ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಗೆ (Karnataka Election 2023) ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ವಾಕ್ಸಮರಗಳು, ಆರೋಪ-ಪ್ರತ್ಯಾರೋಪಗಳು ಸಾಕಷ್ಟು ಕೇಳಿಬರುತ್ತಿವೆ. ಇನ್ನು ಪಕ್ಷಗಳ ಪ್ರಣಾಳಿಕೆಗಳೂ ಬಿಡುಗಡೆಯಾಗಿದ್ದು, ಆ ಮೂಲಕವೂ ಮತಬೇಟೆಗೆ ಅಣಿಯಾಗಲಾಗಿದೆ. ಈ ನಡುವೆ ಕಾಂಗ್ರೆಸ್ ಮಂಗಳವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗುವ ಹಿಂದು ಸಂಘಟನೆಗಳನ್ನು (ಬಜರಂಗದಳ ಸಹಿತ) ನಿಷೇಧಿಸುವುದಾಗಿ ಉಲ್ಲೇಖಿಸಿರುವುದಕ್ಕೆ ರಾಜ್ಯಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈಗ ಮೂಡಿಗೆರೆ ತಾಲೂಕಿನ ಗುಡ್ಡಟ್ಟಿ ಗ್ರಾಮದ ಮನೆ ಮುಂದೆ ಬಜರಂಗದಳ ಕಾರ್ಯಕರ್ತರೊಬ್ಬರು ಹಾಕಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. “ವೋಟು ಕೇಳೋಕೆ ಬಂದರೆ ನಾಯಿ ಬಿಡ್ತೀನಿ” ಎಂದು ಬರೆಯುವ ಮೂಲಕ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಬಜರಂಗದಳವನ್ನು ನಿಷೇಧ ಮಾಡುವ ಕಾಂಗ್ರೆಸ್‌ನವರೇ ನೀವು ಬಜರಂಗದಳದವರ ಮನೆ ಮುಂದೆ ಬಂದು ಮತ ಕೇಳಬೇಡಿ. ಕಾಂಗ್ರೆಸ್ಸಿಗರಿಗೆ ಮತ ಕೇಳಲು ಅವಕಾಶವಿಲ್ಲ ಎಂದು ಬಜರಂಗದಳ ಕಾರ್ಯಕರ್ತ ಅರುಣ್ ಎಂಬುವವರು ತಮ್ಮ ಮನೆ ಮುಂದೆ ಪೋಸ್ಟರ್ ಹಾಕಿದ್ದಾರೆ.
ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್ ಮಾಡಿ: ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಸವಾಲು
ಕಾಂಗ್ರೆಸ್ ಈ ಹಿಂದೆ ಮೂರು ಬಾರಿ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿತ್ತು. ಆದರೆ, ಇವತ್ತು ಜಗತ್ತಿನ ಅತಿ ದೊಡ್ಡ ಸಂಘಟನೆ ಆರ್‌ಎಸ್‌ಎಸ್ ಆಗಿದೆ. ಆರ್‌ಎಸ್‌ಎಸ್ ವಿವಿಧ ವಿಭಾಗ ಕೆಲಸ ಮಾಡುತ್ತಿದೆ. ನಿಮ್ಮ ಅಜೆಂಡಾ ಹಿಂದುಗಳ ಹತ್ಯೆ, ಬಾಂಬ್ ಬ್ಲಾಸ್ಟ್, ಹಿಂದು ಯುವತಿಯರನ್ನು ಲವ್ ಜಿಹಾದ್ ಮಾಡುವುದಾಗಿದೆ. ಈ ರೀತಿ ಮಾಡುವವರನ್ನು ಬ್ಯಾನ್ ಮಾಡಲು ನಿಮಗೆ ಆಗುವುದಿಲ್ಲ. ನಿಮಗೆ ತಾಕತ್ತು ಇದ್ದರೆ ಬಜರಂಗದಳವನ್ನು ಬ್ಯಾನ್ ಮಾಡಿ ತೋರಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: Congress Manifesto : ದ್ವೇಷ ಬಿತ್ತಿದರೆ ಬಜರಂಗ ದಳ ನಿಷೇಧ; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಚ್ಚರಿಕೆ
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಜರಂಗದಳ ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆಯಾಗಿದೆ. ದೇಶ ವಿರೋಧಿ ಸಂಘಟನೆ ಅಲ್ಲ. ನೀವು ಅಧಿಕಾರಕ್ಕೆ ಬಂದರೆ 10 ಸಾವಿರ ಕೋಟಿ ಮುಸ್ಲಿಮರಿಗೆ ಮೀಸಲಿಡುವುದಾಗಿ ಹೇಳಿದ್ದೀರಿ. ಗೋಹತ್ಯೆ ಕಾಯ್ದೆಯನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದೀರಿ. ಮತಾಂತರ ಕಾಯ್ದೆ ವಾಪಸ್ ಪಡೆಯುತ್ತೇನೆ ಎಂದು ಹೇಳುತ್ತೀರಿ. ನಾವು ತಾಯಿ ಎದೆ ಹಾಲು ಇಲ್ಲದಾಗ ಗೋ ಹಾಲನ್ನು ಕುಡಿಯುತ್ತೇವೆ. ಆದರೆ, ಗೋ ಹತ್ಯೆ ಕಾಯ್ದೆಯನ್ನೇ ತೆಗೆಯುತ್ತೇವೆ ಎಂದು ಹೇಳುತ್ತೀರಿ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ತಾಕತ್ತು ಇದ್ದರೆ ನನ್ನನ್ನು ಬಂಧಿಸಿ
ಕೇವಲ ಮುಸ್ಲಿಂ ಮತಗಳಲ್ಲಿ ಗೆದ್ದು ಬರುತ್ತೀರಾ? ಕಾಂಗ್ರೆಸ್‌ಗೆ ಆ ತಾಕತ್ತು ಇದೆಯಾ? ಈ ಪ್ರಣಾಳಿಕೆಯಲ್ಲಿ ಕೊಟ್ಟಿರೋದು ಕೇವಲ ಒಂದು ಧರ್ಮದ ಓಲೈಕೆ ಮಾಡಲು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ನೀವು ಅವರನ್ನೇ ಓಲೈಕೆ ಮಾಡಿ, ಹಿಂದುಗಳ ಮತ ನಿಮಗೆ ಸಿಗುವುದಿಲ್ಲ. ಮತ್ತೊಮ್ಮೆ ಹೇಳುತ್ತೇನೆ. ತಾಕತ್ತು ಇದ್ದರೆ ನನ್ನನ್ನು ಬಂಧಿಸಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಪಿಎಫ್‌ಐನವರು ಜಮಾತೆ ಇಸ್ಲಾಂ ಜತೆ, ಐಸಿಸ್ ಜತೆ ಸಂಬಂಧ ಇಟ್ಟುಕೊಂಡಿದ್ದರು. ಶಿವಮೊಗ್ಗದಲ್ಲಿ ಎನ್ಐಎ ದಾಳಿ ನಡೆಸಿದಾಗ ಸಿಕ್ಕಿಬಿದ್ದರು. ಅವರೆಲ್ಲರ ಮೇಲೆ ಎನ್ಐಎ ವಿಚಾರಣೆ ನಡೆಸುತ್ತಿದೆ. ಯಾರೆಲ್ಲ ಬಾಂಬ್ ಬ್ಲಾಸ್ಟ್‌ನಲ್ಲಿ ಸಿಕ್ಕಿಬಿದ್ದರು. ಅವರೆಲ್ಲ ನಮ್ಮ ಅಣ್ಣ, ತಮ್ಮಂದಿರು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈಗ ದೇಶದ ವಿರುದ್ಧದ ಅಪರಾಧ ಚಟುವಟಿಕೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾರೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದರು.
ಮತ ಬ್ಯಾಂಕ್ ಮಾಡಿಕೊಳ್ಳಲು ಕಾಂಗ್ರೆಸ್ ಹೊರಟಿರುವ ಈ ಎಲ್ಲ ಕೃತ್ಯಗಳಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಾರಣ. ಕರ್ನಾಟಕವನ್ನು ಮಲಪ್ಪುರಂ ಮಾಡಲು ಬಿಡೋದಿಲ್ಲ. ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು. ಅದು ಹೇಗೆ ಬಜರಂಗದಳವನ್ನು ಬ್ಯಾನ್ ಮಾಡುತ್ತಾರೋ ನಾವೂ ನೋಡುತ್ತೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಇದನ್ನೂ ಓದಿ: Karnataka Election: ಗೆದ್ದ ಕಡೆ ಅಭಿವೃದ್ಧಿ ಮಾಡದೇ ಇದ್ದಿದ್ದಕ್ಕೆ ಸಿದ್ದರಾಮಯ್ಯರಿಂದ ಕ್ಷೇತ್ರ ಬದಲಾವಣೆ: ಅಮಿತ್ ಶಾ
ಕಾಂಗ್ರೆಸ್‌ಗೂ ಈಗ ವಿನಾಶ ಕಾಲ ಬಂದಿದೆ
ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ಗಾಧೆ ಮಾತಿದೆ. ವಿನಾಶ ಬಂದಾಗ ಬುದ್ಧಿ ಹೊಳೆಯಲ್ಲ, ವಿಪರೀತವಾಗಿ ಯೋಚನೆ ಮಾಡ್ತಾರೆ. ಕಾಂಗ್ರೆಸ್‌ಗೂ ಈಗ ವಿನಾಶ ಕಾಲ ಬಂದಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ, ಪಿಎಫ್‌ಐ ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ಪಿಎಫ್‌ಐ ಅನ್ನು ಬ್ಯಾನ್ ಮಾಡಲಾಗಿದೆ. ಪಿಎಫ್‌ಐ ಬಾಂಬ್ ಬ್ಲಾಸ್ಟ್ ಮಾಡಿದೆ. ಆದರೆ, ಇಂದು ಕಾಂಗ್ರೆಸ್ ಪಿಎಫ್‌ಐ ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಈಗಾಗಲೇ ಬ್ಯಾನ್ ಮಾಡಲಾಗಿದೆ. ಈಗ ಅವರ ಉದ್ದೇಶ ಬಜರಂಗದಳವನ್ನು ಬ್ಯಾನ್ ಮಾಡಬೇಕು ಎಂಬುದಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.