Site icon Vistara News

Attibele Fire Accident : ಎಮರ್ಜೆನ್ಸಿ ಎಕ್ಸಿಟ್‌ ಇದ್ದಿದ್ದರೆ ಬದುಕುತ್ತಿದ್ದರು ಆ 14 ಮಂದಿ!

Attibele Fire Accident

ಬೆಂಗಳೂರು/ಆನೇಕಲ್:‌ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದ ಪಟಾಕಿ ಅಂಗಡಿಯಲ್ಲಿ (Fireworks shop) ನಡೆದ ಅಗ್ನಿ ದುರಂತದಲ್ಲಿ (Attibele Fire Accident) ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ‌ಆದರೆ, ಪಟಾಕಿ‌ ಗೋದಾಮಿನಲ್ಲಿ‌ (Fireworks Warehouse) ಇಷ್ಟು ಮಂದಿ ಸಜೀವ ದಹನಗೊಂಡಿದ್ದು (Burnt alive) ಹೇಗೆ? ಬದುಕುಳಿಯಲು ಅವರಿಗೆ ಯಾವುದೇ ಮಾರ್ಗವೂ ಇರಲಿಲ್ಲವೇ? ಎಂಬ ಪ್ರಶ್ನೆ ಕಾಡಿದೆ. ತುರ್ತು ನಿರ್ಗಮನದ ವ್ಯವಸ್ಥೆ ಇದ್ದಿದ್ದರೆ ಬದುಕುಳಿಯುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಮೊದಲು ಗೋದಾಮಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಇಷ್ಟು ಮಂದಿ ಪ್ರಾಣ ಕಳೆದುಕೊಳ್ಳಲು ಕಾರಣವಾಗಿದೆ ಎಂದು ತಿಳಿದುಬಂದಿದೆ. ದೀಪಾವಳಿ ಹಬ್ಬಕ್ಕಾಗಿ (Diwali Festival) ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಮುಂಭಾಗದಲ್ಲಿಯೂ ಹೆಚ್ಚು ಪಟಾಕಿ ಇತ್ತು. ಅಲ್ಲಿಯೇ ಮೊದಲು ಬೆಂಕಿ ಕಾಣಿಸಿಕೊಂಡು ಪಟಾಕಿಗಳು ಸಿಡಿಯಲಾರಂಭಿಸಿವೆ. ಇದರಿಂದ ಒಳಗಡೆ ಇದ್ದ ಕಾರ್ಮಿಕರಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿ ನಿರ್ಮಾಣವಾಗಿತ್ತು. ಎಲ್ಲೆಂದರಲ್ಲಿ ಗೋದಾಮಿನ ಒಳಗೇ ದಿಕ್ಕಾಪಾಲಾಗಿ ಓಡಿದ್ದಾರೆ.

ಇದನ್ನೂ ಓದಿ: Karnataka Weather : ಬೆಂಗಳೂರು ಟು ಮಂಡ್ಯ ಮಳೆ ಸಂಚಾರ; ಕರಾವಳಿ, ಮಲೆನಾಡಲ್ಲಿ ಹೇಗೆ?

ಗೋದಾಮಿನ ಒಳಗಡೆ ಸಿಲುಕಿಕೊಂಡ ಕಾರ್ಮಿಕರಿಗೆ ಎಮರ್ಜೆನ್ಸಿ ಎಕ್ಸಿಟ್‌ ಡೋರ್‌ ಸಹ ಇರದೇ ಇದ್ದರಿಂದ ಹೊರಗೆ ಹೋಗುವ ದಾರಿ ಕಾಣದಂತಾಗಿತ್ತು. ಹೀಗಾಗಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಿಂಬದಿಗೆ ಓಡಿ ಹೋಗಿದ್ದರು. ಆದರೆ, ಹಿಂಬದಿ ಸಹ ಪಟಾಕಿಗಳ ರಾಶಿಯೇ ಇತ್ತು. ಅಲ್ಲಿ ಅವರಿಗೆ ತಪ್ಪಿಸಿಕೊಳ್ಳಲು ದ್ವಾರ ಇರಲಿಲ್ಲ. ಇದರಿಂದ ಮತ್ತಷ್ಟು ಗಾಬರಿಗೊಂಡರು.

ಹಿಂಭಾಗದ ಕೊಠಡಿಯಲ್ಲಿ ಸಜೀವ ದಹನ

ಕೊನೆಗೆ ಅವರಿಗೆ ಕಾಣಿಸಿದ್ದೇ ಪಟಾಕಿ ಗೋದಾಮಿನ ಹಿಂಭಾಗ ಇರುವ ಕೊಠಡಿಯಾಗಿದೆ. ಎಲ್ಲರೂ ಅಲ್ಲಿಯೇ ಹೋಗಿ ಅವಿತು ಕುಳಿತುಕೊಂಡಿದ್ದರು. ಹೀಗಾಗಿ ಒಂದೇ ಜಾಗದಲ್ಲಿ ‌ಏಳು‌ ಜನ ಸ್ನೇಹಿತರು ಸುಟ್ಟು ಕರಕಲಾಗಿ ಹೋದರು. ಇನ್ನು ಪಟಾಕಿ ಸಂಗ್ರಹಿಸಲು ಗೋದಾಮು ಮಾಲೀಕರ ಬಳಿ ಪರವಾನಗಿಯೇ ಇಲ್ಲ ಎಂಬ ಮಾಹಿತಿ ಸಹ ಲಭ್ಯವಾಗಿದೆ.

ಗೋದಾಮು ಹೊತ್ತಿ ಉರಿದ ವಿಡಿಯೊ ಇಲ್ಲಿದೆ

ಪರವಾನಗಿ ಇರಲಿಲ್ಲ

ಪಟಾಕಿಯನ್ನು ಬೇರೆಡೆಗೆ ರವಾನಿಸುವ ಪ್ರೊಸೆಸಿಂಗ್‌ ಯುನಿಟ್‌ಗೆ ಮಾತ್ರ ಪರವಾನಗಿ ನೀಡಲಾಗಿದೆ. ಆದರೆ, ಪರವಾನಗಿಯೇ ಇಲ್ಲದೆ ಅಕ್ರಮವಾಗಿ ಭಾರಿ ಪ್ರಮಾಣದಲ್ಲಿ ಮಾಲೀಕ ಪಟಾಕಿ ಸಂಗ್ರಹಿಸಿದ್ದಾರೆ. ಹಾಗಾಗಿ, ಪಟಾಕಿ ಗೋದಾಮು ಮಾಲೀಕರ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮವಾಗಿ ಪಟಾಕಿ ಸಂಗ್ರಹಿಸದಿದ್ದರೆ ದುರಂತವೇ ಸಂಭವಿಸುತ್ತಿರಲಿಲ್ಲ. ಆದರೆ, ಪರವಾನಗಿಯೇ ಇಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಿದ್ದು, ದುರಂತವು 14 ಜನರ ಸಾವಿಗೆ ಕಾರಣವಾಗಿದೆ. ಸುಮಾರು 5 ಕೋಟಿ ರೂ. ಬೆಲೆಬಾಳುವ ಪಟಾಕಿಗಳನ್ನು ಮಾಲೀಕ ನವೀನ್‌ ಸಂಗ್ರಹಿಸಿದ್ದರು ಎಂದು ತಿಳಿದುಬಂದಿದೆ.

ಮೃತರಲ್ಲಿ ಏಳು ಜನ ಒಂದೇ ಗ್ರಾಮದವರು

ಅಗ್ನಿ ಅವಘಡದಲ್ಲಿ ಸಜೀವವಾಗಿ ದಹನಗೊಂಡ 14 ಜನರ ಪೈಕಿ ಏಳು ಮಂದಿ ಒಂದೇ ಗ್ರಾಮದವರು ಎಂದು ತಿಳಿದುಬಂದಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಟಿ ಅಮ್ಮಾಪೇಟೆ ಎಂಬ ಗ್ರಾಮದ ಗಿರಿ, ಆದಿಕೇಶವನ್, ವಿಜಯ್ ರಾಘವನ್, ಇಲಂಬರದಿ, ಆಕಾಶ, ವೇಡಪನ್ ಸಚಿನ್ ಸೇರಿ ಏಳು ಯುವಕರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ: Karnataka Live News : ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಲೇಟೆಸ್ಟ್ ಮಾಹಿತಿ; ಅತ್ತಿಬೆಲೆ ದುರಂತ; ಮೃತ 14 ಜನರ ಪೈಕಿ 8 ಯುವಕರು ಒಂದೇ ಗ್ರಾಮದವರು!

20 ಕಾರ್ಮಿಕರಿದ್ದರು

ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಆದರೆ, ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ದುರಂತ ಸಂಭವಿಸಿದೆ. ಮಳಿಗೆಯಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 6 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನವೀನ್ ಎಂಬುವವರ ಪಟಾಕಿ ಮಳಿಗೆ ಇದಾಗಿದ್ದು, ಪಟಾಕಿ ಬಾಕ್ಸ್‌ಗಳನ್ನು ತಂದು ಲಾರಿಯಿಂದ ಅನ್‌ಲೋಡ್‌ ಮಾಡುವಾಗ ಈ ಅವಘಡ ಸಂಭವಿಸಿದೆ.

Exit mobile version