ದಾವೋಸ್: ಸ್ವಿಡನ್ ಮೂಲದ ಪೀಠೋಪಕರಣಗಳ ರಿಟೇಲರ್ ದಿಗ್ಗಜ ಐಕಿಯ ಇಂಡಿಯಾ ಬೆಂಗಳೂರಿನ ನಾಗಸಂದ್ರದಲ್ಲಿ ತನ್ನ ಮೂರನೇ ಮಳಿಗೆಯನ್ನು ಜೂನ್‌ನಲ್ಲಿ ತೆರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವೋಸ್ ನಲ್ಲಿ ತಿಳಿಸಿದ್ದಾರೆ.
ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್‌ನ ನೇಪಥ್ಯದಲ್ಲಿ ಐಕಿಯ ಗ್ರೂಪ್‌ನ ಸಿಇಒ ಜೆಸ್ಪರ್ ಬ್ರೋಡಿನ್ ಜತೆ ಮಾತುಕತೆ ಬಳಿಕ ಬಸವರಾಜ ಬೊಮ್ಮಾಯಿ ಈ ವಿಷಯ ತಿಳಿಸಿದರು.
ಐಕಿಯ ಇಂಡಿಯಾ ಎರಡು ತಿಂಗಳಿನ ಮೊದಲು ಹೈದರಾಬಾದ್‌ನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಿತ್ತು.
ಐಕಿಯ ಇಂಡಿಯಾಗೆ ಕರ್ನಾಟಕ ಆದ್ಯತೆಯ ಮಾರುಕಟ್ಟೆಯಾಗಿದ್ದು, 2000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ. ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆಗೆ ಕಂಪನಿಯು 1,000 ಕೋಟಿ ರೂ.ಗಳನ್ನು ಹೂಡಿತ್ತು. ಮಳಿಗೆ 800-1000 ಮಂದಿಗೆ ನೇರವಾಗಿ ಉದ್ಯೋಗ ನೀಡಲಿದೆ. 1,500 ಮಂದಿಗೆ ಪರೋಕ್ಷ ಉದ್ಯೋಗ ಲಭಿಸಲಿದೆ. ಪ್ರತಿ ವರ್ಷ 70 ಲಕ್ಷ ವೀಕ್ಷಕರನ್ನು ಮಳಿಗೆ ಆಕರ್ಷಿಸುವ ಸಾಧ್ಯತೆ ಇದೆ.
ಸ್ಥಳೀಯವಾಗಿ ಉತ್ಪಾದನೆಗೂ ತೊಡಗುವಂತೆ ಕಂಪನಿಗೆ ಕೋರಲಾಗಿದೆ. ಇದರಿಂದ ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು. ಬೊಮ್ಮಾಯಿ ಅವರು ಈ ಸಂದರ್ಭದಲ್ಲಿ ಎಕ್ಸಿಸ್ ಬ್ಯಾಂಕ್ ಸಿಇಒ ಅಮಿತಾಭ್ ಚೌಧುರಿ ಅವರ ಜತೆಗೂ ಮಾತುಕತೆ ನಡೆಸಿದರು. ಮುಖ್ಯಮಂತ್ರಿಯವರು ಹಲವಾರು ಕಂಪನಿಗಳ ಮುಖ್ಯಸ್ಥರು, ಉದ್ಯಮಿಗಳಿಗೆ ಉಪಾಹಾರ ಕೂಟ ಆಯೋಜಿಸಿದ್ದರು.