ರಾಯಚೂರು: ವಸತಿ ಸಚಿವ ವಿ. ಸೋಮಣ್ಣ (V Somanna) ಅವರು ನನ್ನ ಮೇಲೆ ಹೈಕಮಾಂಡ್‌ಗೆ ದೂರು ಕೊಟ್ಟಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಯಾರು ದೂರು ಕೊಟ್ಟಿದ್ದಾರೋ ಗೊತ್ತಿಲ್ಲ. ಒಂದು ವೇಳೆ ದೆಹಲಿ ನಾಯಕರಿಗೆ ದೂರು ಹೋಗಿದೆ ಎಂದಾದರೆ, ಆ ವ್ಯಕ್ತಿ ಅಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಅಂತ ಅರ್ಥ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು.
ರಾಯಚೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶಕ್ಕೆ ಆಗಮಿಸಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಹಿರಿಯ ನಾಯಕರಿದ್ದಾರೆ. ಅವರೇನೇ ಮಾತನಾಡಿದರೂ ಆಶೀರ್ವಾದ ಅಂತ ಸ್ವೀಕರಿಸುತ್ತೇನೆ. ಅದಕ್ಕೇನೂ ಬೇಸರವಿಲ್ಲ ಎಂದ ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: Police Health Issues: ಬೆಂಗಳೂರು ಪೊಲೀಸರಲ್ಲಿ ಹೆಚ್ಚಾಗುತ್ತಿದೆ Low Bp, ಹೃದಯ ಸಮಸ್ಯೆ; ಕಾಳಜಿಗೆ ಮುಂದಾದ ಅಧಿಕಾರಿಗಳು
ಸಿದ್ದರಾಮಯ್ಯ ಬಗ್ಗೆ ಅನುಕಂಪ
ಪಾಪ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇಂಥ ಸ್ಥಿತಿ ಬರಬಾರದಿತ್ತು. ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದುಕೊಂಡಿರುವ ಮಹಾನ್ ನಾಯಕರಿಗೆ ಇಂಥ ಸ್ಥಿತಿ ನಿರ್ಮಾಣ ಆಗಿರೋದು ಹಾಸ್ಯಾಸ್ಪದ ಎಂದು ಕೋಲಾರ ಸ್ಪರ್ಧೆ ವಿಚಾರವಾಗಿ ಎದ್ದಿರುವ ಗೊಂದಲದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯ ಮತ್ತೆ ವರುಣದಲ್ಲಿ ಸ್ಪರ್ಧಿಸಿದರೆ ಅವರ ವಿರುದ್ಧ ಕಣಕ್ಕಿಳಿಯುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ನಮ್ಮ ಶಿಕಾರಿಪುರ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಹೆಸರನ್ನು ಘೋಷಣೆ ಮಾಡಿ ಆಗಿದೆ. ನಾನು ಶಿಕಾರಿಪುರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಂತಿಮವಾಗಿ ನಮ್ಮ ಕೇಂದ್ರ ನಾಯಕರು ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಮುಂದಿನ ಸಿಎಂ ಬಗ್ಗೆ ನಾಯಕರ ತೀರ್ಮಾನ
ಮುಂದಿನ ಸಿಎಂ ವಿಜಯೇಂದ್ರ ಎಂದು ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಶಿವರಾಜ್ ಪಾಟೀಲ್ ಅವರು ಉತ್ಸಾಹದಲ್ಲಿ ಹಾಗೆ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಆ ವ್ಯವಸ್ಥೆ ಇಲ್ಲ. ಯಾರು ಸಿಎಂ ಅನ್ನೋದನ್ನು ಪಕ್ಷದ ಹಿರಿಯ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದು ಉತ್ತರಿಸಿದರು.
ಇದನ್ನೂ ಓದಿ: Siddaramaiah : ಕೋಲಾರದಿಂದಲೇ ಸ್ಪರ್ಧಿಸಿ; ನಾಳೆ ಸಿದ್ದರಾಮಯ್ಯ ಮನೆಗೆ ದಲಿತ, ಒಕ್ಕಲಿಗ, ಮುಸ್ಲಿಂ ನಾಯಕರ ಮುತ್ತಿಗೆ
ಮಾಹಿತಿ ಇಲ್ಲವೆಂದ ವಿಜಯೇಂದ್ರ
ಉರಿಗೌಡ-ನಂಜೇಗೌಡ ಸಿನಿಮಾ ವಿವಾದ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿರಾಕರಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.