Site icon Vistara News

National Education Policy: ಎನ್‌ಇಪಿ ರದ್ದು ಮಾಡಿದರೆ ಜನಾಂದೋಲನವಾಗಲಿದೆ ಎಂದ ಬಸವರಾಜ ಬೊಮ್ಮಾಯಿ

Ex Cm Basavaraj Bommai

ಬೆಂಗಳೂರು: ರಾಜ್ಯ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 (National Education Policy-2020) ಅನ್ನು ವಿರೋಧ ಮಾಡುತ್ತಿರುವುದರಲ್ಲಿ ಆಶ್ಚರ್ಯ ಇಲ್ಲ. ಅವರು ರಾಜಕೀಯ ದ್ವೇಷದಿಂದ ವಿರೋಧ ಮಾಡಿದ್ದಾರೆ. ಅಷ್ಟೊಂದು ವಿವಿ ಕುಲಪತಿಗಳನ್ನು ಕೂಡಿಸಿಕೊಂಡು ಯಾವುದೇ ಚರ್ಚೆ ಮಾಡದೇ ನಿರ್ಣಯ ಕೈಗೊಂಡಿದ್ದಾರೆ. ಅದನ್ನು ಕುಲಪತಿಗಳು ಪ್ರಶ್ನೆ ಮಾಡದೇ ಸುಮ್ಮನೇ ಎದ್ದು ಬಂದಿರುವುದು ದುರಂತ. ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಮುಂದಾದರೆ ಜನಾಂದೋಲನ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಪರಿಣಾಮಕಾರಿ ಜಾರಿಗಾಗಿ ಆಯೋಜಿಸಿದ್ದ ಶಿಕ್ಷಣ ತಜ್ಞರ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಎಂದರೆ ಸ್ವಂತ ಚಿಂತನೆ ಅಲ್ಲ, ಶಿಕ್ಷಣ ತಜ್ಞರಿಗೆ ಏನು ಅನಿಸಿದೆ ಅದನ್ನು ಹೇಳಿದ್ದಾರೆ. ಅದನ್ನು ಕೇಳುವ ಮನಸ್ಥಿತಿ ಈ ಸರ್ಕಾರಕ್ಕೆ ಇಲ್ಲ. ಅಂದರೆ ದೇಶಕ್ಕೆ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಅವಶ್ಯಕತೆ ಇದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಇಲ್ಲ. ನಾವು ಯಾಕೆ ಈ ನೀತಿ ಜಾರಿಗೆ ತಂದಿದ್ದೇವೆ ಅಂತ ಪ್ರಶ್ನೆ ಮಾಡಿ. ಈ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಏಕಾಏಕಿ ಬಂದಿದ್ದಲ್ಲ. ಸ್ವಾತಂತ್ರ್ಯ ಬಂದಾಗ ಕೇವಲ ಶೇ.15 ಶಿಕ್ಷಣ ಪಡೆದವರು ಇದ್ದರು. ಅದನ್ನು 130 ಕೋಟಿ ಜನರಿಗೆ ತಲುಪಿಸುವ ಕೆಲಸ ಮಾಡುವುದು ಸಣ್ಣ ವಿಷಯವೇನಲ್ಲ ಎಂದು ಹೇಳಿದರು.

ಇದನ್ನೂ ಓದಿ | Education Policy : SEP ಅಂದರೆ ಸೋನಿಯಾ ಗಾಂಧಿ ಶಿಕ್ಷಣ ನೀತಿಯೇ? ಡಿಕೆಶಿಗೆ ಬಿ.ಸಿ. ನಾಗೇಶ್‌ ಪ್ರಶ್ನೆ

ಶಿಕ್ಷಣ ವ್ಯವಸ್ಥೆಯನ್ನು ಕೇವಲ ಕರ್ನಾಟಕಕ್ಕೆ ಸೀಮಿತ ಮಾಡಬೇಕಾ? ಪ್ರಗತಿಪರರು ಎಂದು ಹೇಳಿ ರಾಜ್ಯವನ್ನು ಹಿಂದೆ ಕಳುಹಿಸುವ ಕೆಲಸ ಮಾಡುತ್ತಿದ್ದೀರಿ, ನಿಮಗೆ ಜನರು ಅಭಿವೃದ್ಧಿ ಮಾಡಲು ಅಧಿಕಾರ ಕೊಟ್ಟಿದ್ದಾರೆ. ರಾಜ್ಯವನ್ನು ಹಿಂದೆ ಕಳುಹಿಸಲು ಅಲ್ಲ. ಅದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇಲ್ಲ‌. ಈ ದೇಶದಲ್ಲಿ ದೊಡ್ಡವರು ತಪ್ಪು ಮಾಡಿದಾಗ ಜನರು ದೊಡ್ಡ ಹೋರಾಟಗಳ ಮೂಲಕ ಬದಲಾವಣೆ ತಂದಿದ್ದಾರೆ. ನೀವು ಅಧಿಕಾರ ಸಿಕ್ಕಿದೆ ಅಂತ ಈ ರೀತಿ ಮಾಡಿದರೆ ಜನ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

ಸರ್ಕಾರ ಕೇವಲ ತಮಗೆ ಮತ ಹಾಕಿದವರನ್ನು ಮಾತ್ರ ನೋಡದಬಾರದು, ಮಕ್ಕಳು, ವಿದ್ಯಾರ್ಥಿಗಳು, ಪ್ರಾಣಿಗಳು, ಸಸ್ಯ ಶಾಮಲೆ ಎಲ್ಲವನ್ನು ನೋಡಬೇಕು. ನೀವು ಬಿಜೆಪಿಯನ್ನು ವಿರೋಧಿಸಿ, ಅದನ್ನು ಬಿಟ್ಡು ವಿದ್ಯಾರ್ಥಿಗಳಿಗೆ ಏಕೆ ಶಿಕ್ಷೆ ಕೊಡುತ್ತೀರಿ, ಸಿದ್ದರಾಮಯ್ಯ 1 ಮತ್ತು ಸಿದ್ದರಾಮಯ್ಯ 2 ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಅವರು ವಿಚಾರ ಮಾಡುವ ಶಕ್ತಿ ಕಳೆದುಕೊಂಡಿದ್ದಾರೊ, ಅಥವಾ ಸುತ್ತಲು ಇರುವವರು ಅವರ ದಾರಿ ತಪ್ಪಿಸುತ್ತಿದ್ದಾರೊ ಗೊತ್ತಿಲ್ಲ. ಶಿಕ್ಷಣ ಎಲ್ಲರಿಗೂ ಏಕ ರೂಪದಲ್ಲಿ ಸಿಗಬೇಕು. ಸಿಬಿಎಸ್‌ಸಿ ಕೇವಲ ಉಳ್ಳವರ ಪಾಲಾಗಿವೆ. ಎಷ್ಟೊ ತಾಲೂಕುಗಳಲ್ಲಿ ವಿಜ್ಞಾನ ಕಾಲೇಜುಗಳಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅದಕ್ಕೆ ಅವಕಾಶ ಇದೆ. ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣ ಅವಕಾಶ ದೊರೆಯುತ್ತದೆ ಎಂದರು.

Politicians who attended the meeting of academicians

ಎಸ್‌ಇಪಿ ಎಂದರೆ ಸೋನಿಯಾಗಾಂಧಿ ಶಿಕ್ಷಣ ನೀತಿ

ಈ ಶಿಕ್ಷಣ ನೀತಿ ಸರಿ ಇಲ್ಲ ಅಂತ ಹೇಳುತ್ತಿದ್ದಾರೆ, ಎನ್‌ಇಪಿ ರದ್ದು ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ ಮಾಡುತ್ತಾರೆ. ಎನ್‌ಇಪಿ ರದ್ದು ಮಾಡುವುದಾದರೆ, ಪರಮೇಶ್ವರ್, ಎಂಬಿ ಪಾಟೀಲ್ ಒಪ್ಪುತ್ತಾರಾ? ಎನ್‌ಇಪಿ ಎಂದರೆ ನಾಗಪುರ್ ಶಿಕ್ಷಣ ನೀತಿ ಅಂತಾರೆ, ಎಸ್‌ಇಪಿ ಎಂದರೆ ಸೋನಿಯಾಗಾಂಧಿ ಎಜುಕೇಶನ್ ಪಾಲಿಸಿನಾ> ಸೋನಿಯಾ ಗಾಂಧಿ ಎಂದರೆ ಇಟಲಿ. ಇಟಲಿ ಎಂದರೆ ಯುರೋಪ್ ಎಜುಕೇಶನ್, ಅಂದರೆ ಮೆಕಾಲೆ ಶಿಕ್ಷಣ ನೀತಿ ಜಾರಿಗೆ ತರುತ್ತೀರಾ ಎಂದು ಪ್ರಶ್ನಿಸಿದರು. ನಿಮ್ಮ ಕೈಯಲ್ಲಿ ಅಧಿಕಾರ ಇದೆ ಅಂತ ಬದಲಾವಣೆ ಮಾಡುವ ಪ್ರಯತ್ನ ಮಾಡಬಹುದು. ಆದರೆ, ಇದರ ವಿರುದ್ದ ಜನಾಂದೋಲ ನಡೆಯಲಿದೆ. ನಮ್ಮ ವಿದ್ಯಾರ್ಥಿಗಳಿಗೆ ಇದರ ಅರಿವಾದರೆ, ದೊಡ್ಡ ಹೋರಾಟ ಮಾಡುತ್ತಾರೆ ಎಂದು ಬಸವ ರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಉದ್ಯೋಗಾಧಾರಿತ, ತಂತ್ರಜ್ಞಾನದ ಬಳಕೆಗೆ ಒತ್ತು

ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಅವರು ಮಾತನಾಡಿ, ಉದ್ಯೋಗ ಹೆಚ್ಚಳಕ್ಕೆ ಈ ನೀತಿ ಸಹಾಯ ಮಾಡುತ್ತದೆ. ಉದ್ಯೋಗಾಧಾರಿತ ಶಿಕ್ಷಣ, ತಂತ್ರಜ್ಞಾನದ ಬಳಕೆಗೆ ಒತ್ತು ನೀಡುತ್ತದೆ. ಎಸ್.ವಿ. ರಂಗನಾಥ್ ಸಮಿತಿ ಶಿಫಾರಸು ಆಧಾರದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ಇದನ್ನು ಆತುರದಲ್ಲಿ ಅನುಷ್ಠಾನ ಮಾಡಲಾಗಿಲ್ಲ. ಎನ್‌ಇಪಿಯಲ್ಲಿ ವರ್ಕ್‌ಲೋಡ್ ಕಡಿಮೆ ಆಗುವುದರಿಂದ ಅತಿಥಿ ಉಪನ್ಯಾಸಕರಿಗೆ ಕೆಲಸ ಹೋಗುತ್ತದೆ ಎನ್ನುವುದು ಸುಳ್ಳು, ಯಾರ ಕೆಲಸವೂ ಹೋಗಲ್ಲ. ಯುಜಿಸಿಯಿಂದ ಇದಕ್ಕೆ ಚೌಕಟ್ಟು ನೀಡಲಾಗಿದೆ. ಬಲವಂತದಿಂದ ಯಾವ ವಿವಿಗೂ ಹೇರುವ ಕೆಲಸ ಆಗಿಲ್ಲ. ಕೇರಳದಲ್ಲೂ ಇದೇ ವ್ಯವಸ್ಥೆಯನ್ನು ಅನುಷ್ಠಾನ ಮಾಡುತ್ತಿದ್ದಾರೆ. ಎನ್‌ಇಪಿ ಎಂದು ಹೊರಗೆ ಹೇಳದಿದ್ದರೂ ಶೇ‌.95 ನಮ್ಮದೇ ಮಾದರಿ ಇದೆ ಎಂದು ತಿಳಿಸಿದರು.

ನೆಹರು ಕಾಲದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿ ಇತ್ತು

ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ ಮಾತನಾಡಿ, ಸಿದ್ದರಾಮಯ್ಯ ಇಂದಿರಾ ಕಾಲದ ಕಾಂಗ್ರೆಸಿಗ ಅಲ್ಲ, ಅವರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಏನು ಎಂದು ಗೊತ್ತಾ? ಈಗಿನ ಕಾಂಗ್ರೆಸ್ಸಿಗರನ್ನು ನೋಡಿದರೆ ಭಯ ಆಗುತ್ತದೆ. ಶಿಕ್ಷಣ ಸಚಿವರು ಇದು ಉತ್ತರ ಭಾರತದ ಪದ್ಧತಿ, ಅದನ್ನು ಹೇರುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುತ್ತಾರೆ. ಅವರ ಮಾತು ಹಾಸ್ಯಾಸ್ಪದವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ನೆಹರು ಕಾಲದಲ್ಲೇ ಇತ್ತು. ನೆಹರು, ಶ್ಯಾಮ್ ಪ್ರಕಾಶ್ ಮುಖರ್ಜಿ ಡಾ.ಬಿ.ಆರ್‌.ಅಂಬೇಡ್ಕರ್ ಅಂತಹ ಘಟಾನುಗಟಿಗಳು ಇದ್ದರು. ಅವರು ಈ ನೀತಿಗೆ ಮಣೆ ಹಾಕಿದ್ದರು. ಆದರೆ, ರಾಷ್ಟ್ರೀಯ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರೀಯ ಶಿಕ್ಷಣ ನೀತಿ ಬೇಡ ಎನ್ನುತ್ತಿದ್ದಾರೆ. ಹಾಗಾದರೆ ನೆಹರು, ಅಂಬೇಡ್ಕರ್ ಅವರನ್ನು ನೀವು ತಿರಸ್ಕಾರ ಮಾಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಇದನ್ನೂ ಓದಿ | HD Kumaraswamy : ಬಿಜೆಪಿ ದೆಹಲಿ ನಾಯಕರನ್ನೇ ಡಿ.ಕೆ. ಶಿವಕುಮಾರ್‌ ಖರೀದಿ ಮಾಡ್ತಾರೆ: ಎಚ್.ಡಿ. ಕುಮಾರಸ್ವಾಮಿ

Politicians who attended the meeting of academicians

ಸರ್ಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಏನು ಗೊತ್ತಿಲ್ಲ

ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, 34 ವರ್ಷದ ನಂತರ 4ನೇ ಶಿಕ್ಷಣ ನೀತಿ ಬಂದಿದೆ. ಕಾಲಕ್ಕೆ ತಕ್ಕಂತೆ ಹೊಸ ವ್ಯವಸ್ಥೆ ರೂಪಿಸಬೇಕಾಗುತ್ತದೆ. ನಮ್ಮ ಜ್ಞಾನದ ಆಧಾರದಲ್ಲಿ ಅವಕಾಶಗಳು ಸಿಗಬೇಕು. ಬಡತನ ಹೋಗಿ ಸಮಾನತೆ ಬರಲು ಶಿಕ್ಷಣ ನೀತಿ ಬೇಕು. ಈ ಶಿಕ್ಷಣ ನೀತಿಯಲ್ಲಿ ಕರ್ನಾಟಕದ ಮಹತ್ವದ ಪಾತ್ರವಿದೆ. ಪ್ರಾರಂಭಿಕ ಸಭೆಗಳಿಗಾಗಿಯೇ ನಾಲ್ಕು ವರ್ಷ ಸಭೆ ನಡೆಸಲಾಗಿದೆ. ಈ ಸಮಯದಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ದದ್ದು ಸಿದ್ದರಾಮಯ್ಯ ಸರ್ಕಾರ. ಸಭೆಯಲ್ಲಿ ಸಚಿವರು, ಅಧಿಕಾರಿಗಳು ಭಾಗವಹಿಸಿದ್ದರು. ಇದ್ಯಾವುದೋ ಇದ್ದಕ್ಕಿದ್ದಂತೆ ಘೋಷಣೆ ಆಗಿದ್ದಲ್ಲ. 2020ರಲ್ಲಿ ಪ್ರಧಾನಿ ಮೋದಿ ಘೋಷಣೆ ಮಾಡಿದರು ಎಂದು ತಿಳಿಸಿದರು.

ಎಸ್.ವಿ.‌ರಂಗನಾಥ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ರೋಡ್‌ಮ್ಯಾಪ್ ಪಡೆಯಲಾಯಿತು. 15 ವರ್ಷದಲ್ಲಿ ಶಿಕ್ಷಣ ನೀತಿ ಅನುಷ್ಠಾನ ಆಗಬೇಕು ಎಂದಿತ್ತು. ಕರ್ನಾಟಕದಲ್ಲಿ 10 ವರ್ಷದಲ್ಲೇ ಅನುಷ್ಠಾನಕ್ಕೆ ಮಾರ್ಗಸೂಚಿ ಕೊಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ಸಭೆ ನಡೆದವು. ಈಗಿನ ಶಿಕ್ಷಣದಲ್ಲಿ ಉದ್ಯೋಗಾರ್ಹತೆ ಸೃಷ್ಟಿಯಾಗುತ್ತಿಲ್ಲ. ಶಿಕ್ಷಣವೇ ಬೇರೆ ಕೌಶಲ್ಯತೆಯೇ ಬೇರೆ ಎನ್ನುವಂತಾಗಿದೆ. ನಮ್ಮ ಸರ್ಕಾರ ಪೂರ್ವಭಾವಿ ತಯಾರಿ ಮಾಡಿ ಜಾರಿ ಆರಂಭಿಸಿದೆವು. ಸಮಾಜಕ್ಕೆ ಶಕ್ತಿ ತುಂಬಬೇಕು ಎಂದು ಹೊರಟೆವು. ಈ ಸರ್ಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಏನು ಗೊತ್ತಿಲ್ಲ. ಪಠ್ಯಪುಸ್ತಕ, ಸಿಲಬಸ್ ಎಂದರೆ ಎನ್‌ಇಪಿ ಎಂದುಕೊಂಡಿದ್ದಾರೆ. ಎನ್‌ಇಪಿಯಲ್ಲಿ ಒಂದೂ ಲೋಪ ಇಲ್ಲ. ನಿಮ್ಮ ಕೈಯಲ್ಲಿ ಆಗಲಿಲ್ಲ ಎಂದರೆ ತಜ್ಞರನ್ನು ಕಳಿಸಿ, ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಯಾವುದನ್ನೂ ಓದಲ್ಲ. ನಾಲೆಡ್ಜ್‌ ಕಮಿಷನ್ ಬಗ್ಗೆ ಇವರಿಗೆ ಗೊತ್ತಿಲ್ಲ. ಶಿಕ್ಷಣ ನೀತಿ ತಂದಿದ್ದು ಕಾಂಗ್ರೆಸ್, ಈಗ ಇಡೀ ಯುಜಿಸಿ ಬಿಟ್ಟು ಶಿಕ್ಷಣ ನೀತಿ ಮಾಡುತ್ತೀರಾ? ವಿಶ್ವವನ್ನು ಬಿಟ್ಟು ಮಾಡುತ್ತೀರಾ? ದೇಶ ಬಿಟ್ಟು ಮಾಡುತ್ತೀರಾ? ಫ್ರೇಮ್‌ವರ್ಕ್ ಸರಿಯಿಲ್ಲ ಎಂದರೆ ಮಕ್ಕಳಿಗೆ ಏನನ್ನು ಕೊಡುತ್ತೀರಾ? ಈ‌ ಶಿಕ್ಷಣ ನೀತಿ ಅತ್ಯಂತ ವೈಜ್ಞಾನಿಕವಾಗಿದೆ, ಇವತ್ತಿನ ಕಾಲಕ್ಕೆ ಅನುಗುಣವಾಗಿದೆ. ಜಾರಿಯಾಗಿ ಮೂರು ವರ್ಷ ಆಗಿರುವ ನೀತಿಯನ್ನು ಹಿಂಪಡೆಯುವುದು ಮೂರ್ಖತನ. ಇದು ಮೂರ್ಖತನದ ಪರಮಾವಧಿಯಾಗಿದೆ. ಜ್ಞಾನ, ಪ್ರತಿಭೆಯಲ್ಲಿ ಕರ್ನಾಟಕಕ್ಕೆ ಸಾಟಿಯಿಲ್ಲ. ಇಂತಹ ರಾಜ್ಯವನ್ನು ಏನೇನೊ ಮಾಡಬೇಡಿ. ಅಧಿಕಾರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ. ನೀವು ರಾಜಕಾರಣದ ಸಂಧ್ಯಾಕಾಲದಲ್ಲಿದ್ದೀರಿ. ನೀವಂತೂ ಕೊನೆಯಲ್ಲಿದ್ದೀರಾ, ರಾಜ್ಯದ ಯುವಜನರ ಭವಿಷ್ಯಕ್ಕೆ ತೊಂದರೆ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ಇದನ್ನೂ ಓದಿ | HD Kumaraswamy : ಒಮ್ಮೆ ಚಂದ್ರಯಾನ ಮುಗೀಲಿ; ಆಮೇಲೆ ನೈಸ್‌ನ ಎಲ್ಲ ದಾಖಲೆ ಬಿಚ್ಚಿಡ್ತೀನಿ: ಎಚ್.ಡಿ. ಕುಮಾರಸ್ವಾಮಿ

ಸಭೆಯಲ್ಲಿ ವಿಶ್ರಾಂತ ಕುಲಪತಿಗಳು, ವಿಶ್ರಾಂತ ಕುಲಸಚಿವರು, ಹಾಲಿ-ಮಾಜಿ ಅಕ್ಯಾಡೆಮಿಕ್ ಸದಸ್ಯರು, ಸಿಂಡಿಕೇಟ್ ಸದಸ್ಯರು, ಶಿಕ್ಷಣ ತಜ್ಞರು, ಶಿಕ್ಷಣ ಅಂಕಣಕಾರರು, ಶಿಕ್ಷಣದ ವರದಿಗಾರರು ಹಾಗೂ ಚಿಂತಕರು, ಮಾಜಿ ಶಾಸಕ ಸಿ.ಟಿ. ರವಿ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವರು ಭಾಗಿಯಾಗಿದ್ದರು.

Exit mobile version