Site icon Vistara News

Illegal Assets | ಅಕ್ರಮ ಆಸ್ತಿ ಗಳಿಕೆ; ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ಮತ್ತೊಂದು ದೂರು

Illegal Assets

ಚಿಕ್ಕಮಗಳೂರು: ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. 123 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಗಳಿಕೆ (Illegal Assets) ಮಾಡಿದ್ದಾರೆ ಎಂಬ ಆರೋಪದಲ್ಲಿ ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಕೊಪ್ಪ ಮೂಲದ ದಿನೇಶ್ ಹೊಸೂರು ಎಂಬುವವರು ದೂರು ನೀಡಿದ್ದಾರೆ. ಶಬಾನಾ ರಂಜಾನ್ ಟ್ರಸ್ಟ್‌ ಜತೆಗಿನ ವ್ಯವಹಾರ ಕಾಂಗ್ರೆಸ್‌ ಶಾಸಕರಿಗೆ ಕಂಟಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‌ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 18ರಂದು ಕೊಪ್ಪ ಮೂಲದ ವಿಜಯಾನಂದ ಎಂಬುವವರು ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ, ದೂರು ದಾಖಲಾದ 4-5 ದಿನದಲ್ಲಿ ಕೇಸ್ ಅನ್ನು ದೂರುದಾರ ಹಿಂಪಡೆದಿದ್ದರು. ಈ ವೇಳೆ ಕಾಫಿ ಡೇ ಮಾಲೀಕ ದಿವಂಗತ ಸಿದ್ದಾರ್ಥ್ ಅವರ ಕಾಫಿತೋಟ ಖರೀದಿ ಮಾಡಿದ್ದ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ ದೂರು ನೀಡುವಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಅವರ ಆಮಿಷಕ್ಕೆ ಒಳಗಾಗಿದ್ದೆ. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದೆ ಎಂದಿದ್ದರು.

ಈ ವಿವಾದದ ಕುರಿತು ಪ್ರತಿಕ್ರಿಯಿಸಿದ್ದ ಸಿದ್ಧಾರ್ಥ್‌ ಅವರ ಪತ್ನಿ ಮಾಳವಿಕಾ ಹೆಗ್ಡೆ, ಸಿದ್ಧಾರ್ಥ್‌ ಅವರ ನಿಧನದ ನಂತರ, ಕಂಪನಿಯ ಸಾಲಗಳನ್ನು ತೀರಿಸಲು ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ವೇಳೆ ಒಂದು ಸ್ಥಿರಾಸ್ತಿಯನ್ನು ಶಾಸಕ ಟಿ.ಡಿ. ರಾಜೇಗೌಡ ಖರೀದಿ ಮಾಡಿದ್ದಾರೆ. ಈ ವ್ಯವಹಾರದಲ್ಲಿ ನಮಗೆ ಯಾವುದೇ ಮೋಸ, ಅನ್ಯಾಯ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ವಾರ್ಷಿಕ 35 ಲಕ್ಷ ಆದಾಯ ತೋರಿಸಿದ್ದ ರಾಜೇಗೌಡರು 123 ಕೋಟಿ ಆಸ್ತಿಯನ್ನು ಹೇಗೆ ಖರೀದಿ ಮಾಡಿದರು ಎಂದು ಪ್ರಶ್ನಿಸಿ ಚಿಕ್ಕಮಗಳೂರು ಲೋಕಾಯುಕ್ತಕ್ಕೆ ದಿನೇಶ್ ಎಂಬುವವರು ಈಗ ದೂರು ನೀಡಿದ್ದು, ಶಾಸಕರ ಅಕ್ರಮ ಆಸ್ತಿ ಗಳಿಕೆ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ಪ್ರಕರಣ?
ನರಸಿಂಹರಾಜಪುರ ತಾಲೂಕಿನ ಹಲಸೂರಿನಲ್ಲಿ ಸುಮಾರು 2೬೬ ಎಕರೆ ಭೂಮಿಯನ್ನು ಶಾಸಕ ಟಿ.ಡಿ.ರಾಜೇಗೌಡ ಅವರು ಪತ್ನಿ ಮತ್ತು ಮಗನ ಹೆಸರಿನಲ್ಲಿ ಖರೀದಿಸಿದ್ದಾರೆ. ಸದ್ಯ ಶಬಾನಾ ರಂಜಾನ್ ಟ್ರಸ್ಟ್‌ನಲ್ಲಿ ನಾಲ್ವರು ಪಾಲುದಾರರಿದ್ದು, ಇಬ್ಬರು ನಿವೃತ್ತಿ ಹೊಂದುತ್ತಿದ್ದಂತೆ ಶಾಸಕರ ಪತ್ನಿ ಪಾಲುದಾರರಾಗಿದ್ದಾರೆ. ಕೆಲವು ದಿನಗಳ ಬಳಿಕ ಮತ್ತಿಬ್ಬರು ನಿವೃತ್ತಿ ಹೊಂದಿದ್ದು, ಶಾಸಕರ ಮಗ ರಾಜ್‍ದೇವ್ ಟ್ರಸ್ಟ್‌ ಪ್ರವೇಶಿಸಲಿದ್ದಾರೆ. ಈ ಮೂಲಕ ಶಾಸಕರ ಪತ್ನಿ ಮತ್ತು ಮಗ ಅರ್ಧದಷ್ಟು ಪಾಲುದಾರಿಕೆ ಪಡೆಯಲಿದ್ದಾರೆ ಎಂದು ಈ ಹಿಂದಿನ ದೂರಿನಲ್ಲಿ ಆರೋಪಿಸಲಾಗಿತ್ತು.

ಶಬಾನಾ ರಂಜಾನ್ ಟ್ರಸ್ಟ್‌ ಫಾರ್ಮ್‍ನ ಭೂಮಿಯಲ್ಲಿ ನೂರಾರು ಎಕರೆ ಭೂಮಿಯನ್ನು ರಾಜೇಗೌಡ ಕುಟುಂಬದವರು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಈ ಆಸ್ತಿಯು ಮೊದಲು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಹೆಸರಿನಲ್ಲಿ ಇತ್ತು. ಅವರ ಮರಣದ ಬಳಿಕ ಅವರ ಪತ್ನಿ ಮತ್ತು ಮಗನ ಹೆಸರಿನಲ್ಲಿ ಇತ್ತು. ಅದನ್ನು ರಾಜೇಗೌಡರು ಪ್ರಭಾವ ಬಳಸಿ ತಮ್ಮ ಪತ್ನಿ ಹಾಗೂ ಮಗನ ಹೆಸರನ್ನು ಫಾರ್ಮ್‍ಗೆ ಸೇರಿಸಿದ್ದಾರೆ ಎಂಬ ಆರೋಪವು ಈಗ ಕೇಳಿಬಂದಿದೆ.

ಇದನ್ನೂ ಓದಿ | Janapada University | ಕರ್ನಾಟಕ ಜಾನಪದ ವಿವಿಯ 100 ಎಕರೆಗೂ ಹೆಚ್ಚು ಭೂಮಿ ಒತ್ತುವರಿ; ಜಿಲ್ಲಾಡಳಿತಕ್ಕೆ ಮೊರೆ

Exit mobile version