ಬೆಂಗಳೂರು: ಬಿಜೆಪಿ ಅಥವಾ ಜೆಡಿಎಸ್‌ಗೆ (BJP or JDS) ಮತ ಹಾಕಿದರೆ ಗ್ಯಾರಂಟಿ ಯೋಜನೆಗಳು (Congress Guarantee Scheme) ರದ್ದಾಗುತ್ತವೆ ಎಚ್ಚರ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಕಾರ್ಯಕರ್ತರಿಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಗ್ಯಾರಂಟಿ ಯೋಜನೆಗಳು ಬಂದಾಗ ರಾಜ್ಯ ದಿವಾಳಿ ಆಗುತ್ತದೆ ಅಂತ ಬಿಜೆಪಿಯವರು ಬೊಬ್ಬೆ ಹೊಡೆದರು. ಈಗ ಅವರೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ ಎಂದು ಹೇಳಿದರು.
ಶಕ್ತಿ ಯೋಜನೆಯ ಪ್ರಭಾವದಿಂದ ಹಾಸನಾಂಬೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹದಿನಾಲ್ಕು ಕೋಟಿ ರೂಪಾಯಿ ಆದಾಯ ಬಂದಿದೆ. ಬಸ್ ಫ್ರೀ ಕೊಟ್ಟಿದ್ದರಿಂದಲೇ ಇಷ್ಟೊಂದು ಆದಾಯ ಜಾಸ್ತಿ ಆಗಿದೆ. ಗೃಹ ಲಕ್ಷ್ಮಿ ಯೋಜನೆಯು ಟೆಕ್ನಿಕಲ್ ಸಮಸ್ಯೆಯಿಂದ ಏಳು ಪರ್ಸೆಂಟ್ ಜನರಿಗೆ ತಲುಪಿಲ್ಲ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಯುವ ನಿಧಿ ಕೂಡಾ ಜಾರಿಗೆ ತರುತ್ತೇವೆ. ನೀವೆಲ್ಲ ಬಿಜೆಪಿ ಅಥವಾ ಜೆಡಿಎಸ್‌ಗೆ ಮತ ಹಾಕಿದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುತ್ತಾರೆ ಎಂದು ಜನರಿಗೆ ತಿಳಿಸಿ. ಆದರೆ, ಕಾಂಗ್ರೆಸ್ ಸರ್ಕಾರ ಇರುವವರೆಗೂ ಈ ಗ್ಯಾರಂಟಿಗಳನ್ನು ಹಿಂಪಡೆಯುವುದಿಲ್ಲ, ಬದಲಾವಣೆ ಮಾಡುವುದಿಲ್ಲ. ಇದು ನಿಶ್ಚಿತ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ನಾನು ಡಿಸಿಎಂ ಆದಾಗ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಈ ವರ್ಷ ಎರಡು ಗ್ಯಾರಂಟಿ ಯೋಜನೆಗಳನ್ನು ತಂದರೆ ಸಾಕು ಎಂದು ಹೇಳಿದರು. ಆದರೆ, ನಾವು ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿ ಸ್ಥಿಮಿತ ಕಳೆದುಕೊಂಡಿದ್ದಾರೆ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸ್ಥಿಮಿತತೆಯನ್ನು ಕಳೆದುಕೊಂಡಿದ್ದಾರೆ. ನಾನು ಇಂದಿರಾಗಾಂಧಿ ಅವರ ಹೆಸರಿನಲ್ಲಿ ಥಿಯೇಟರ್ ನಡೆಸುತ್ತಿದ್ದೆ. ಮೂರು ಥಿಯೇಟರ್‌ಗಳು ಇದ್ದಾವೆ. ಮಾಧ್ಯಮದವರು ಜನರ ಬಳಿ ಸಮೀಕ್ಷೆ ನಡೆಸಲಿ ಬೇಕಿದ್ದರೆ, ಜನರೇ ಉತ್ತರ ಕೊಡುತ್ತಾರೆ. ಅವರು ದೊಡ್ಡವರು, ಅವರ ಸಂಸ್ಕೃತಿ ಅದು. ಅವರು ಮಾತಾಡುತ್ತಾರೆ ಅಂತ ನಾನು ಮಾತನಾಡಲು ಆಗಲ್ಲ. ಅವರ ಸ್ಥಾನಕ್ಕೆ ಗೌರವ ಇದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಟೆಂಟಲ್ಲಿ ಬ್ಲೂಫಿಲಂ ತೋರಿಸುತ್ತಿದ್ದಾರೆ ಎಂಬ ಹೇಳಿಕೆಗೆ ಈ ಮೂಲಕ ತಿರುಗೇಟು ನೀಡಿದ್ದಾರೆ.
ಗ್ಯಾರಂಟಿ ಪರಿವೀಕ್ಷಣೆಗೆ ನ.28ಕ್ಕೆ ಸಮಿತಿ
ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗೆ ಜಿಲ್ಲಾ ಮಂತ್ರಿಗಳಿಗೆ ಉಸ್ತುವಾರಿ ನೀಡಲಾಗಿದೆ. ಗ್ಯಾರಂಟಿಗಳು ಜನರನ್ನು ಸಮರ್ಪಕವಾಗಿ ತಲುಪುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಲು ಪಕ್ಷದಿಂದ ಇದೇ ನವೆಂಬರ್ 28ಕ್ಕೆ ಸಮಿತಿಯನ್ನು ರಚನೆ ಮಾಡುತ್ತೇನೆ. ಅಂದು ಕಾಂಗ್ರೆಸ್ ಸಂಸ್ಥಾಪಕರ ದಿನವಿದ್ದು, ಅಂದೇ ಸಮಿತಿಯನ್ನು ರಚನೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ: Congress Karnataka : ಬೆಂಗಳೂರು ಜಿಲ್ಲೆಯನ್ನು 5 ಭಾಗ ಮಾಡಿದ ಕಾಂಗ್ರೆಸ್; ಐವರು ಜಿಲ್ಲಾಧ್ಯಕ್ಷರ ನೇಮಕ
ಈ ಸಮಿತಿಯವರು ಪ್ರತಿ ಮನೆಗೆ ಹೋಗಿ ಗ್ಯಾರಂಟಿಗಳು ಸಮರ್ಪಕವಾಗಿ ತಲುಪಿದೆಯೇ? ಯಾವುದಾದರೂ ಬದಲಾವಣೆ ಮಾಡಬೇಕೇ ಎಂಬ ಮಾಹಿತಿಯನ್ನು ಕಲೆ ಹಾಕುತ್ತದೆ. ನಲವತ್ತು ವರ್ಷಗಳ ರಾಜಕಾರಣದಲ್ಲಿ ಯಾವ ಸರ್ಕಾರವೂ ಕಾರ್ಯಕರ್ತರಿಗೆ ಇಂತಹ ಶಕ್ತಿ ಕೊಟ್ಟಿರಲಿಲ್ಲ. ನ.17ರವರೆಗೆ ಲೆಕ್ಕ ಹಾಕಿದರೆ ಶಕ್ತಿ ಯೋಜನೆಯಡಿ ನೂರು ಕೋಟಿ ರೂ. ಮೌಲ್ಯದ ಟಿಕೆಟ್ ನೀಡಲಾಗಿದೆ. ಜನವರಿ ವೇಳೆ ಯುವ ನಿಧಿಯನ್ನೂ ಜಾರಿಗೆ ತರುತ್ತೇವೆ ಎಂದು ಹೇಳಿದರು.
ಈ ಸುದ್ದಿಯ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ. ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ.