Site icon Vistara News

Constitution and National Unity: ಸಂವಿಧಾನಕ್ಕೆ ಧಕ್ಕೆಯಾದ್ರೆ ದೇಶದಲ್ಲಿ ಸರ್ವಾಧಿಕಾರಿ ಆಡಳಿತ: ಮಲ್ಲಿಕಾರ್ಜುನ ಖರ್ಗೆ

Constitution and National Unity Conference

ಬೆಂಗಳೂರು: ಪ್ರಜಾಪ್ರಭುತ್ವ ಉಳಿದರೆ ದೇಶ ಸಮೃದ್ಧಿಯಾಗಿರುತ್ತದೆ. ಸಂವಿಧಾನದ ಆಶಯಗಳನ್ನು ಇಟ್ಟುಕೊಂಡು ಕೆಲಸ ‌ಮಾಡುವ ಸರ್ಕಾರ ಕೇಂದ್ರದಲ್ಲಿ ಇಲ್ಲ. ಸಂವಿಧಾನ (Constitution and National Unity) ಬದಲಾವಣೆ ಮಾಡಬೇಕು ಎಂದು ಸಾಕಷ್ಟು ಜನ ಪ್ರಯತ್ನ ಮಾಡುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ನೀವು ಗಟ್ಟಿಯಾಗಿ, ಒಗ್ಗಟಾಗಿ ನಿಲ್ಲದೆ ಹೋದರೆ, ಸಂವಿಧಾನಕ್ಕೆ ಧಕ್ಕೆ ಆದರೆ, ಮುಂದೆ ಸರ್ವಾಧಿಕಾರಿ ಆಡಳಿತ ಬರಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದ ಸಮಾರೋಪ (Constitution and National Unity Conference) ಸಮಾರಂಭದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮ ಬಹಳ ಮಹತ್ವದ್ದು, ಸಂವಿಧಾನ ಉಳಿದರೆ ದೇಶದಲ್ಲಿ ಐಕ್ಯತೆ ಉಳಿಯುತ್ತದೆ ಎಂದರು.

ಇಡೀ ಪ್ರಪಂಚದಲ್ಲಿ ಅಂಬೇಡ್ಕರ್ ಬರೆದ ಸಂವಿಧಾನ ಉತ್ತಮವಾಗಿದೆ. ಒಬ್ಬರಿಗೆ ಒಂದು ಮತ, ಒಂದು ಬೆಲೆ ಕೊಟ್ಟಿದ್ದು ಅಂಬೇಡ್ಕರ್. ಗಂಡು‌ ಮಕ್ಕಳಿಗೆ ಎಷ್ಟು ಸ್ವಾತಂತ್ರ್ಯ ಇದೆಯೋ ಅಷ್ಟೇ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೂ ಇರಬೇಕು. ಮೊದಲು‌ ಮಹಿಳೆಯರಿಗೆ ಮತದಾನ ಹಕ್ಕು ಇರಲಿಲ್ಲ. ಆದರೆ ಅಂಬೇಡ್ಕರ್, ನೆಹರು ಅವರು ಮತದಾನ ಹಕ್ಕು ಎಲ್ಲರಿಗೂ ಇರಬೇಕು ಎಂದು ಮತದಾನದ ಹಕ್ಕು ನೀಡಿದರು. ಆದರೆ, ಕೆಲ ಜನ ತಮ್ಮದೆ ತತ್ವ ಹೇಳಿ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | Raja Venkatappa Nayaka: ಶಾಸಕ ರಾಜ ವೆಂಕಟಪ್ಪ ನಾಯಕ ನಿಧನಕ್ಕೆ ಸಿದ್ದರಾಮಯ್ಯ, ಖರ್ಗೆ, ಎಚ್‌ಡಿಕೆ ಸೇರಿ ಗಣ್ಯರ ಸಂತಾಪ

ಎಲ್ಲಿ ವಿದ್ಯಾವಂತರು ತಮ್ಮ ಹಕ್ಕಿಗೆ ಹೋರಾಟ ಮಾಡಿದ್ದಾರೋ ಅಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಕರ್ನಾಟಕ, ಮಣಿಪುರ, ಗೋವಾ, ಉತ್ತರಾಖಂಡ್‌ನಲ್ಲಿ ಶಾಸಕರ ಖರೀದಿ ನಡೆಯಿತು. ಇದು ಪ್ರಜಾಪ್ರಭುತ್ವದ ಸಂವಿಧಾನ ಪ್ರಕಾರ ಸರಿಯೇ ಎಂಬುವುದನ್ನು ಮೋದಿ ಹೇಳಬೇಕು. ಎಲೆಕ್ಷನ್ ರೂಲ್ಸ್ ಪ್ರಕಾರ ಆರಿಸಿ‌ ಬರೋವವರನ್ನು ನೀವು ಕರೆದುಕೊಳ್ಳುತ್ತಿದ್ದೀರಾ? ಇದೇ ಚಟ ಮುಂದುವರಿದ್ರೆ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಬರುತ್ತೆ ಎಂದು ಹೇಳಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಒಪ್ಪಿಸುವಾಗ, ಅನೇಕ ಬಾರಿ ಸ್ವಾತಂತ್ರ್ಯ ಬಂದಾಗ ಕಳೆದುಕೊಂಡಿದ್ದೇವೆ. ಈ ಬಾರಿ ಕಳೆದುಕೊಂಡರೆ‌ ಮತ್ತೆ ಸಿಗಲ್ಲಾ, ನಮ್ಮ ಕೊನೆ ರಕ್ತದ ಹನಿ ಇರುವವರಿಗೂ ದೇಶದ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕು ಎಂದಿದ್ದರು. ಆದರೆ, ಮೋದಿ ರಕ್ತ ಹೀರುತ್ತಿದ್ದಾರೆ. ನಮ್ಮ ಗ್ಯಾರಂಟಿ ಇದೆ, ನಿಮ್ಮದು ಯಾವ ಗ್ಯಾರಂಟಿ ಇದೆ. ಟ್ಯಾಕ್ಸ್ ನಾವು ಕಟ್ಟುತ್ತೇವೆ, ನಿಮ್ಮದು ಯಾವುದು ಗ್ಯಾರಂಟಿ? ಒಬ್ಬ ವ್ಯಕ್ತಿ ಈ ರೀತಿ ಹೇಳುತ್ತಾನೆ ಎಂದರೆ ದೇಶವನ್ನು ಸರ್ವಾಧಿಕಾರದ ಕಡೆ ಒಯ್ಯುತ್ತಾನೆ ಎಂದರ್ಥ ಎಂದರು.

ದೇವರ ಪೂಜೆ ಮಾಡುವವರು ಮಾಡಿಕೊಳ್ಳಿ. ಸಂವಿಧಾನವನ್ನು ರಾಜೇಂದ್ರ ಪ್ರಸಾದ್‌ಗೆ ಒಪ್ಪಿಸಿದಾಗ, ವ್ಯಕ್ತಿ ಪೂಜೆ ಮಾಡಿದರೆ ಪ್ರಜಾಪ್ರಭುತ್ವ ಉಳಿಯಲ್ಲಾ ಎಂದು ಬಾಬಾಸಾಹೇಬ್ ಹೇಳಿದ್ದರು. ಸಂವಿಧಾನ ಇರಲಿಲ್ಲಾ ಎಂದರೆ ಏನಾಗುತ್ತಿತ್ತು. ಅಂಬೇಡ್ಕರ್ ಅಂದರೆ ದಲಿತರಿಗೆ ಸೀಮಿತವೇ? ಇಡೀ ದೇಶದ ಜನಕ್ಕೆ ಮೂಲಭೂತ ಹಕ್ಕುಗಳು ಇವೆ. ಆರ್ಟಿಕಲ್ 14, 19, 30, 33 ಇರುವುದು ಕೇವಲ‌ ದಲಿತರಿಗೆ ಮಾತ್ರವಲ್ಲ, ಎಲ್ಲರಿಗೂ ಇದೆ ಎಂದರು.

ದೇಶದ 140 ಕೋಟಿ ಜನರಿಗೆ ಈ ಸಂವಿಧಾನದಿಂದ ಅನುಕೂಲ ಆಗುತ್ತೆ. ಕೆಲವರಿಗೆ ಬೈಬಲ್, ಕುರಾನ್ ಪ್ರೀತಿ ಇರಬಹುದು. ಆದರೆ, ಎಲ್ಲರನ್ನು ಮನುಷ್ಯರನ್ನಾಗಿ ಮಾಡಿದ್ದು ಈ ಸಂವಿಧಾನ. ದೇಹದಲ್ಲಿ ಕೊನೆ ರಕ್ತದ ಹನಿ ಇರುವವರೆಗೂ ಹೋರಾಟ ಮಾಡಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ನೀವೆಲ್ಲ ಹುಷಾರಾಗಿ ಇರಬೇಕು, ಜಾಗೃತರಾಗಿರಬೇಕು, ಮನೆಮನೆಗೂ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಇಲ್ಲವಾದರೆ ಐದು ಸಾವಿರ ವರ್ಷಗಳ ಹಿಂದಿನ ಜೀವನಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ನಾವು ಗೌರವಿಸಬೇಕು. ಕಾಶ್ಮೀರದಿಂದ ಕನ್ಯಾಕುಮಾರಿ, ತ್ರಿಪುರದಿಂದ ಮಹಾರಾಷ್ಟ್ರದವರೆಗೆ ಹಲವು ಭಾಷೆಗಳನ್ನು ಮಾತನಾಡುತ್ತೇವೆ. ವಿವಿಧ ಸಂಸ್ಕೃತಿ, ಸಂಪ್ರದಾಯಗಳಿವೆ. ಎಲ್ಲವೂ ವಿಭಿನ್ನವಾಗಿವೆ, ವಾತಾವರಣ ಸಹ ವಿಭಿನ್ನವಾಗಿದೆ. ಕಾಶ್ಮೀರದಲ್ಲಿ ಮೈmನ್ ತಾಪಮಾನ ಇದೆ, ಬೆಂಗಳೂರಿನಲ್ಲಿ 32 ಡಿಗ್ರಿ ಸೆ. ಇದೆ. ನಾವು ಎಲ್ಲರೂ ಒಂದಾಗಿದ್ದೇವೆ, ಒಗ್ಗಟ್ಟಿನಿಂದ ದೇಶ ಅಭಿವೃದ್ಧಿ, ಒಗ್ಗಟ್ಟಿನಿಂದ ಹೊಸ ಭಾರತ ನಿರ್ಮಾಣ ಮಾಡಬಹುದು ಎಂದರು.

ಮಹಾನ್‌ ವ್ಯಕ್ತಿ ಅಂಬೇಡ್ಕರ್‌ ಅವರಿಂದ ಸಂವಿಧಾನ ರಚನೆಯಾಗಿದೆ. ನಾವು ಸಂವಿಧಾನ ರಕ್ಷಣೆ ಮಾಡಿಲ್ಲವೆಂದರೆ ದೇಶ ಬಲಿಷ್ಠವಾಗಲ್ಲ. ಧರ್ಮದಿಂದ ದೇಶ ವಿಭಜನೆ ಮಾಡಬಾರದು, ನಾವು ಮುಂದುವರಿಯಬೇಕಾದರೆ ನಾವು ಒಟ್ಟಿಗೆ ಇರಬೇಕು. ಆಡಳಿತ ಯಂತ್ರವನ್ನು ನಾವು ನಾವು ನಂಬುವ ಸ್ಥಿತಿಯಲ್ಲಿ ಇಲ್ಲ. ಕಾಶ್ಮೀರ ಭಾರತದ ಭಾಗಬಾಗಿದೆ. ಮುಂದೆಯೂ ಭಾರತದ ಭಾಗವಾಗಿರಲಿದೆ ಎಂದರು.

ಇದನ್ನೂ ಓದಿ | Basavaraja Rayareddy : ಬಸ್ಸಲ್ಲಿ ಮುಸ್ಲಿಮರು ಮಾತ್ರ ಹೋಗೋದಾ? ಗೃಹಲಕ್ಷ್ಮಿ ಮುಸ್ಲಿಮರಿಗೆ ಮಾತ್ರಾನಾ?: ರಾಯರೆಡ್ಡಿ ಪ್ರಶ್ನೆ

ಸಭಾಧ್ಯಕ್ಷ ಯು.ಟಿ. ಖಾದರ್,‌ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಸಿಪಿಐಎಂ ಮುಖಂಡ ಸೀತಾರಾಮ್ ಯೆಚೋರಿ, ಸಿಪಿಐ ಮುಖಂಡ ಡಿ.ರಾಜಾ, ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಅಜಯ್ ಮಾಕೆನ್, ಸಚಿವ ಎಚ್.‌ಕೆ ಪಾಟೀಲ್, ಕೆ‌.ಎಚ್. ಮುನಿಯಪ್ಪ, ಸಚಿವ ಬೋಸರಾಜು, ಸಲೀಂ ಅಹ್ಮದ್, ಎಸಿ ಶ್ರೀನಿವಾಸ್, ಎಸ್. ಟಿ ಸೋಮಶೇಖರ್‌ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Exit mobile version