Site icon Vistara News

Illegal cash found | ವಿಧಾನ ಸೌಧದಲ್ಲಿ ಹಣ ಪತ್ತೆ ಪ್ರಕರಣ: ಎಂಜಿನಿಯರ್‌ಗೆ ರಿಲೀಫ್‌, ಹಣ ನನ್ನದಲ್ಲ ಎಂದ ಸಿ.ಸಿ. ಪಾಟೀಲ್‌

Vidhana soudha

ಬೆಂಗಳೂರು: ರಾಜಧಾನಿಯ ಶಕ್ತಿ ಸೌಧವಾದ ವಿಧಾನ ಸೌಧದಲ್ಲಿ ೧೦.೫ ಲಕ್ಷ ರೂ. ಪತ್ತೆಯಾದ ಪ್ರಕರಣಕ್ಕೆ (Illegal cash found) ಸಂಬಂಧಿಸಿ ದಿನವಿಡೀ ಹಲವು ಬೆಳವಣಿಗೆಗಳು, ಆರೋಪ-ಪ್ರತ್ಯಾರೋಪಗಳು ನಡೆದರೂ ಅಂತಿಮವಾಗಿ ಇದು ಯಾವ ತಾತ್ವಿಕ ಅಂತ್ಯವನ್ನು ಕಾಣದೆಯೇ ಮುಚ್ಚಿಹೋಗುವ ಲಕ್ಷಣಗಳು ಕಾಣಿಸುತ್ತಿವೆ.

ವಿಧಾನ ಸೌಧದ ಪಶ್ಚಿಮ ದ್ವಾರದಲ್ಲಿ ಗುರುವಾರ ೧೦.೫ ಲಕ್ಷ ರೂ. ಹಣ ಪತ್ತೆಯಾಗಿತ್ತು. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಆಗಿರುವ ಮಂಡ್ಯ ಮೂಲದ ಜಗದೀಶ್‌ ಈ ಹಣದ ವಾರೀಸುದಾರರು. ಈ ಹಣ ಪತ್ತೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಬಿಜೆಪಿಯ ಮೇಲೆ ಮುಗಿಬಿದ್ದರು. ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ ಎಂದೆಲ್ಲ ಪ್ರಶ್ನಿಸಲಾಯಿತು. ಈ ನಡುವೆ, ಬಿಜೆಪಿ ೨೦೧೬ರಲ್ಲಿ ಸಚಿವ ಪುಟ್ಟರಂಗ ಶೆಟ್ಟಿ ಅವರ ಕಚೇರಿಯಲ್ಲಿ ಪತ್ತೆಯಾದ ದೊಡ್ಡ ಮೊತ್ತದ ಹಣದ ವಿಚಾರವನ್ನು ಪ್ರಸ್ತಾಪಿಸಿ ತಿರುಗೇಟು ನೀಡಿತು. ಇದರೊಂದಿಗೆ ವಿಧಾನಸೌಧದಲ್ಲಿ ಹಣಕಾಸಿನ ವ್ಯವಹಾರ ಸಾಮಾನ್ಯ ಎಂಬುದನ್ನು ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಂಡಂತಾಯಿತು.

ಇದೆಲ್ಲ ಸಾಮಾನ್ಯ ಎಂದು ಒಪ್ಪಿಕೊಂಡ ಸಿ.ಸಿ. ಪಾಟೀಲ್‌
ಹಣ ಹಿಡಿದುಕೊಂಡು ಬಂದವನು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಆಗಿದ್ದರಿಂದ ಇಲಾಖೆಯ ಸಚಿವ ಸಿ.ಸಿ. ಪಾಟೀಲ್‌ ಅವರ ಮೇಲೆ ಎಲ್ಲ ಕಣ್ಣುಬಿದ್ದಿತ್ತು. ಶುಕ್ರವಾರ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ ಸಿ.ಸಿ. ಪಾಟೀಲ್‌ ಈ ಹಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸಮಜಾಯಿಷಿ ನೀಡಿದರು.

ʻʻವಿಧಾನ ಸೌಧದಲ್ಲಿ ಸಿಕ್ಕಿರುವ ದುಡ್ಡಿಗೂ ನನಗೂ ಸಂಬಂಧವಿಲ್ಲ. ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ಆದರೂ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಕಾರಣಕ್ಕೆ ಆರೋಪ ಮಾಡ್ತಿದ್ದಾರೆ. ನಮ್ಮ ಕಾಲದಲ್ಲಿ ವಿಧಾನ ಸೌಧ ಗೋಡೆಗಳು ಕಮಿಷನ್ ಬಗ್ಗೆ ಮಾತನಾಡ್ತಿವೆ. ಕಾಂಗ್ರೆಸ್ ಕಾಲದಲ್ಲಿ ಸಚಿವರ ಕಚೇರಿಯಲ್ಲಿ 25 ಲಕ್ಷ ರೂಪಾಯಿ ಸಿಕ್ಕಿ ಬಿದ್ದಿತ್ತು. ಅದಕ್ಕೆ ಡಿಕೆ ಶಿವಕುಮಾರ್ ಏನು ಹೇಳ್ತಾರೆʼʼ ಎಂದು ಪ್ರಶ್ನಿಸುವ ಮೂಲಕ ಚೆಂಡನ್ನು ಕಾಂಗ್ರೆಸ್‌ ಕೋರ್ಟ್‌ಗೆ ತಳ್ಳಿದರು.

ʻʻಹಾಗಾದ್ರೆ ಎಲ್ಲರ ಕಾಲದಲ್ಲೂ ಕಮಿಷನ್ ನಡೆಯುತ್ತಿತ್ತೇʼʼ ಅನ್ನೋ ಪ್ರಶ್ನೆಗೆ ಇಂತಹ ಪ್ರಶ್ನೆಗಳನ್ನ ಕೇಳಬೇಡಿ ಎಂದರು ಸಿಸಿ ಪಾಟೀಲ್. ಕಾಂಗ್ರೆಸ್‌ ಕಾಲದಲ್ಲಿ ೮೦% ಕಮಿಷನ್‌ ಇತ್ತು ಎಂಬ ಅವರ ಹೇಳಿಕೆಗೆ ಪ್ರತಿಯಾಗಿ ನಿಮ್ಮ ಕಾಲದಲ್ಲಿ ಎಷ್ಟಿದೆ ಎಂದು ಕೆಣಕಲಾಯಿತು. ಆಗಲೂ ಅವರು ಇದನ್ನೆಲ್ಲ ಕೇಳಬಾರದು ಎಂದರು.

ʻʻನಮ್ಮ ಕಾಲದಲ್ಲಿ ಗೋಡೆಗಳು ಮಾತನಾಡುತ್ತಿದ್ರೆ ಅವರ ಕಾಲದಲ್ಲಿ ಕೊಠಡಿಯಲ್ಲಿ ದುಡ್ಡು ಕೊಡ್ತಿದ್ರುʼʼ ಎಂದು ಹೇಳೋ ಮೂಲಕ ಕಮಿಷನ್ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡರು ಸಿ.ಸಿ ಪಾಟೀಲ್.

ಸುಳಿವು ಬಿಟ್ಟು ಕೊಡದ ಜಗದೀಶ್‌
ಈ ನಡುವೆ ವಿಧಾನಸೌಧ ಪೊಲೀಸರು ಬಂಧಿಸಿದ್ದ ಎಂಜಿನಿಯರ್‌ ಜಗದೀಶ್‌ಗೆ ಜಾಮೀನಿನ ರಿಲೀಫ್‌ ಕೂಡಾ ಸಿಕ್ಕಿದೆ. ಆರೋಪಿಯನ್ನು ವಶದಲ್ಲಿಟ್ಟುಕೊಂಡಿದ್ದ ಪೊಲೀಸರು ಮೇಯೋ ಹಾಲ್‌ ಕೋರ್ಟ್‌ಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರಾದ ರೇಖಾ ಅವರ ಮುಂದೆ ಹಾಜರುಪಡಿಸಿದಾಗ ಇದು ಪೊಲೀಸರು ಹಾಕಿದ್ದು ನಾನ್ ಕಾಗ್ನಿಜಿಯೇಬಲ್ ಸೆಕ್ಷನ್ ಆಗಿರುವುದರಿಂದ ಆರೋಪಿಯನ್ನು ಬಿಡುಗಡೆ ಮಾಡಿ ಕೋರ್ಟ್‌ ಸೂಚನೆ ನೀಡಿದೆ.

ಇದನ್ನೂ ಓದಿ | Illegal cash found | ವಿಧಾನಸೌಧದಲ್ಲಿ 10 ಲಕ್ಷ ಪತ್ತೆ ಕೇಸ್, ಪೊಲೀಸರ ವಿರುದ್ಧ ಅಕ್ರಮ ಆರೋಪ, ವಕೀಲರ ಟ್ವೀಟ್

Exit mobile version