Site icon Vistara News

ವಿಸ್ತಾರ Exclusive | ಚೀನಾ ಸಂಸ್ಥೆ (ICFA) ಜತೆ ಸಿದ್ದರಾಮಯ್ಯ ʼಸ್ನೇಹʼ 21 ವರ್ಷ ಹಳೆಯದು!

ICFA

ರಮೇಶ ದೊಡ್ಡಪುರ, ಬೆಂಗಳೂರು
“India-China Friendship Association (ICFA) ಭಾನುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ‌ ಹೆಸರು ಕಂಡು ಆಶ್ಚರ್ಯವಾಯಿತು. ಸೈದ್ಧಾಂತಿಕವಾಗಿ ನನ್ನ‌ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ಧವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ” ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಆದರೆ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಈ ಸಂಸ್ಥೆಯೊಂದಿಗೆ ಅನೇಕ ದಶಕಗಳಿಂದಲೂ ರಾಜಕಾರಣಿಗಳು ಸಂಪರ್ಕದಲ್ಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್‌ ಸೇರಿ ಅನೇಕರು ಭಾಗಿಯಾಗಿದ್ದರೆ, ಸ್ವತಃ ಸಿದ್ದರಾಮಯ್ಯ ಅವರು ಈ ಸಂಸ್ಥೆಯ ಮೂಲಕ ಚೀನಾ ಪ್ರವಾಸವನ್ನೂ ಮುಗಿಸಿಬಂದಿದ್ದಾರೆ!

ಫ್ರೆಂಡ್‌ಷಿಪ್ ಅಸೋಸಿಯೇಷನ್‌ ಸ್ಥಾಪನೆಯ ಉದ್ದೇಶ ಏನು?

ಚೀನಾ ಗಣತಂತ್ರವನ್ನು (ರಿಪಬ್ಲಿಕ್‌ ಆಫ್‌ ಚೈನಾ) ಸೋಲಿಸಿದ ನಂತರ 1949ರಿಂದ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ)’ ಹೆಸರಲ್ಲಿ ಆಡಳಿತ ನಡೆಸುತ್ತಿರುವ ಚೀನಾ ಕಮ್ಯುನಿಸ್ಟ್ ಪಕ್ಷ ಪ್ರಾರಂಭದಲ್ಲಿ ಐಡೆಂಟಿಟಿ ಪಡೆಯಬೇಕಿತ್ತು. ಹಾಂಗ್‌ಕಾಂಗ್, ಟಿಬೆಟ್, ತೈವಾನ್ ಸೇರಿ ಅನೇಕ ಭೂಭಾಗದ ಜನರು ಪಿಆರ್‌ಸಿ ವಿರುದ್ಧ ಹೋರಾಟ ನಡೆಸುತ್ತಿದ್ದವು. ಈಗಾಗಲೆ ವಿಶ್ವಮಾನ್ಯತೆ ಪಡೆದ ದೇಶಗಳು ಪಿಆರ್‌ಸಿಯನ್ನು ತನ್ನ ಅಧಿಕೃತ ಸಂಪರ್ಕದ ಕೊಂಡಿಯಾಗಿ, ಅಂದರೆ ಒಂದು ದೇಶದ ಆಡಳಿತ ಎಂದು ಗುರುತಿಸಬೇಕಿತ್ತು.

ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ ದೇಶವಿದೇಶಗಳ ಗೌಪ್ಯ ಮಾಹಿತಿ ಸಂಗ್ರಹಿಸಿ ನೀಡಲು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್ ಸ್ಥಾಪನೆ ಮಾಡಿಕೊಂಡಿತು. ವಿವಿಧ ದೇಶಗಳಲ್ಲಿ ಪಿಆರ್‌ಸಿ ಕುರಿತು ಮೃದು ಧೋರಣೆ ತಳೆಯುವಂತೆ ಮಾಡಲು ಹಾಗೂ ಕಾಲಕ್ರಮೇಣ ಅಲ್ಲಿನ ಸಂಸ್ಕೃತಿ, ರಾಜಕೀಯ ಪ್ರಭುತ್ವವನ್ನು ಪ್ರಭಾವಿಸಲು ಚೈನೀಸ್ ಪೀಪಲ್ಸ್ ಅಸೋಸಿಯೇಷನ್ ಫಾರ್ ಫ್ರೆಂಡ್‌ಷಿಪ್ ವಿತ್ ಫಾರಿನ್ ಕಂಟ್ರೀಸ್(CPEFFC) ಸ್ಥಾಪಿಸಿತು. CPEFFC ಮೂಲಕ ಭಾರತದಲ್ಲಿ ಇಂಡಿಯಾ-ಚೈನಾ ಫ್ರೆಂಡ್‌ಷಿಪ್‌ ಅಸೋಸಿಯೇಷನ್‌(ICFA) ಸೇರಿದಂತೆ 40 ದೇಶಗಳಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳನ್ನು ಸ್ಥಾಪಿಸಿದೆ.

ಅನೇಕ ವಿದೇಶಾಂಗ ತಜ್ಞರು ಹೇಳಿರುವಂತೆ, ಸಿಪಿಎಎಫ್‌ಎಫ್‌ಸಿ ಎಂಬುದು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್‌ನ ಮುಖವಾಡ. ಆದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ, ಚೀನಾದ ಕೃಷಿ-ಕೈಗಾರಿಕೆ ಕುರಿತು ಪ್ರಾತ್ಯಕ್ಷಿಕೆ, ಪ್ರವಾಸ ಉತ್ತೇಜನದ ಹೆಸರಿನಲ್ಲಿ ನಡೆಸುತ್ತಿರುವ ಐಸಿಎಫ್‌ಎ ಹಿನ್ನೆಲೆ ಬಹುತೇಕರಿಗೆ ತಿಳಿದಿಲ್ಲ. 1962ರಲ್ಲಿ ಚೀನಾ ಜತೆಗೆ ಯುದ್ಧ ನಡೆದಾಗ ICFA ಯನ್ನು ರದ್ದುಪಡಿಸಲಾಗಿತ್ತು. ಮತ್ತೆ 1992ರಿಂದ ಚಾಲನೆ ನೀಡಲಾಗಿದ್ದು, ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಇದರ ಶಾಖೆಗಳಿವೆ.

ಭಾರತದಲ್ಲಿ ಹೆಚ್ಚಿದ ಮೃದು ಧೋರಣೆ

ದೇಶದಲ್ಲಿ ಐಸಿಎಫ್‌ಎ ಸ್ಥಾಪನೆಯಾದಾಗ ಅದರ ಮೊದಲ ಪ್ರಧಾನ ಕಾರ್ಯದರ್ಶಿ ಆದವರು ಕಲ್ಕತ್ತಾ ವಿವಿಯ ಚೀನಾ ಇತಿಹಾಸ ಪ್ರೊಫೆಸರ್ ತ್ರಿಪುರಾರಿ ಚಕ್ರವರ್ತಿ. ಬಹುತೇಕ ಕಮ್ಯುನಿಸ್ಟ್ ಚಿಂತಕರು ಹಾಗೂ ದೇಶದ ಘಟಾನುಘಟಿ ಚಿಂತಕರ ಗುಂಪನ್ನು ಚೀನಾ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಈ ನಂತರದಲ್ಲಿ ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳಿಗೆ ಮಾವೋ ತ್ಸೆ ತುಂಗ್ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಅನುವಾದಗೊಂಡವು. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಐಸಿಎಫ್‌ಎ ಶಾಖೆಗಳನ್ನು ಸ್ಥಾಪಿಸಲಾಯಿತು. ಮೇ ಡೇ ಆಚರಣೆಗೆ ದೇಶದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಪ್ರಧಾನಿ ನೆಹರೂ ಸಹೋದರಿ ವಿಜಯಲಕ್ಷ್ಮೀ ಪಂಡಿತ್ ನೇತೃತ್ವದ ಸರ್ಕಾರಿ ನಿಯೋಗ ಸೇರಿ ಅನೇಕರು ತಂಡೋಪತಂಡಗಳಲ್ಲಿ ಚೀನಾ ಪ್ರವಾಸ ನಡೆಸಿ ಈ ಕುರಿತು ಭಾರತದಲ್ಲಿ ಮೃದು ಧೋರಣೆ ಪ್ರಸಾರ ಮಾಡಿದರು.

ಸದಾ ಅಮೆರಿಕ ವಿರೋಧಿ

CPEFFC ಎಂಬುದು ಸುಮ್ಮನೆ ಹಾಡು, ಕುಣಿತಕ್ಕೆ, ಮನರಂಜನೆಗೆ ಸೀಮಿತವಾದ ಸಂಸ್ಥೆಯಲ್ಲ ಎಂಬುದಕ್ಕೆ 2021ರಲ್ಲಿ ನಡೆದ ಬೆಳವಣಿಗೆಯೇ ಉದಾಹರಣೆ. CPEFFCಯ ಈಗಿನ ಅಧ್ಯಕ್ಷ ಲಿನ್ ಸಾಂಗ್ಟಿಯಾನ್. 2020ರ ಏಪ್ರಿಲ್‌ವರೆಗೆ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್, ಕೊರೊನಾ ವೈರಸ್ ಕುರಿತು ಆಡಿದ ಮಾತಿಗೆ ಸುದ್ದಿಯಾಗಿದ್ದರು. ವಿಶ್ವಕ್ಕೆ ಕೊರೊನಾ ವೈರಸ್‌ ಪಸರಿಸಿದ ವುಹಾನ್‌ಗೆ 2020ರಲ್ಲಿ ಕ್ರೀಡಾಕೂಟಕ್ಕೆ ಆಗಮಿಸಿದ್ದ ಅಮೆರಿಕನ್ನರು ಕರೊನಾ ವೈರಸನ್ನು ಬಿಟ್ಟು ತೆರಳಿದ್ದರು ಎಂದು ಲಿನ್ ಸಾಂಗ್ಟಿಯಾನ್ ಹೇಳಿದ್ದರು. ಈ ಹೇಳಿಕೆಗಳಿಗೆ ಕೆರಳಿದ್ದ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಸಂಬೋಧಿಸಿದ್ದರು.

ಲಿನ್ ಸಾಂಗ್ಟಿಯಾನ್‌ರನ್ನು ದಕ್ಷಿಣ ಆಫ್ರಿಕಾದ ರಾಯಭಾರಿ ಸ್ಥಾನದಿಂದ ಮಾರ್ಚ್‌ನಲ್ಲಿ ಇದ್ದಕ್ಕಿದ್ದಂತೆ ಹಿಂಪಡೆಯಲಾಯಿತು. ನಂತರ ಲಿನ್ ಸಾಂಗ್ಟಿಯಾನ್‌ರನ್ನು ಸಿಪಿಎಎಫ್‌ಎಫ್‌ಸಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್(ಬಿಆರ್‌ಐ) ಯೋಜನೆಯನ್ನು ಸಾಕಾರಗೊಳಿಸಲು ಹಾದಿ ಸುಗಮಗೊಳಿಸುವುದು ಈ ನೇಮಕದ ಉದ್ದೇಶ. ಬಿಆರ್‌ಐ ಬಲವಾದ ಸಮರ್ಥಕರಾದ ಲಿನ್, ಚೀನಾದ ಸಾಧನೆಯನ್ನು ತಡೆಯಲಾಗದವರು ಮಾತ್ರ ಇದನ್ನು ವಿರೋಧಿಸುತ್ತಾರೆ ಎಂದು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಿಆರ್‌ಐ ಯೋಜನೆಯು ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ಕಾರಣಕ್ಕೆ ಭಾರತ ಈಗಲೂ ವಿರೋಧ ಮಾಡುತ್ತಲೇ ಬಂದಿದೆ.

ಆಗಸ್ಟ್‌ 27ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ಕಾರ್ಯಕ್ರಮವೂ ಅಮೆರಿಕ ವಿರೋಧಿಯಾಗಿಯೇ ಇದೆ. ಅಮೆರಿಕವು ಚೀನಾದ ತೈವಾನ್‌ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುತ್ತಿರುವುದರ ವಿರುದ್ಧ ಚಿತ್ರಪ್ರದರ್ಶನ ನಡೆಯುತ್ತಿದೆ. ತೈವಾನ್‌ ಹೋರಾಟಕ್ಕೆ ಭಾರತವೂ ಅನೇಕ ಬಾರಿ ಬೆಂಬಲ ಸೂಚಿಸಿದೆ. ಹೀಗಾಗಿ ಈ ಕಾರ್ಯಕ್ರಮವು ನೇರವಾಗಿ ಅಮೆರಿಕ ವಿರೋಧಿಯಾಗಿದ್ದರೂ, ಪರೋಕ್ಷವಾಗಿ ಭಾರತದ ವಿದೇಶಾಂಗ ನೀತಿಗೂ ವಿರುದ್ಧವಾಗಿದೆ ಎಂದು ಅರ್ಥೈಸಲಾಗುತ್ತಿದೆ.

2004ರ ಕಾರ್ಯಕ್ರಮದಲ್ಲಿ ಕಾಗೋಡು ತಿಮ್ಮಪ್ಪ ಹಾಗೂ ಎಂ.ವಿ. ರಾಜಶೇಖರನ್‌

ಅನೇಕ ಸಂದರ್ಭಗಳಲ್ಲಿ ಇಂಡೋ-ಚೀನಾ ರೆಂಡ್‌ಷಿಪ್‌ ಅಸೋಸಿಯೇಷನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕರ್ನಾಟಕದ ಪ್ರಮುಖ ರಾಜಕಾರಣಿಗಳು ಹಾಗೂ ಆಹ್ವಾನ ಪತ್ರಿಕೆ

ದೇಶ ವಿದೇಶಗಳಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಆಡಳಿತಕ್ಕೆ ಅಧಿಕೃತತೆ ಒದಗಿಸಿಕೊಡುವುದು ಈ ಸಂಸ್ಥೆಯ ಉದ್ದೇಶ. ಆಯಾ ದೇಶದ ಪ್ರಮುಖ ರಾಜಕೀಯ, ಸಾಂಸ್ಕೃತಿಕ ನಾಯಕರ ಗಮನ ಸೆಳೆಯುವುದು. ಉಚಿತವಾಗಿ ಕ್ಯುರೇಟೆಡ್ ಚೀನಾ ಪ್ರವಾಸ ಆಯೋಜಿಸುವುದು. ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಆಡಳಿತದಲ್ಲಿನ ದಕ್ಷತೆ, ಶಿಸ್ತು, ಅದರಿಂದ ದೇಶದ ಕೃಷಿ, ಕೈಗಾರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಅಗಾಧ ಸುಧಾರಣೆಗಳನ್ನು ಪ್ರವಾಸಿಗರ ಮನಸ್ಸಿನಲ್ಲಿ ಬಿತ್ತುವುದು. ಭಾರತದಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತ-ಚೀನ ಪಾರಂಪರಿಕ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಹೊಗಳುವುದು ಇದರ ಉದ್ದೇಶ.

2001ರಲ್ಲಿ ಈ ರೀತಿಯ ಕರ್ನಾಟಕದ ನಿಯೋಗದಲ್ಲಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಮೋಹನ್ ಕೊಂಡಜ್ಜಿ, ಸಿ. ಭೈರೇಗೌಡ ಮುಂತಾದವರು ತೆರಳಿದ್ದರು. ಇದೀಗ ಅಖಿಲ ಭಾರತ ಪಟ್ಟದ ಐಸಿಎಎಫ್‌ಗೆ ಕರ್ನಾಟಕದವರೇ ಆದ ಹಿರಿಯ ರಾಜಕಾರಣಿ ಪಿ.ಜಿ.ಆರ್. ಸಿಂಧ್ಯಾ ಅಧ್ಯಕ್ಷರು. ಕರ್ನಾಟಕ ಶಾಖೆಗೆ ಕೋಲಾರ ಜೆಡಿಎಸ್‌ ಶಾಸಕ ಕೆ. ಶ್ರೀನಿವಾಸ ಗೌಡ ಅಧ್ಯಕ್ಷರು. 2020ರ ಜ.19ಕ್ಕೆ ಕ್ಯಾಪಿಟಲ್ ಹೋಟೆಲ್‌ನಲ್ಲಿ ಐಸಿಎಫ್‌ಎನ 70ನೇ ವರ್ಷದ ಕಾರ್ಯಕ್ರಮ ನಡೆದಿತ್ತು.

ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಮಂತ್ರಿ ಎಂ.ವಿ. ರಾಜಶೇಖರನ್ ಅವರು ಸೇರಿ ದೇಶದ ಗಣ್ಯ ರಾಜಕಾರಣಿಗಳನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಚೀನಾ-ಭಾರತ ಸಂಬಂಧಗಳ ಬಗ್ಗೆ ಮೃದುಧೋರಣೆ ಮೂಡಿಸುವ ಕೆಲಸ ಆಗಿದೆ. ಇದೇ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ 2004ರಲ್ಲಿ ನಡೆದ ಐಸಿಎಫ್‌ಎ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಅಂದಿನ ಕೇಂದ್ರ ಸಚಿವ ದಿವಂಗತ ಎಂ.ವಿ. ರಾಜಶೇಖರನ್ ಅವರು, ಚೀನಾದ ಇತ್ತೀಚಿನ ಭೇಟಿಯಿಂದ ತಮ್ಮ ಮೇಲೆ ಬೀರಿದ್ದ ಪ್ರಭಾವವನ್ನು ವರ್ಣಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಸ್ಪೀಕರ್ ಕೃಷ್ಣ ಸಹ ಭಾಗವಹಿಸಿದ್ದರು. ಇಂತಹ ಬಹುತೇಕ ಕಾರ್ಯಕ್ರಮಗಳಿಗೆ ಭಾರತದಲ್ಲಿರುವ ಚೀನಾ ರಾಯಭಾರಿ ಆಗಮಿಸುತ್ತಾರೆ, ಚೀನಾದ ಸಾಧನೆಗಳನ್ನು ವಿವರಿಸುತ್ತಾರೆ.

ಭಾನುವಾರದ ಕಾರ್ಯಕ್ರಮದ ಆಹ್ವಾನ ಪತ್ರಿಕೆ
Exit mobile version