ಬೆಂಗಳೂರು: ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ಸಚಿವ ಸಂಪುಟ ಸಭೆ ನಡೆಯಿತು. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಗಂಭೀರ ಚರ್ಚೆಯಾಗಿದ್ದು, ಪರಿಷತ್‌ಗೆ ಸುಧಾಮ್‌ದಾಸ್ ನೇಮಕ ಕುರಿತೂ ಮಾತುಕತೆ ನಡೆಯಿತು. ಪ್ರಮುಖವಾಗಿ ರಾಜ್ಯದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಭೋಜನ ದರ ಹೆಚ್ಚಳ ಮಾಡಲು ಸಂಪುಟ ಸಭೆ (Cabinet Meeting) ತೀರ್ಮಾನಿಸಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಕಸರತ್ತು ನಡೆಸುತ್ತಿದ್ದು, ಇದರ ಬಿಸಿ ಇನ್ನು ಮುಂದೆ ಇಂದಿರಾ ಕ್ಯಾಂಟೀನ್‌ಗಳಿಗೂ ತಟ್ಟಲಿದೆ. ಏಕೆಂದರೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟದ ದರ ಹೆಚ್ಚಳ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಒಂದು ಊಟಕ್ಕೆ 62 ರೂ. ನಿಗದಿಯಾಗಿದ್ದು, ಇದರಲ್ಲಿ ಸಾರ್ವಜನಿಕರಿಂದ 25 ರೂ. ಸ್ವೀಕರಿಸಿ, ಸರ್ಕಾರದಿಂದ 37 ರೂ. ನೀಡಲಾಗುತ್ತದೆ. ಈ ದರ ಬೆಂಗಳೂರು ಹೊರತುಪಡಿಸಿ ರಾಜ್ಯದೆಲ್ಲೆಡೆ ಆ.20ರಿಂದಲೇ ಜಾರಿಯಾಗಲಿದೆ. ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳ ಊಟದ ದರ ಬಗ್ಗೆ ಚರ್ಚೆಯಾಗಿಲ್ಲ.
ಇದನ್ನೂ ಓದಿ | Cauvery Dispute : ಆ.21ರಂದು ಮಂಡ್ಯ ನಗರ, ಬೆಂಗಳೂರು- ಮೈಸೂರು Express way ಬಂದ್‌ಗೆ ಬಿಜೆಪಿ ನಿರ್ಧಾರ
ಬೆಂಗಳೂರಿನಲ್ಲಿ ಊಟಕ್ಕೆ 10 ರೂ. ಹಾಗೂ ಇತರೆಡೆ ನಗರ ಸ್ಥಳೀಯ ಸಂಸ್ಥೆಗಳ ಕ್ಯಾಂಟೀನ್‌ನಲ್ಲಿ 25 ರೂ. ನಿಗದಿಯಾಗಿದೆ. ಜತೆಗೆ ಹಳೆಯ ಇಂದಿರಾ ಕ್ಯಾಂಟೀನ್ ದುರಸ್ತಿಗೆ 27 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ.
ಇನ್ನು ಕಾವೇರಿ ನೀರು ವಿಚಾರದಲ್ಲಿ ಸರ್ಕಾರ ರಾಜ್ಯದ ಹಿತ ಕಾಯಲಿಲ್ಲ ಎಂಬ ಆರೋಪ ಕೇಳಿಬಂದಿದ್ದರಿಂದ ಕಾನೂನು ಮಾರ್ಗದ ಸಾಧ್ಯತೆ ಕುರಿತು ಮಾತುಕತೆ ನಡೆಯಿತು. ಕ್ಯಾಬಿನೆಟ್‌ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನೂ ಆಹ್ವಾನಿಸಲಾಗಿತ್ತು. ಕಾವೇರಿ ನೀರು ಹಂಚಿಕೆ ಬಗ್ಗೆ ಸೋಮವಾರ ಮನವಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮಂಡ್ಯ ಬಂದ್‌ಗೆ ಬಿಜೆಪಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಸಿಎಂ ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದಾರೆ. ಯಾರೂ ಪ್ರತಿಭಟನೆ ಮಾಡುವುದು ಬೇಡ, ಸದ್ಯದಲ್ಲೇ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Power point with HPK : ಗ್ಯಾರಂಟಿಗಳಿಂದ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ; ಕೆ.ಜೆ. ಜಾರ್ಜ್ ಪ್ರತಿಪಾದನೆ
ಸಭೆ ಬಳಿಕ ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಸಚಿವ ಸಂಪುಟ ಸಭೆ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ 12 ವಿಷಯಗಳನ್ನು ಪರಿಶೀಲನೆಗೆ ತೆಗೆದುಕೊಂಡೆವು ಎಂದು ಅವರು ಮಾಹಿತಿ ನೀಡಿದರು.
ಸಚಿವ ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು
1.ಬೆಂಗಳೂರಿನ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ಲಂಚ ಸ್ವೀಕಾರ ಪ್ರಕರಣದಲ್ಲಿ ಡಾ. ನಾಗಮಣಿ ಅವರ ಕಡ್ಡಾಯ ನಿವೃತ್ತಿ ಆದೇಶ ವಾಪಸ್. ಹೈಕೋರ್ಟ್‌ನಲ್ಲಿ ತಪ್ಪಿತಸ್ಥರಲ್ಲ ಎಂದು ಸಾಬೀತಾಗಿದ್ದರಿಂದ ಆದೇಶ ವಾಪಸ್ ಪಡೆಯಲು ನಿರ್ಧಾರ.
2. ಲಂಚ ಆರೋಪ ಪ್ರಕರಣದಲ್ಲಿ ಅಧೀನ ಕಾರ್ಯದರ್ಶಿ ಪಾಪಣ್ಣ ವಿರುದ್ಧ ಇಲಾಖಾ ವಿಚಾರಣೆಯಲ್ಲೂ ಆರೋಪ ಸಾಬೀತಾಗಿದ್ದರಿಂದ ಅವರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಲು ಒಪ್ಪಿಗೆ.
3. ರಾಜ್ಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ಗೆ ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಬಳಿ 5 ಎಕರೆ ಜಮೀನು ನೀಡಲು ತಾತ್ವಿಕ ಒಪ್ಪಿಗೆ. ರಸ್ತೆಯೇ ಇಲ್ಲ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದರಿಂದ ಅಂತಿಮ ನಿರ್ಣಯ ಮಾಡಲು ಸಿಎಂಗೆ ಪರಮಾಧಿಕಾರ ನೀಡಲು ತೀರ್ಮಾನ.
4. ಬಾಗಲಕೋಟೆ ಹುನಗುಂದದ ಸಂಗಮ ಗ್ರಾಮದ ಹೆಸರನ್ನು ಕೂಡಲ ಸಂಗಮ ಎಂದು ಬದಲಿಸಲು ಒಪ್ಪಿಗೆ.
5. 1 ರಿಂದ 9ನೇ ತರಗತಿವರೆಗೆ ಕಲಿಕಾ ಬಲವರ್ಧನೆ ಕಾರ್ಯಕ್ರಮಕ್ಕಾಗಿ 78 ಕೋಟಿ ರೂ.ವೆಚ್ಚ ಮಾಡಲು ಒಪ್ಪಿಗೆ.
6. ಕೊಡಗು ವೈದ್ಯಕೀಯ ಸಂಸ್ಥೆ ಕಟ್ಟಡದ ಪರಿಷ್ಕೃತ ವೆಚ್ಚ- 27.88 ಕೋಟಿ ರೂ. ನೀಡಲು ಒಪ್ಪಿಗೆ.
7. ಗದಗ ಜಿಮ್ಸ್ ಆವರಣದಲ್ಲಿ ಬೋಧಕರ 438 ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ 138 ಕೋಟಿ ರೂ. ಅಂದಾಜಿಗೆ ಒಪ್ಪಿಗೆ
8. ಬಿಬಿಎಂಪಿ ಹೊರತುಪಡಿಸಿ ಉಳಿದ ನಗರಾಡಳಿತದಲ್ಲಿ 188 ಇಂದಿರಾ ಕ್ಯಾಂಟೀನ್ ಸ್ಥಾಪನೆ, ಆಯಾ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಬೇಕು, ಈಗಾಗಲೆ ಇರುವ ಇಂದಿರಾ ಕ್ಯಾಂಟೀನ್ ಜತೆಗೆ ಹೊಸ ಕ್ಯಾಂಟೀನ್ ಸ್ಥಾಪನೆ. ಊಟದ ದರ ಹೆಚ್ಚಳಕ್ಕೆ ನಿರ್ಧಾರ.
9. ರಾಯಚೂರಿನ ವಿವಿಧ ಕೆರೆಗಳಿಗೆ ನೀರು ತುಂಬಿಸಲು 146 ಕೋಟಿ ರೂ. ಗೆ ಒಪ್ಪಿಗೆ
10. ನಿವೃತ್ತ ಜಿಲ್ಲಾ ನ್ಯಾಯಾಧೀಶೆ ನಾಗರತ್ನ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಂದು ವರ್ಷಕ್ಕೆ ಕಾನೂನು ಸಲಹೆಗಾರರಾಗಿ ನೇಮಕ.
11. ಕ್ರಿಸ್ಟಿಫೈಡ್ ಸಂಸ್ಥೆಗೆ 250 ಕೋಟಿ ರೂ. ನೀಡಲು ಒಪ್ಪಿಗೆ. ಮಕ್ಕಳಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡುವ ಕ್ರಿಸ್ಟಿಫೈಡ್ ಸಂಸ್ಥೆ ಜತೆ ಬಹುದಿನಗಳಿಂದ ವ್ಯಾಜ್ಯ ನಡೆದುಕೊಂಡು ಬಂದಿತ್ತು. ಸುಪ್ರೀಂ ಕೋರ್ಟ್ 270 ಕೋಟಿ ರೂ. ಡೆಪಾಸಿಟ್ ಮಾಡಿ ಎಂದು ಹೇಳಿದ್ದರಿಂದ ಒಪ್ಪಿಗೆ ನೀಡಲಾಗಿದೆ. ಈ ಬಗ್ಗೆ ನಾಲ್ಕು ವಾರದೊಳಗೆ ಮೇಲ್ಮನವಿ ಸಲ್ಲಿಸಲು ನಿರ್ಧಾರ.
12. ರಾಯಚೂರು-ಸಿಂಧನೂರು 76 ಕಿ.ಮೀ.ರಸ್ತೆ ಅಭಿವೃದ್ಧಿಗೆ 1600 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಇದು ಹೆಚ್ಚಿನ ಮೊತ್ತ ಆದ ಹಿನ್ನೆಲೆಯಲ್ಲಿ ಮರು ಪ್ರಸ್ತಾವನೆ ಸಲ್ಲಿಸಲು ಸೂಚನೆ.