ಚಾಮರಾಜಪೇಟೆ: ಈದ್ಗಾ ಮೈದಾನ ವಿವಾದ (Idga Maidan) ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಮೈದಾನ ಗಲಾಟೆ ಮುಗಿಯಿತು ಎನ್ನುವಾಗಲೇ ಮೈದಾನದಲ್ಲಿರುವ ಪ್ರಾರ್ಥನಾ ಗೋಡೆ ತೆರವಿಗೆ ಒತ್ತಾಯ ಕೇಳಿ ಬಂದಿದೆ.
ಚಾಮರಾಜಪೇಟೆಯ ಮೈದಾನವನ್ನು ಬಿಬಿಎಂಪಿ ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಿಸಿದೆ. ಇದರ ಬೆನ್ನಲ್ಲೇ ಈಗ ಹೊಸದೊಂದು ಗೊಂದಲ ಸೃಷ್ಟಿಯಾಗಿದೆ. ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಮುಸ್ಲಿಮರು ಪ್ರಾರ್ಥನಾ ಗೋಡೆ ನಿರ್ಮಿಸಿಕೊಂಡಿದ್ದು, ಇದನ್ನು ಕೂಡಲೇ ತೆರವು ಮಾಡಬೇಕೆಂಬ ಕೂಗು ಕೇಳಿ ಬಂದಿದೆ.
ಬಿಬಿಎಂಪಿ ಹಾಗೂ ಸರ್ಕಾರಕ್ಕೆ 2022ರ ಡಿಸೆಂಬರ್‌ವರೆಗೂ ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಅವರು ಗೋಡೆ ತೆರವು ಮಾಡದಿದ್ದಲ್ಲಿ, ವಿಶ್ವ ಸನಾತನ ಪರಿಷತ್ ಗೋಡೆಯನ್ನು ಉರುಳಿಸುವುದಾಗಿ ಎಚ್ಚರಿಕೆ ನೀಡಿದೆ.
ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ಪ್ರತಿಕ್ರಿಯಿಸಿದ್ದು, ಹಿಂದು ಧಾರ್ಮಿಕ ಆಚರಣೆಗೆ ಈದ್ಗಾ ಗೋಡೆ ಅಡ್ಡಿಯಾಗುತ್ತದೆ. ಬೇರೆಡೆಗೆ ಸ್ಥಳಾಂತರಕ್ಕೆ ಜಾಗ ಇರುವಾಗ ಈ ಗೋಡೆ ಏಕೆ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕಾನೂನು ಸಮರ ಮಾಡಿ ನಾವೇ ಗೋಡೆಯನ್ನು ಉರುಳಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ | ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ: ಬಿಬಿಎಂಪಿ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಆರ್ಡರ್
ಮುಂದುವರಿದ ಖಾಕಿ ಕಣ್ಗಾವಲು
ಮೈದಾನ ವಿಚಾರಕ್ಕೆ ಮುಸ್ಲಿಂ ಸಮುದಾಯವರು ಪ್ರತಿಭಟನೆ ಮಾಡುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಸೋಮವಾರವು ಚಾಮರಾಜಪೇಟೆ ಮೈದಾನಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೆಎಸ್ಆರ್‌ಪಿ ತುಕಡಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಒಡೆಯುವವರ ಕೈಯಲ್ಲಿ ಎಂದಿಗೂ ದೇಶ ಕಟ್ಟಲು ಆಗುವುದಿಲ್ಲ; ಮುಸ್ಲಿಂ ಮುಖಂಡರ ಕಿಡಿ
ಚಾಮರಾಜಪೇಟೆ ಮೈದಾನದಲ್ಲಿರುವ ಪ್ರಾರ್ಥನಾ ಗೋಡೆ ಕೆಡವಲು ಹಿಂದು ಪರ ಸಂಘಟನೆಗಳ ಆಗ್ರಹ ವಿಚಾರವಾಗಿ ಮುಸ್ಲಿಂ ಮುಖಂಡ ಮಹಮ್ಮದ್ ಖಾಲೀದ್ ಕಿಡಿಕಾರಿದ್ದಾರೆ. ಹಿಂದುಪರ ಸಂಘಟನೆಗಳಿಗೆ ಕೆಡವೋದು ಬಿಟ್ಟರೆ, ಕಟ್ಟುವುದು ಗೊತ್ತಿಲ್ಲ. ಅವರು ಎಂದಿಗೂ ಕಟ್ಟುವ ಮಾತನ್ನು ಆಡುವುದಿಲ್ಲ. ಚಾಮರಾಜಪೇಟೆಯ ಈದ್ಗಾ ಗೋಡೆಗೆ ನೂರಾರು ವರ್ಷಗಳ ಇತಿಹಾಸವಿದೆ. ಗೋಡೆ ಉರುಳಿಸುವುದರಿಂದ ಅವರಿಗೆ ಏನು ಸಿಗುತ್ತದೆ. ಮೈದಾನ ಹಿಂದುಗಳ ಪಾಲಾಗಲಿ ಪರವಾಗಿಲ್ಲ. ಆದರೆ ಕುರುಹುಗಳನ್ನು ನಾಶ ಮಾಡಬೇಡಿ ಎಂದಿದ್ದಾರೆ. ಮನುಷ್ಯ ಇತಿಮಿತಿಗಳನ್ನು ಇಟ್ಟುಕೊಳ್ಳಬಹುದು, ಆದರೆ ನಿರ್ಜೀವ, ಪ್ರಾಚ್ಯ ಕಟ್ಟಡಗಳ ಕೆಡವಿ ಏನು ಸಾಧನೆ ಮಾಡಲು ಹೊರಟಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ | ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಭದ್ರತೆ, ಮತ್ತೆ ಕೋರ್ಟಿಗೆ ಹೋಗಲು ವಕ್ಫ್ ಬೋರ್ಡ್ ಸಿದ್ಧತೆ