ಮೈಸೂರು: ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಲೋಕಾಯುಕ್ತಕ್ಕೆ ಬಲ ತುಂಬುವುದಕ್ಕೆ ವಿರುದ್ಧವಾಗಿವೆ. ಹಾಗಂತ ಸರಕಾರವೇನಾದರೂ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ- ಇದು ಈ ಹಿಂದೆ ಲೋಕಾಯುಕ್ತರಾಗಿ ರಾಜ್ಯವನ್ನು ನಡುಗಿಸಿದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರ ಮಾತು.
ಸರಕಾರಕ್ಕೆ ಈಗ ಮೇಲ್ಮನವಿ ಸಲ್ಲಿಸುವಷ್ಟು ಧೈರ್ಯವಿಲ್ಲ. ಯಾಕೆಂದರೆ, ಚುನಾವಣೆ ಸದ್ಯವೇ ಇದೆ. ಹಾಗಾಗಿ ಹಿಂಬಾಗಿಲ ಮೂಲಕ, ಹಿಂಬಾಲಕರ ಮೂಲಕ ದಾವೆ ಸಲ್ಲಿಸುವ ಸಾಧ್ಯತೆ ಇಲ್ಲದಿಲ್ಲ ಎಂದು ಅವರು ಮೈಸೂರಿನಲ್ಲಿ ಹೇಳಿದರು.
ರಾಜ್ಯದಲ್ಲಿ ಎಸಿಬಿಯನ್ನು ರದ್ದು ಮಾಡಿ, ಅದರ ಅದನ್ನು ಲೋಕಾಯುಕ್ತದೊಳಗೆ ವಿಲೀನಗೊಳಿಸಬೇಕು ಎಂಬ ಹೈಕೋರ್ಟ್ ಆದೇಶದ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ʻʻಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿರುವುದರಿಂಧ ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ. ಯಾಕೆಂದರೆ, ಹಿಂದೆ ಲೋಕಾಯುಕ್ತ ಇದ್ದಾಗ ಸಾಕಷ್ಟು ಪ್ರಕರಣಗಳಲ್ಲಿ ರಾಜಕಾರಣಿಗಳಿಗೂ ಶಿಕ್ಷೆ ಆಗಿತ್ತು. ಎಸಿಬಿ ಬಂದ ಬಳಿಕ ಯಾವೊಬ್ಬ ರಾಜಕಾರಣಿ ಮೇಲೆಯೂ ಅಧಿಕಾರಿಯ ಮೇಲೆಯೂ ಕ್ರಮ ಜರುಗಿಸಲಾಗಿಲ್ಲ.ʼʼ ಎಂದು ನೆನಪಿಸಿದರು.
ʻʻಸರ್ಕಾರಿ ಅಧಿಕಾರಿಗಳ ತನಿಖೆ ಮಾಡಬೇಕಾದರೆ ಸರ್ಕಾರದ ಅನುಮತಿ ಕೇಳಬೇಕು ಎನ್ನುವ ಈಗಿನ ಕಾನೂನು ಸರಿಯಲ್ಲ. ಅದು ಬ್ರಿಟಿಷ್ ಆಡಳಿತದ ಕಾನೂನು. ಬ್ರಿಟಿಷರು ಆಗ ತಮ್ಮ ಪ್ರಾಬಲ್ಯಕ್ಕಾಗಿ ಈ ನಿಯಮ ಜಾರಿಗೆ ತಂದಿದ್ದರು. ಆದರೆ ಈಗ ನಮ್ಮದೇ ಸರ್ಕಾರ ಇರುವಾಗ ಸರ್ಕಾರದ ಅನುಮತಿ ಯಾಕೆ ಬೇಕು? ಸಾಮಾನ್ಯ ಜನರನ್ನು ನೇರವಾಗಿ ತನಿಖೆ ಮಾಡುತ್ತಾರೆ. ಹಾಗಿರುವಾಗ ಅಧಿಕಾರಿಗಳನ್ನು ತನಿಖೆ ಮಾಡಲು ಸರ್ಕಾರದ ಅನುಮತಿ ಏಕೆ?ʼʼ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರಶ್ನಿಸಿದರು.