Site icon Vistara News

congress guarantee: ಗ್ಯಾರಂಟಿಗಳ ಅನುಷ್ಠಾನವು ಸಿದ್ದರಾಮಯ್ಯ ಚೆಕ್‌ಗೆ ಸಹಿ ಹಾಕುವಷ್ಟು ಸುಲಭ ಅಲ್ಲ: ಸಚಿವ ಡಾ. ಸುಧಾಕರ್

dr mc sudhakar talking about congress guarantee

ಚಿಂತಾಮಣಿ (ಚಿಕ್ಕಬಳ್ಳಾಪುರ): ಈ ಬಾರಿಯ ವಿಧಾನಸಭಾ ಚುನಾವಣೆಗೆ 5 ಗ್ಯಾರಂಟಿಗಳನ್ನು (congress guarantee) ನೀಡಿದ್ದ ಕಾಂಗ್ರೆಸ್‌ ಈಗ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸೇರಿದಂತೆ ನಾಗರಿಕರು ಅದರ ಅನುಷ್ಠಾನಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್‌ನ ಅನೇಕ ಸಚಿವರು ಪ್ರತಿಕ್ರಿಯೆ ನೀಡಿದ್ದು, ಅನುಷ್ಠಾನಕ್ಕೆ ಬದ್ಧವಾಗಿದ್ದು, ಷರತ್ತುಗಳು ಅನ್ವಯ ಎಂದು ಹೇಳುತ್ತಿದ್ದಾರೆ. ಈಗ ನೂತನ ಸಚಿವ ಡಾ. ಎಂ.ಸಿ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಗ್ಯಾರಂಟಿಗಳ ಅನುಷ್ಠಾನವು ಸಿದ್ದರಾಮಯ್ಯ ಅವರು ಚೆಕ್‌ಗೆ ಸಹಿ ಹಾಕುವಷ್ಟು ಸುಲಭ ಅಲ್ಲ. ಆದರೆ, ಗ್ಯಾರಂಟಿಗಳನ್ನು ಕೊಡಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಚಿಂತಾಮಣಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಡಾ. ಎಂ.ಸಿ. ಸುಧಾಕರ್‌, ಇಂದು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿರುವುದೇ ಗ್ಯಾರಂಟಿಗಳಿಂದಾಗಿದೆ. ಹೀಗಾಗಿ ಅವುಗಳನ್ನು ಅನುಷ್ಠಾನಕ್ಕೆ ತಂದೇ ತರುತ್ತೇವೆ. ಆದರೆ, ಹತಾಷರಾಗಿರುವ ವಿರೋಧ ಪಕ್ಷಗಳು ಮಾಧ್ಯಮಗಳಲ್ಲಿ ಸೃಷ್ಟಿ ಮಾಡುತ್ತಿದ್ದಾರೆ. ಇದು ಅವರ ರಾಜಕೀಯ ದಿವಾಳಿತನವನ್ನು ತೊರಿಸುತ್ತದೆ. ಕಾಂಗ್ರೆಸ್‌ನ ಐದು ಗ್ಯಾರಂಟಿಗಳನ್ನು ವರಿಷ್ಠರಾದ ರಾಹುಲ್ ಗಾಂಧಿ ಅವರು ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Loksabha 2024: ಎಚ್‌.ಡಿ. ದೇವೇಗೌಡರ ಆಶೀರ್ವಾದ ಪಡೆದ ಪ್ರತಾಪ್‌ ಸಿಂಹ; ಲೋಕಸಭೆ ಚುನಾವಣಾ ಲೆಕ್ಕಾಚಾರವೆಂದ ನೆಟ್ಟಿಗರು!

ಖಾತೆ ಹಂಚಿಕೆ ಬಗ್ಗೆ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ

ನಾನು ಸಚಿವನಾಗಿದ್ದೇ ನನ್ನ ಸೌಭಾಗ್ಯ. ಖಾತೆ ಹಂಚಿಕೆ ಬಗ್ಗೆ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಮಾದ್ಯಮಗಳಲ್ಲಿ ಹರಿದಾಡುತ್ತಿರುವ ಪಟ್ಟಿಯು ಅನಧಿಕೃತವಾಗಿವೆ. ಆ ಪಟ್ಟಿಯಲ್ಲಿರುವ ಖಾತೆ ಮಾಹಿತಿಯು ಅನಧಿಕೃತ ಅಲ್ಲ. ಅವುಗಳ ಪಟ್ಟಿಗಳಿಗೆ ಮಾನ್ಯತೆ ಇಲ್ಲ. ಯಾವುದೇ ಪಟ್ಟಿಗಳಿಗೆ ರಾಜ್ಯಪಾಲರ ಅಂಕಿತವಾಗಿಲ್ಲ. ನನಗೆ ಯಾವುದೇ ಖಾತೆ ನೀಡಿದರೂ ನಿಭಾಯಿಸುವ ಶಕ್ತಿ ಇದೆ ಎಂದು ಸಚಿವ ಡಾ. ಎಂ.ಸಿ. ಸುಧಾಕರ್‌ ತಿಳಿಸಿದ್ದಾರೆ.

ಗ್ಯಾರಂಟಿ ಕಾರ್ಡ್ ಎಸೆದಂತೆ ಎಲ್ಲರಿಗೂ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ: ಸತೀಶ್‌ ಜಾರಕಿಹೊಳಿ

ಬೆಳಗಾವಿ: ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ ನಾವು ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ. ನಿರ್ಗತಿಕರು, ಬಡವರು ಯಾರಿದ್ದಾರೋ ಅವರನ್ನು ಗುರುತಿಸಿ ಗ್ಯಾರಂಟಿ ಯೋಜನೆಯನ್ನು ತಲುಪಿಸುತ್ತೇವೆ ಎಂದು ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.

ಬೆಳಗಾವಿಯ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ರಾಜ್ಯದ ಜನರು ಬಹಳಷ್ಟು ನಿರೀಕ್ಷೆಗಳನ್ನು ನಮ್ಮ ಸರ್ಕಾರದ ಮೇಲೆ ಇಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದರು.

ನಾವು ಗ್ಯಾರಂಟಿ ಈಡೇರಿಸಲು ಸಿದ್ಧರಿದ್ದೇವೆ. ಆದರೆ, ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ. ಗ್ಯಾರಂಟಿ ನೀಡಿದ್ದು ನಾವು, ಅವರಲ್ಲ. ಗ್ಯಾರಂಟಿ ಯೋಜನೆ ಈಡೇರಿಸಲು ಸಮಯ ಬೇಕು. ಯೋಜನೆ ಜಾರಿಗಾಗಿ ಈಗಾಗಲೇ ಸಿದ್ಧತೆಗಳು ನಡೆದಿವೆ, ನಾವು ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.

ಎಲೆಕ್ಷನ್‌ ರೀತಿ ಮನೆ ಮನೆಗೆ ಹಂಚಲಾಗುವುದಿಲ್ಲ: ಕೆ.ಎನ್.‌ ರಾಜಣ್ಣ

ತುಮಕೂರು: ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿ ಮಾಡಿಯೇ ತೀರುತ್ತೇವೆ. ಅರ್ಹರನ್ನು ಗುರುತಿಸಬೇಕು, ಚುನಾವಣೆಯಂತೆ ಮನೆ ಮನೆಗೆ ಹಂಚಲಾಗುವುದಿಲ್ಲ. ಜೂನ್‌ 1ರಂದು ಎಲ್ಲ ಸಿದ್ಧತೆಗಳೊಂದಿಗೆ ಕ್ಯಾಬಿನೆಟ್‌ಗೆ ಬರಲು ಅಧಿಕಾರಿಗಳಿಗೆ ತಿಳಿಸಿಲಾಗಿದೆ ಎಂದು ಕೆ.ಎನ್.‌ ರಾಜಣ್ಣ ತುಮಕೂರಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Bandipur National Park: ಬಂಡೀಪುರವೀಗ ಫುಲ್‌ ರಶ್, ದಿನಕ್ಕೆ 8 ಲಕ್ಷ ರೂ. ಆದಾಯ; ಇದು ಮೋದಿ ಎಫೆಕ್ಟ್‌!

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಬ್ಬ ವಚನ ಭ್ರಷ್ಟ, ಅವರ ಮಾತಿಗೆ ಮಹತ್ವ ಬೇಡ. ಸ್ಪಷ್ಟ ಬಹುಮತ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದರು. ಆ ಮಾತುಗಳನ್ನು ಉಳಿಸಿಕೊಳ್ಳಲಿ. ಬಡವರ ಪಾಲಿನ ಸೌಲಭ್ಯಗಳು ದೊರಕುತ್ತವೆ. 200 ಯೂನಿಟ್ ವಿದ್ಯುತ್ ನೀಡುತ್ತೇವೆ. ಜನರು ಮುಗ್ದರಿದ್ದಾರೆ, ಅವರನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು. ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ನಿಯಮ ಬಾಹಿರವಾಗಿ ಜಾರಿಯಾಗಿರುವ ಕಾಮಗಾರಿಗಳನ್ನು ತಡೆಯಲಾಗುವುದು ಎಂದು ರಾಜಣ್ಣ ಹೇಳಿದ್ದಾರೆ.

Exit mobile version