ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ 40 ಪರ್ಸೆಂಟ್ ಕಮಿಷನ್ ಬಗ್ಗೆ ಬಿಜೆಪಿ ಸಚಿವರು ಹಾಗೂ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಮುನಿರತ್ನ ಹಾಗೂ ಸಿ.ಸಿ.ಪಾಟೀಲ್ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಸಾಕ್ಷ್ಯಗಳಿದ್ದರೆ ಬಹಿರಂಗಪಡಿಸಲಿ, ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ವಿರೋಧ ಪಕ್ಷದವರು ಷಡ್ಯಂತ್ರದಿಂದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಬಗ್ಗೆ ಗೌರವ ದಿನೇ ದಿನೆ ಕಡಿಮೆಯಾಗುತ್ತಿದೆ. ಯಾರಾದರೂ ಶಾಸಕರು ಲಂಚ ತಗೊಂಡಿದ್ದರೆ ಅದನ್ನು ಸಾಬೀತು ಮಾಡಲಿ. ನ್ಯಾಯಾಂಗ ತನಿಖೆಗೆ ಕೊಡಿ, ಆಗ ಮಾತ್ರ ದಾಖಲೆ ಕೊಡುತ್ತೇನೆ ಎಂದರೆ ಅವರಿಗೆ ಯಾರ ಬಗ್ಗೆಯೂ ಗೌರವವಿಲ್ಲ ಎಂದಾಗುತ್ತದೆ. ಅವರು ಸೂಕ್ತ ದಾಖಲೆ ಕೊಟ್ಟು ಆರೋಪಿಸಿದರೆ ನಾನು ಮೆಚ್ಚುತ್ತೇನೆ, ಅದು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದ ಹಾಗೆ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರನ್ನು ಗುತ್ತಿದಾರರು ಭೇಟಿ ಮಾಡಿದ್ದಕ್ಕೆ ನನ್ನ ಅಭ್ಯಂತರವಿಲ್ಲ. ಕೆಂಪಣ್ಣ ಹೇಳಿದರು ಎಂದು ವಿರೋಧಪಕ್ಷದವರು ಹೇಳುತ್ತಿದ್ದಾರೆಯೇ ಹೊರತು ಅವರ ಬಳಿಯೂ ಯಾವುದೇ ದಾಖಲೆಯಿಲ್ಲ ಎಂದರು.
ಇದನ್ನೂ ಓದಿ | 15 ದಿನದಲ್ಲಿ ಪ್ರಧಾನಿಗೆ ಮತ್ತೊಂದು ಪತ್ರ ಎಂದ ಕೆಂಪಣ್ಣ: ಎರಡನೇ ಸುತ್ತಿನ 40% ವಿವಾದ
ತುಮಕೂರಿನಲ್ಲಿ ಸಚಿವ ಗೋಪಾಲಯ್ಯ ಮಾತನಾಡಿ, ಕೆಂಪಣ್ಣ ಗಾಳಿಯಲ್ಲಿ ಗುಂಡು ಹೊಡಿಯುತ್ತಾರೆ. ಅವರ ಹತ್ತಿರ ದಾಖಲೆ, ಪುರಾವೆಗಳಿದ್ದರೆ ಸಿಎಂಗೆ ನೀಡಲಿ. ಪ್ರಚಾರಕ್ಕಾಗಿ, ಯಾರದ್ದೋ ತೇಜೋವಧೆಗಾಗಿ ಹೀಗೆ ಮಾಡಬೇಡಿ. ನೀವು 40-50 ಪರ್ಸೆಂಟ್ ಕಮಿಷನ್ ಕೊಟ್ಟು ಹೇಗೆ ಕೆಲಸ ಮಾಡುತ್ತೀರಾ? ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ, ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತೆ ಮಾಡಬೇಡಿ. ಯಾರಿಗೆ ಕೊಟ್ಟಿದ್ದೀರಾ ಎಂಬುವುದನ್ನು ದಾಖಲೆ ಸಮೇತ ಬಿಡುಗಡೆ ಮಾಡಿ. 40 ಪರ್ಸೆಂಟ್ ಕಮಿಷನ್ ವಿಚಾರಕ್ಕಾಗಿ ಈಶ್ವರಪ್ಪ ರಾಜೀನಾಮೆ ಕೊಟ್ಟಿಲ್ಲ, ತನಿಖೆಯಲ್ಲಿ ಈಶ್ವರಪ್ಪ ಪಾತ್ರ ಇಲ್ಲ ಎಂದು ಗೊತ್ತಾಗಿದೆ. ಯಾರ ಮೇಲೆಯೇ ಆಗಲಿ ಆರೋಪ ಮಾಡಿದರೆ ಅದಕ್ಕೆ ಪೂರಕವಾದ ದಾಖಲೆಗಳಿರಬೇಕು. ಪೇಪರ್‌ನಲ್ಲಿ ಬರೆದುಕೊಟ್ಟು ತನಿಖೆ ಮಾಡಿ ಎಂದರೆ ಆಗಲ್ಲ. ಲಂಚ ಕೊಡುವವರು ಸತ್ಯ ಹರಿಶ್ಚಂದ್ರರಾ? ಅವರ ಮೇಲೂ ಕಾನೂನು ಕ್ರಮ ಜರುಗಿಸಬೇಕಲ್ಲವೇ ಎಂದು ಕಿಡಿಕಾರಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮಾತನಾಡಿ, ಬೊಮ್ಮಾಯಿ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಯಾರು ಹಣ ಪಡೆದಿದ್ದಾರೆ ಎಂಬುವುದನ್ನು ಕೆಂಪಣ್ಣ ಸಾಬೀತು ಪಡಿಸಬೇಕು. ಅವರು ಯಾವುದೇ ದಾಖಲೆ ಕೊಡುತ್ತಿಲ್ಲ, ದಾಖಲೆ ಕೊಡಲಿ. ಪ್ರತಿಪಕ್ಷ ನಾಯಕರನ್ನ ಭೇಟಿ ಮಾಡಿ, ಮಾಡಬೇಡಿ ಎನ್ನಲ್ಲ. ವಿಪಕ್ಷದವರು ಕೂಡ ಸರ್ಕಾರದ ಒಂದು ಭಾಗವೇ. 40 ಪರ್ಸೆಂಟ್ ಅಂತಾರಲ್ಲ ದಾಖಲೆ ಕೊಡಿ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇತ್ತಲ್ಲ ಆಗ ಯಾಕೆ ಹೇಳಲಿಲ್ಲ. ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಶಾಸಕರೆಲ್ಲ ಭ್ರಷ್ಟಾಚಾರಿಗಳಾ, ಕಳಂಕಿತರಾ?, ದಾಖಲೆ ಇದ್ದರೆ ಕೆಂಪಣ್ಣ ಬಿಡುಗಡೆ ಮಾಡಲಿ ಎಂದು ನಾನು ಸವಾಲು ಹಾಕುತ್ತೇನೆ. ಸಚಿವ ಮುನಿರತ್ನ ಮತ್ತು ಸಿ.ಸಿ.ಪಾಟೀಲ್ ಕಾನೂನು ಸಲಹೆಗಾರರ ಜತೆ ಚರ್ಚೆ ಮಾಡುತ್ತಿದ್ದು, ಶೀಘ್ರದಲ್ಲೇ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದರು.
ಇದನ್ನೂ ಓದಿ | ನ್ಯಾಯಾಂಗ ತನಿಖೆಯಾಗದಿದ್ದರೆ 40% ಕಮಿಷನ್ ನಿಜ ಎಂದರ್ಥ: ಮಾಜಿ ಸಿಎಂ ಸಿದ್ದರಾಮಯ್ಯ