ನವದೆಹಲಿ: ಕರ್ನಾಟಕದ ಮಾರುಕಟ್ಟೆಗೆ ಗುಜರಾತ್‌ನ ಅಮುಲ್ ಹಾಲು ಸೇರಿ ಹಲವು ಉತ್ಪನ್ನಗಳು ಕಾಲಿಡುತ್ತಿರುವ, ಕೆಎಂಎಫ್‌ನ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಿ, ಅಮುಲ್ ಉತ್ಪನ್ನಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿವೆ. ನಂದಿನಿ ಉಳಿಸಿ ಎಂಬ ಅಭಿಯಾನವೂ ಆರಂಭವಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಮುಲ್‌ಗೆ ಸವಾಲು ಎಸೆದಿದ್ದಾರೆ. “ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳಿಂದ ಮೈಸೂರು ಪಾಕ್ ತಯಾರಾದರೆ, ಗುಜರಾತ್‌ನಲ್ಲಿ ನಂದಿನಿ ಉತ್ಪನ್ನಗಳಿಂದ ಶ್ರೀಖಂಡ ತಯಾರಿಸಲಾಗುತ್ತದೆ” ಎಂದು ಹೇಳಿದ್ದಾರೆ.
ಇಂಡಿಯಾ ಟುಡೇ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮುಲ್ ಹಾಗೂ ನಂದಿನಿ ವಿಚಾರಕ್ಕೆ ಬಂದಾಗ ಅಮುಲ್‌ಗೆ ಸವಾಲು ಹಾಕಿದರು. “ನಂದಿನಿಯು ಶೀಘ್ರದಲ್ಲಿಯೇ ಅಮುಲ್‌ಅನ್ನು ಹಿಮ್ಮೆಟ್ಟಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. “ನಾನು ಇಷ್ಟೊಂದು ವಿಶ್ವಾಸದಿಂದ ಹೇಳುತ್ತಿದ್ದೇನೆ. ನಂದಿನಿಯು ಅಮುಲ್‌ಅನ್ನು ಸೋಲಿಸುತ್ತದೆ. ನಾನು ಹೀಗೆ ಹೇಳುತ್ತಿರುವ ಕುರಿತು ಯಾರೂ ಮಾತನಾಡುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂದಿನಿ ಹಾಲಿನ ಉತ್ಪಾದನೆ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. “ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದಲ್ಲಿ 64 ಲಕ್ಷ ಲೀಟರ್ ಹಾಲಿನ ಉತ್ಪಾದನೆಯಾಗುತ್ತಿತ್ತು. ಆದರೆ, ನನ್ನ ಅವಧಿಯಲ್ಲಿ ಇದು 84 ಲಕ್ಷ ಲೀಟರ್‌ಗೆ ತಲುಪಿದೆ. ಹಾಗಾಗಿಯೇ, ನಾವು ಅಮುಲ್‌ಅನ್ನು ಹಿಮ್ಮೆಟ್ಟಿಸುತ್ತೇವೆ ಎಂದು ವಿಶ್ವಾಸದಿಂದ ಹೇಳುತ್ತಿದ್ದೇನೆ. ಅಮುಲ್ ನಮ್ಮ ಮೈಸೂರು ಪಾಕ್ ತಯಾರಿಸಿದರೆ, ನಂದಿನಿ ಉತ್ಪನ್ನದಿಂದ ಗುಜರಾತ್‌ನ ಶ್ರೀಖಂಡ ತಯಾರಿಸುತ್ತೇವೆ. ನಾವು ಸುಮ್ಮನೆ ಕೂರುವವರಲ್ಲ” ಎಂದು ಹೇಳಿದರು.
ಕರ್ನಾಟಕದಲ್ಲಿ ಅಮುಲ್ ನಿಷೇಧ ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ
ಕರ್ನಾಟಕದಲ್ಲಿ ನಂದಿನಿಯನ್ನು ಅಮುಲ್ ನುಂಗಿ ಹಾಕುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ಇದೇ ಕಾರ್ಯಕ್ರಮದಲ್ಲಿ ಅಮುಲ್ ಕುರಿತು ಮಾತನಾಡಿದ್ದಾರೆ. ಹಾಗೆಯೇ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಅಮುಲ್ ಉತ್ಪನ್ನಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ, ನಾವು ನಂದಿನಿ ಉತ್ಪನ್ನಗಳನ್ನೇ ಬಳಸಿ ಎಂಬುದಾಗಿ ಆಂದೋಲನ ಮಾಡುತ್ತೇವೆ ಎಂದರು. ಸಿದ್ದರಾಮಯ್ಯನವರ ನಿಲುವಿನ ಬಗ್ಗೆ ಈಗ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: Rahul Gandhi: ನಂದಿನಿ ಬೆಸ್ಟ್ ಅಂದ್ರು ರಾಹುಲ್; ಕಾಲೆಳೆದರು ಅಣ್ಣಾಮಲೈ, ತೇಜಸ್ವಿ ಸೂರ್ಯ!