ಮೈಸೂರು: ಎಮ್ಮೆ, ಕೋಣಗಳನ್ನು ಕಡಿದು ಹಾಕುವುದಾದರೆ, ಹಸುಗಳನ್ನು ಏಕೆ ಕಡಿಯಬಾರದು? ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿಕೆ ನೀಡಿದ್ದಾರೆ. ಗೋ ಹತ್ಯೆ (Cow slaughter) ನಿಷೇಧ ಕಾಯ್ದೆ ರದ್ದುಗೊಳಿಸುವ ವಿಚಾರ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್, ನನ್ನ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ. ಈ ಪೈಕಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ತುಂಬಾ ಕಷ್ಟ ಪಡಬೇಕಾಯಿತು. 25 ಮಂದಿ ಬಂದರೂ ಸತ್ತ ಹಸುವಿನ ಮೃತದೇಹ ಎತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ಜೆಸಿಬಿ ತರಿಸಿ ಮೃತ ಹಸುವನ್ನು ಎತ್ತಿಸಿ ಗುಂಡಿ ತೋಡಿ ಹೂಳಬೇಕಾಯಿತು. ಹೀಗಾಗಿ ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Electricity bill: ಫ್ರೀ ಕರೆಂಟ್ ಬೆನ್ನಲ್ಲೆ ಜನತೆಗೆ ವಿದ್ಯುತ್ ಬಿಲ್ ಶಾಕ್; ಪ್ರತಿ ಯುನಿಟ್ ದರ ಏರಿಸಿದ ಕೆಇಆರ್‌ಸಿ!
ಅಮುಲ್‌ನಿಂದ ನಂದಿನಿಗೆ ತೊಂದರೆ ಆಗಿಲ್ಲ
ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ. ರಾಜ್ಯಕ್ಕೆ ಅಮುಲ್ ಬಂದಿಲ್ಲ.
ಅಮುಲ್‌ನಿಂದ ನಂದಿನಿಗೆ ತೊಂದರೆ ಆಗಿಲ್ಲ. ಮುಂದಿನ ದಿನಗಳಲ್ಲಿ ಅಮುಲ್ ಬಂದಾಗ ನೋಡೋಣ. ನಂದಿನಿ ಉತ್ಪನ್ನಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹಸು ದತ್ತು ಯೋಜನೆ ಏನಾಗಿದೆ ಎಂದು ಪರಿಶೀಲಿಸುತ್ತೇವೆ. ಗೋ ಶಾಲೆಗಳ ನಿರ್ವಹಣೆ ಮಾಡಲು ಹಣದ ಕೊರತೆಯಿಲ್ಲ. ಆದರೆ, ನಿರ್ವಹಣೆ ಸರಿಯಾಗಿ ಆಗಿಲ್ಲ. ಮುಂದೆ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಸಚಿವ ಕೆ. ವೆಂಕಟೇಶ್ ಹೇಳಿದರು.
ದೇವರಾಜ ಅರಸು, ಸಿದ್ದರಾಮಯ್ಯ ಎರಡು ಬಾರಿ ಸಿಎಂ
ಮಂತ್ರಿಯಾದ ಬಳಿಕ ಮೊದಲ ಬಾರಿ ಇಂದು ಮೈಸೂರಿಗೆ ಆಗಮಿಸಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮೈಸೂರು, ಚಾಮರಾಜನಗರ ಜಿಲ್ಲೆಯ ಜನರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮೈಸೂರು ರಾಜಕೀಯವಾಗಿ ಮಹತ್ವ ಪಡೆದುಕೊಂಡಿರುವ ಜಿಲ್ಲೆಯಾಗಿದೆ. ಮೈಸೂರಿನಲ್ಲಿ ರಾಜರು ಆಳ್ವಿಕೆ ಮಾಡಿದ್ದಾರೆ. ದೇವರಾಜ ಅರಸು, ಸಿದ್ದರಾಮಯ್ಯ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಇದು ಮೈಸೂರು ಜಿಲ್ಲೆಯ ಜನರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಕೆ. ವೆಂಕಟೇಶ್ ಹೇಳಿದರು.
ಇದನ್ನೂ ಓದಿ: ಕಳೆದ ಲೋಕಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದು ನಾವೇ: ಶಾಸಕ ನರೇಂದ್ರಸ್ವಾಮಿ
ಸಿದ್ದರಾಮಯ್ಯ ಸಂಪುಟದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗಿದೆ. 2018ರ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಜನರು ಬಹಳ ಎಚ್ಚರಿಕೆಯಿಂದ ಮತ ನೀಡಿದ್ದಾರೆ ಎಂದು ಸಚಿವ ಕೆ. ವೆಂಕಟೇಶ್ ಹೇಳಿದರು.