ಉಡುಪಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಮೀಸಲಾತಿ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲರಿಗೆ ಎಸ್‌ಟಿ ಮೀಸಲಾತಿ ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಭರವಸೆ ನೀಡಿದ್ದಾರೆ. ಇನ್ನು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಶೇ.75ಕ್ಕೆ ಏರಿಕೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ, ರಾಹುಲ್ ಗಾಂಧಿ ಕೂಡ ಮೀಸಲಾತಿ ಪ್ರಮಾಣವನ್ನು ಏರಿಕೆ ಮಾಡುವ ಭರವಸೆ ನೀಡಿದ್ದಾರೆ.
ರಾಹುಲ್ ಗಾಂಧಿಗೆ ಮೀನು ಉಡುಗೊರೆ
ಉಡುಪಿಯ ಕಾಪುವಿಗೆ ಆಗಮಿಸಿದ ರಾಹುಲ್ ಗಾಂಧಿ, ಮೀನುಗಾರರ ಜತೆ ಸಂವಾದ ನಡೆಸಿದರು. ಇದೇ ವೇಳೆ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ ಪ್ರಶ್ನೆಯೊಂದನ್ನು ಕೇಳಿದರು. ಮಕ್ಕಳು ಹಾಗೂ ಮೀಸಲಾತಿಗೆ ಏನು ಮಾಡುತ್ತೀರಿ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, “ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಶೇ.70ಕ್ಕೆ ಏರಿಕೆ ಮಾಡುತ್ತೇವೆ” ಎಂದು ಭರವಸೆ ನೀಡಿದರು.
ಉಡುಪಿಗೆ ಬಂದ ರಾಹುಲ್ ಗಾಂಧಿ ಹೆಲಿಕಾಪ್ಟರ್ ತಪಾಸಣೆ
“ನಾನೂ ನಿಮ್ಮ ಕುಟುಂಬದ ಸದಸ್ಯ. ನಿಮ್ಮ ಜತೆ ನೇರ ಸಂವಾದ ಯಾವಾಗಲೂ ಇರುತ್ತದೆ. ಮೀನುಗಾರರ ಹಿತ ಕಾಪಾಡುವುದರಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ಶಕ್ತಿಯುತ ಜನರಲ್ಲಿ ಶೇ.7ರಷ್ಟು ಜನ ಮಾತ್ರ ದಲಿತರು, ಆದಿವಾಸಿಗಳು ಇದ್ದಾರೆ. ಜಾತಿಗಣತಿ ಮಾಡಿ ಎಂದು ನಾನು ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಇದು ಕೇಂದ್ರ ಸರ್ಕಾರದ ಕೆಲಸ. ಆದರೆ, ಕೇಂದ್ರ ಸರ್ಕಾರವು ಇದುವರೆಗೆ ಜಾತಿ ಗಣತಿಯ ವಿವರ ಬಹಿರಂಗ ಮಾಡಿಲ್ಲ” ಎಂದರು.
ಮೀಸಲಾತಿ ಮಿತಿ ಅವೈಜ್ಞಾನಿಕ
“ದೇಶದಲ್ಲಿರುವ ಶೇ.50ರಷ್ಟು ಮೀಸಲಾತಿ ಮಿತಿಯು ಅವೈಜ್ಞಾನಿಕವಾಗಿದೆ. ಇದರಿಂದ ದಲಿತರು ಹಾಗೂ ಆದಿವಾಸಿಗಳಿಗೆ ಸಮನಾದ ಅವಕಾಶ ಸಿಗುವುದಿಲ್ಲ. ಶೇ.50ರಷ್ಟು ಮೀಸಲಾತಿ ಮಿತಿಯನ್ನು ತೆಗೆಯಿರಿ ಎಂದು ನರೇಂದ್ರ ಮೋದಿ ಅವರಿಗೆ ಹಲವು ಬಾರಿ ಒತ್ತಾಯ ಮಾಡಿದ್ದೇನೆ. ಆದರೂ, ಅವರು ಕ್ರಮ ತೆಗೆದುಕೊಂಡಿಲ್ಲ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಮೀಸಲಾತಿ ಮಿತಿಯನ್ನು ಶೇ.70ಕ್ಕೆ ಏರಿಕೆ ಮಾಡುತ್ತೇವೆ” ಎಂದು ಭರವಸೆ ನೀಡಿದರು. ರಾಹುಲ್ ಗಾಂಧಿ ಅವರಿಗೆ ಸಹೋದರಿ, ಕಾಂಗ್ರೆಸ್ ನಾಯಕ ಪ್ರಿಯಾಂಕಾ ವಾದ್ರಾ ಸಾಥ್ ನೀಡಿದರು.
ಇದನ್ನೂ ಓದಿ: Karnataka Election 2023: ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ, ಪ್ರಿಯಾಂಕಾ ವಾದ್ರಾ ಭರವಸೆ