ಮಂಡ್ಯ: ದೇವೇಗೌಡರಿಗೆ ಹಾಸನ ಜಿಲ್ಲೆ ಒಂದು ಕಣ್ಣಾದರೆ, ಮಂಡ್ಯ ಜಿಲ್ಲೆ ಮತ್ತೊಂದು ಕಣ್ಣು. ಕುಮಾರಸ್ವಾಮಿ ಅವರಿಗೆ 5 ವರ್ಷದ ಆಡಳಿತ ನಡೆಸಲು (JDS Convention) ಅಧಿಕಾರ ಕೊಡಿ, ರಾಜ್ಯದ ಎಲ್ಲಾ ನೀರಾವರಿ ಯೋಜನೆ ಜಾರಿಗೆ ತರುತ್ತೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ನಾಗಮಂಗಲದ ಸೋಮನಹಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಎಚ್‌ಡಿಕೆ ಕೊಡುಗೆ ಅಪಾರ. 2004ರಿಂದ 2008ರವರೆಗೆ ಅತಿ ಹೆಚ್ಚು ಪವರ್ ಸ್ಟೇಷನ್ ಕೊಟ್ಟಿದ್ದು ಕುಮಾರಸ್ವಾಮಿ. ಇಂಧನ ಇಲಾಖೆ ಇವತ್ತು 29 ಸಾವಿರ ಕೋಟಿ ರೂ. ನಷ್ಟ ಎದುರಿಸುತ್ತಿದೆ. ಮೊದಲು ಇಂಧನ ಇಲಾಖೆ ಕೆಲಸಕ್ಕೆ ಮಂಗಳೂರಿಗೆ ಹೋಗಬೇಕಿತ್ತು. ಚೆಸ್ಕಾಂ ಅಂತ ಮೈಸೂರಿನಲ್ಲೇ ಕೆಲಸ ಆಗುವಂತೆ ಮಾಡಿದ್ದು ನಾವು. ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದೆವು. ಮಂಡ್ಯದವರೇ ಸಿಎಂ ಇದ್ದರೂ ಬಿಡಿಗಾಸೂ ಕೊಡಲಿಲ್ಲ ಎಂದರು.
ಮಂಡ್ಯಕ್ಕೆ ಕೊಟ್ಟ ಅನುದಾನವನ್ನು ಯಡಿಯೂರಪ್ಪ ತಡೆ ಹಿಡಿದರು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರಾಜ್ಯಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಹೇಳಲಿ. 60 ವರ್ಷದಲ್ಲಿ ಕಾಂಗ್ರೆಸ್ ಸಾಧನೆ ಏನೂ ಇಲ್ಲ. ದೇವೇಗೌಡರು ನೀರಾವರಿ ಯೋಜನೆಗಳನ್ನು ಕೊಟ್ಟರು. ಆದಿಚುಂಚನಗಿರಿ ಮಾರ್ಗದ ರೈಲ್ವೇ ಯೋಜನೆ ಕೊಟ್ಟರು ಎಂದವರು ವಿವರಿಸಿದರು.
ನಾಗಮಂಗಲ ಶಾಸಕ ಸುರೇಶಗೌಡ ಮಾತನಾಡಿ, ಎಚ್‌ಡಿಕೆ ಸಿಎಂ ಆಗಬೇಕು ಎಂದು ಜಿಲ್ಲೆಯ ಜನರು 7ಕ್ಕೆ 7 ಸ್ಥಾನ ಗೆಲ್ಲಿಸಿದ್ದಿರಿ. ನಾನು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದೆ, ಅಲ್ಲಿಯ ಸ್ಥಿತಿ, ಇಲ್ಲಿಯ ಸ್ಥಿತಿ ಏನು ಎಂಬುವುದನ್ನು ತಿಳಿದಿದ್ದೇನೆ. ಜೆಡಿಎಸ್ ಅಧಿಕಾರಾವಧಿಯಲ್ಲಿ ಸಾಕಷ್ಟು ಅನುದಾನ ಸಿಕ್ಕಿದೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುವಲ್ಲಿ ನಿಮ್ಮ ಹೋರಾಟ ಸಫಲ ಆಗಲಿದೆ ಎಂದರು.
1999ರಲ್ಲಿ ಗೆದ್ದಿದ್ದ ಮಾಹಾನುಭಾವರು ಏನು ಮಾಡಿದ್ದಾರೆ ಎಂದು ಪರೋಕ್ಷವಾಗಿ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ನಾಗಮಂಗಲದಲ್ಲಿ ನಿಲ್ಲಲೋ, ಮಂಡ್ಯದಲ್ಲಿ ನಿಲ್ಲಲೋ ಎಂದು ಚಲುವರಾಯಸ್ವಾಮಿ ಕೇಳುತ್ತಿದ್ದಾರೆ. ಅವನಾದರೂ ಬರಲಿ, ಮಗ ಅಥವಾ ಅಣ್ಣನ ಮಗನನ್ನಾದರೂ ನಿಲ್ಲಿಸಲಿ. ನನಗೆ ಜನರ ಆಶೀರ್ವಾದ ಇದ್ದರೆ ಸಾಕು ಗೆಲ್ಲುತ್ತೇನೆ ಎಂದರು.
ಸಮಾವೇಶದಲ್ಲಿ ಹೌದೋ ಹುಲಿಯಾ ಕೂಗು!
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಭಾಷಣದ ವೇಳೆ ಹೌದೋ ಹುಲಿಯಾ ಎಂದು ಕೂಗಿ ಕಾರ್ಯಕರ್ತನೊಬ್ಬ ಶಹಬ್ಬಾಸ್‌ಗಿರಿ ಕೊಟ್ಟಾಗ ಸಮಾರಂಭದಲ್ಲಿದ್ದವರು ಬಿದ್ದು ಬಿದ್ದು ನಕ್ಕರು. ಈ ವೇಳೆ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ “”ಹುಲಿಯಾ ಏನೂ ಬೇಕಿಲ್ಲ. ಅಸಲಿ ಹುಲಿಯಾ ಇಲ್ಲಿ ಕುಳಿತಿದೆ. HDK ಅಸಲಿ ಹುಲಿಯಾʼʼ ಎಂದರು.
ಇದನ್ನೂ ಓದಿ | ಮಂಡ್ಯದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ: ಬೃಹತ್ ಸಮಾವೇಶಕ್ಕೂ ಮುನ್ನ ಭರ್ಜರಿ ಬಾಡೂಟ