Site icon Vistara News

HD Kumaraswamy: ಮೋದಿ ಬಯಸಿದ್ರೆ ಮಂತ್ರಿಯಾಗಲು ರೆಡಿ; ಮನದಾಸೆ ತೆರೆದಿಟ್ಟ ಕುಮಾರಸ್ವಾಮಿ!

HD Kumaraswamy

If Narendra Modi Wants, Ready To Be Minister In New Cabinet; Says HD Kumaraswamy

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ 292 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಳಿಕ ನವದೆಹಲಿಯಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಮಿತ್ರಪಕ್ಷಗಳ (NDA Meeting) ಸಭೆ ನಡೆದಿದೆ. ಸಭೆಯಲ್ಲಿ ಭಾಗವಹಿಸಿದ ಎಲ್ಲ ಪಕ್ಷಗಳ ನಾಯಕರು ನರೇಂದ್ರ ಮೋದಿ (Narendra Modi) ಅವರನ್ನು ಪ್ರಧಾನಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಒಂದು ಸಾಲಿನ ನಿರ್ಣಯಕ್ಕೂ ಅಂಗೀಕಾರ ಹಾಕಿದ್ದಾರೆ. ಇದರೊಂದಿಗೆ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತವಾಗಿದೆ. ಇದರ ಬೆನ್ನಲ್ಲೇ, “ನಾನೂ ಮಂತ್ರಿಯಾಗಲು ರೆಡಿ” ಎಂಬುದಾಗಿ ಎನ್‌ಡಿಎ ಸಭೆಯ ಬಳಿಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಮನದಾಸೆಯನ್ನು ಬಿಚ್ಚಿಟ್ಟಿದ್ದಾರೆ.

ಎನ್‌ಡಿಎ ಸಭೆಯ ಬಳಿಕ ಬೆಂಗಳೂರಿಗೆ ತೆರಳುವ ಮೊದಲು ಎಚ್‌.ಡಿ.ಕುಮಾರಸ್ವಾಮಿ ಅವರು ಮಾತನಾಡಿದರು. “ಎನ್‌ಡಿಎ ಮಿತ್ರಪಕ್ಷಗಳ ಸಭೆ ನಡೆಯಿತು. ನರೇಂದ್ರ ಮೋದಿ ಅವರ ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ. ಹಾಗೊಂದು ವೇಳೆ, ನರೇಂದ್ರ ಮೋದಿ ಅವರು ಬಯಸಿದರೆ ನಾನು ಸಚಿವನಾಗಿ ಕಾರ್ಯನಿರ್ವಹಿಸಲು ಸಿದ್ಧನಿದ್ದೇನೆ” ಎಂಬುದಾಗಿ ಅವರು ಹೇಳಿದರು. ಕರ್ನಾಟಕದಲ್ಲಿ ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಮಾಡಿಕೊಂಡಿರುವುದರಿಂದ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಕೂಡ ಸಹಕಾರಿಯಾಗಿದೆ. ಹಾಗಾಗಿ, ಕುಮಾರಸ್ವಾಮಿ ಅವರಿಗೆ ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ಮೋದಿಗೆ ಎಲ್ಲರ ಬೆಂಬಲ

ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಎಲ್ಲ ಪಕ್ಷಗಳ ನಾಯಕರು ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿದರು. ಮೈತ್ರಿಕೂಟದ ಸರ್ಕಾರ ರಚನೆಗೆ ಕುರಿತು ತೆಗೆದುಕೊಂಡ ಒಂದು ಸಾಲಿನ ನಿರ್ಣಯಕ್ಕೆ ಎಲ್ಲರೂ ಸಹಿ ಹಾಕಿದರು. ಖಾತೆ ಹಂಚಿಕೆ, ಯಾವ ಖಾತೆ ಯಾರಿಗೆ ನೀಡಬೇಕು ಎಂಬುದರ ಕುರಿತು ಆಮೇಲೆ ನೋಡಿಕೊಳ್ಳೋಣ. ಮೊದಲು ಸರ್ಕಾರ ರಚನೆಯಾಗಲಿ ಎಂಬುದಾಗಿ ಎಲ್ಲ ನಾಯಕರು ಮೋದಿ ಅವರಿಗೆ ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ತೆಗೆದುಕೊಂಡ ನಿರ್ಣಯ

‌ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಯಿತು. ತೆಲುಗುದೇಶಂ ಪಕ್ಷದ (TDP), ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಡಿಯ ಜಯಂತ್‌ ಚೌಧರಿ, ಜನಸೇನಾ ಪಕ್ಷದ ಪವನ್‌ ಕಲ್ಯಾಣ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಎಲ್ಲರೂ ಒಗ್ಗೂಡಿ ಸರ್ಕಾರ ರಚಿಸುವುದು, ಒಗ್ಗಟ್ಟಿನಿಂದ ಇರುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Narendra Modi: ಜೂನ್‌ 8 ಅಲ್ಲ, ಜೂನ್‌ 7ರಂದು ಸಂಜೆ 5ಕ್ಕೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ!

Exit mobile version