುತ್ತಿದ್ದ ಮೂವರನ್ನು ಕಾಪಾಡಿ ಸಾಹಸ ಮೆರೆದಿದ್ದಾರೆ. 2020ರ ಮಕರ ಸಂಕ್ರಾಂತಿ ದಿನ ಶಿರಸಿ ಬಳಿಯ ಮೋರೆಗಾರ ಫಾಲ್ಸ್‌ಗೆ ಆದಿತ್ಯ ಕುಟುಂಬ ಸಮೇತ ಹೋಗಿದ್ದರು. 25 ಅಡಿ ಅಗಲ ಮತ್ತು 35 ಅಡಿ ಆಳ ಇರುವ ಮೋರೆಗಾರ ಫಾಲ್ಸ್‌ನ ಗುಂಡಿಯಲ್ಲಿ ಮುಳುಗುತ್ತಿದ್ದ ಮೂವರನ್ನು ಸಮಯ ಪ್ರಜ್ಞೆ ಮತ್ತು ಸಾಹಸದಿಂದ ಕಾಪಾಡಿದ್ದರು. ಇವರ ಈ ಸಾಹಸವನ್ನು ಮೆಚ್ಚಿ ರಾಜ್ಯ ಸರ್ಕಾರ 2021-22ನೇ ಸಾಲಿನ ಹೊಯ್ಸಳ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದೀಗ, ICCW ಕೊಡುವ 2022-23ರ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ : ಕನ್ನಡಿಗ ಹುತಾತ್ಮ ಯೋಧನ ಶೌರ್ಯ ಪ್ರಶಸ್ತಿ ನೀಡಲು ಸ್ವತಃ ರಾಷ್ಟ್ರಪತಿ ವೇದಿಕೆ ಇಳಿದು ಬಂದರು