Site icon Vistara News

Potholes problem | ಅಪಘಾತಕ್ಕೆ ರಸ್ತೆ ಗುಂಡಿ ಕಾರಣ ಎಂದು ದೂರು ನೀಡಿದರೆ ಹಾಗೇ ಎಫ್‌ಐಆರ್‌ ಮಾಡಿ ಎಂದ ಹೈಕೋರ್ಟ್‌

potholes

ಬೆಂಗಳೂರು: ರಾಜಧಾನಿಯಲ್ಲಿ ನಡೆಯುವ ಹೆಚ್ಚಿನ ಅಪಘಾತಗಳಿಗೆ ರಸ್ತೆ ಗುಂಡಿಗಳೇ ಕಾರಣವಾಗುತ್ತಿವೆ. ಆದರೆ, ಪೊಲೀಸರು ಎಫ್‌ಐಆರ್‌ನಲ್ಲಿ ಈ ವಿಚಾರವನ್ನು ದಾಖಲಿಸಲು ಹಿಂದೇಟು ಹಾಕುತ್ತಿರುವುದನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ. ಒಂದು ವೇಳೆ ಸಾರ್ವಜನಿಕರು ʻರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿದೆʼ ಎಂದು ದೂರು ನೀಡಿದರೆ ಅದನ್ನು ಹಾಗೆಯೇ ಎಫ್‌ಐಆರ್‌ ದಾಖಲಿಸಲು ಹಿಂಜರಿಯಬೇಡಿ ಎಂದು ಪೊಲೀಸರಿಗೆ ನಿರ್ದೇಶನ ನೀಡಿದೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತು ಅವುಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ರಸ್ತೆ ಗುಂಡಿ ಕುರಿತಾದ ಅಪಘಾತಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಪರಿಹಾರ ಕೋರಿ ಸಲ್ಲಿಸಿರುವ ಮನವಿಗಳ ವಿವರ ನೀಡುವಂತೆ ನ್ಯಾಯಾಲಯವು ಬಿಬಿಎಂಪಿ ನಿರ್ದೇಶಿಸಿದೆ.

ಪೊಲೀಸರು ಎಫ್‌ಐಆರ್‌ ಮಾಡುತ್ತಿಲ್ಲ
ರಸ್ತೆಗುಂಡಿಯಿಂದ ಸಂಭವಿಸಿದ ಅಪಘಾತದ ಕುರಿತು ದೂರು ನೀಡಲು ಸಾರ್ವಜನಿಕರು ಪೊಲೀಸ್‌ ಠಾಣೆಗೆ ಭೇಟಿ ನೀಡಿದಾಗ ಪೊಲೀಸರು ಪ್ರತಿಕ್ರಿಯಿಸದಿರುವುದು ಮತ್ತು ದೂರು ದಾಖಲಿಸದ ಕುರಿತಾದ ಮಾಧ್ಯಮ ವರದಿಗಳನ್ನು ಪೀಠವು ಉಲ್ಲೇಖಿಸಿತು. ಅಪಘಾತದಿಂದ ಹಾನಿಯಾದ ಎಷ್ಟು ಮಂದಿ ಸಾರ್ವಜನಿಕರು ಪರಿಹಾರ ಕೋರಿ ಮನವಿ ಸಲ್ಲಿಸಿದ್ದಾರೆ ಮತ್ತು ಎಷ್ಟು ಪರಿಹಾರ ನೀಡಲಾಗಿದೆ ಎಂಬುದರ ಮಾಹಿತಿ ನೀಡಬೇಕು ಎಂದು ಬಿಬಿಎಂಪಿಗೆ ನ್ಯಾಯಾಲಯವು ನಿರ್ದೇಶಿಸಿದ್ದು, ಗೃಹ ಇಲಾಖೆಯನ್ನು ಪಕ್ಷಕಾರರನ್ನಾಗಿಸುವಂತೆ ಅರ್ಜಿದಾರರಿಗೆ ಪೀಠ ನಿರ್ದೇಶಿಸಿದೆ.

ತಾಂತ್ರಿಕ ಕಾರಣಗಳನ್ನು ಮುಂದೊಡ್ಡಬೇಡಿ
“ಗುಂಡಿಯುತ ರಸ್ತೆಗಳು ಮತ್ತು ರಸ್ತೆಗಳ ಕಳಪೆ ನಿರ್ವಹಣೆಯಿಂದ ಸಾರ್ವಜನಿಕರಿಗೆ ಗಂಭೀರ ಗಾಯ ಅಥವಾ ಸಾವು ಸಂಭಿಸಿರುವುದರ ಕುರಿತು ದೂರು ನೀಡಲು ಸಾರ್ವಜನಿಕರು ಮುಂದಾದರೂ ಬಹುತೇಕ ಸಂದರ್ಭದಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಲು ಹಿಂಜರಿಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಜನರು ಸಂಬಂಧಿತ ಠಾಣೆಯಲ್ಲಿ ದೂರು ನೀಡಬಹುದಾಗಿದ್ದು, ತಾಂತ್ರಿಕ ಕಾರಣಗಳ ನೆಪವೊಡ್ಡಿ ಪೊಲೀಸರು ದೂರು ದಾಖಲಿಸಲು ಹಿಂಜರಿಯುವಂತಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಬಿಬಿಎಂಪಿ ಮತ್ತು ಗುತ್ತಿಗೆದಾರ ಕಂಪೆನಿಯು ರಸ್ತೆಗುಂಡಿ ಮುಚ್ಚಿರುವುದು ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿ ನೇಮಿಸಿ, ಸ್ವತಂತ್ರವಾಗಿ ಪರಿಶೀಲನೆ ನಡೆಸಿ ವರದಿ ನೀಡಲು ಕಳೆದ ವಿಚಾರಣೆಯಲ್ಲಿ ಬೆಂಗಳೂರಿನಲ್ಲಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿಗೆ ಪೀಠವು ನಿರ್ದೇಶಿಸಿತ್ತು. ರಸ್ತೆಗಳನ್ನು ಪರಿಶೀಲಿಸಿ ವರದಿ ನೀಡಲು ಲೋಕೋಪಯೋಗಿ ಇಲಾಖೆಯ ಎರಡು ಗುಣಮಟ್ಟ ನಿಯಂತ್ರಣ ತಂಡಗಳನ್ನು ನೆರವು ನೀಡಲು ನೇಮಕ ಮಾಡಬೇಕು ಎಂದು ಸಹಾಯಕ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಕೋರಿದರು.

ಇದಕ್ಕೆ ಪೀಠವು 2022ರ ಡಿಸೆಂಬರ್‌ 23ರೊಳಗೆ ಅಗತ್ಯ ಸಹಕಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಅಲ್ಲದೇ, ಇಂದಿನಿಂದ ಆರು ವಾರಗಳ ಒಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಈ ಮಧ್ಯೆ, ಯಂತ್ರದ ಮೂಲಕ ರಸ್ತೆ ಗುಂಡಿ ಮುಚ್ಚಲು ನೀಡಿದ್ದ ಗುತ್ತಿಗೆಯನ್ನು ಏಕಾಏಕಿ ವಜಾ ಮಾಡಿರುವುದನ್ನು ಪ್ರಶ್ನಿಸಿ ಅಮೆರಿಕನ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್‌ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯ ಅನುಮತಿಸಿತು. ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.

ಕೆಲವೊಂದು ಪ್ರಕರಣಗಳಲ್ಲಿ ರಸ್ತೆ ಗುಂಡಿಯಿಂದಾಗಿಯೇ ಅಪಘಾತ ಸಂಭವಿಸಿದ್ದರೂ ಪೊಲೀಸರು ಸ್ವಯಂತಪ್ಪಿನಿಂದ ಅವಘಡ ಸಂಭವಿಸಿದೆ ಎಂದು ದೂರು ದಾಖಲಿಸಿಕೊಳ್ಳುತ್ತಿದ್ದರು. ಇದರಿಂದ ಅವರಿಗೆ ಸಿಗುವ ಪರಿಹಾರ ಮತ್ತು ಚಿಕಿತ್ಸೆಯಲ್ಲಿ ವ್ಯತ್ಯಯವಾಗುತ್ತಿದೆ ಎನ್ನುವುದನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ.

ಇದನ್ನೂ ಓದಿ | BBMP Election | ಬಿಬಿಎಂಪಿ ಮೀಸಲಾತಿ ನಿಗದಿಗೆ ಮಾ. 31ರವರೆಗೆ ಅವಕಾಶ, ಎಲೆಕ್ಷನ್‌ ಚಾನ್ಸ್‌ ಮತ್ತೆ ಮುಂದೂಡಿಕೆ!

Exit mobile version