Site icon Vistara News

ಸಕಲೇಶಪುರದಲ್ಲಿ ರಾಜಕೀಯ ವಿಚಾರಕ್ಕೆ ಶುರುವಾದ ಜಗಳ; ಮಚ್ಚಿನಿಂದ ಸ್ನೇಹಿತನ ಎಡಗೈಯನ್ನೇ ಕಡಿದ

ಹಾಸನ: ರಾಜಕೀಯ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಜಗಳ ನಡೆದಿದ್ದು, ಮಚ್ಚಿನಿಂದ ಸ್ನೇಹಿತನ ಕೈಯನ್ನೇ ಕಡಿದಿರುವ ಘಟನೆ ನಡೆದಿದೆ. ಇಲ್ಲಿನ ಸಕಲೇಶಪುರ ತಾಲೂಕಿನ ಹೊಸ್ಕವಳ್ಳಿ ಗ್ರಾಮದಲ್ಲಿ ರಮೇಶ್ ಎಂಬಾತ ತನ್ನ ಸ್ನೇಹಿತ ಗುರುಮೂರ್ತಿಗೆ ಮಚ್ಚಿನಿಂದ ಹಲ್ಲೆ ಮಾಡಿ ಎಡಗೈ ಕತ್ತರಿಸಿದ್ದಾನೆ.

ಗುರುಮೂರ್ತಿ ಬಿಜೆಪಿ ಪಕ್ಷದ ಕಾರ್ಯಕರ್ತನಾದರೆ, ರಮೇಶ್ ಜೆಡಿಎಸ್‌ ಪಕ್ಷದ ಕಾರ್ಯಕರ್ತನಾಗಿದ್ದ. ಆದರೆ, ಇವರಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ, ಹಣದ ವಿಚಾರಕ್ಕೆ ಕಿರಿಕ್‌ ಶುರುವಾಗಿ ರಾಜಕೀಯ ರೂಪ ಪಡೆದಿದೆ. ಗುರುಮೂರ್ತಿ ಬಳಿ ರಮೇಶ್‌ 85 ಸಾವಿರ ರೂಪಾಯಿ ಪಡೆದಿದ್ದ. ಹಣವನ್ನು ವಾಪಸ್ ಕೊಡವಂತೆ ಗುರುಮೂರ್ತಿ ಕೇಳಿದ್ದರು. ಈ ವೇಳೆ ರಮೇಶ್ ಹಣ ಕೊಡುತ್ತೇನೆ ಎಂದು ಸತಾಯಿಸಿದ್ದ.

ಬಾಳ್ಳುಪೇಟೆಯ ಜೆಪಿ ನಗರದಲ್ಲಿ ಮತ್ತೆ ಹಣಕಾಸು ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ಶುರುವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗುರುಮೂರ್ತಿ ಹೇಳಿದ್ದರೆ, ಇತ್ತ ರಮೇಶ್‌ ಜೆಡಿಎಸ್‌ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿದ್ದಾನೆ. ಇದೆ ವಿಚಾರ ಅತಿರೇಕಕ್ಕೆ ಹೋಗಿ ಇಬ್ಬರ ನಡುವೆ ಜಗಳ ಶುರುವಾಗಿ ಪರಸ್ಪರ ತಳ್ಳಾಡಿಕೊಂಡಿದ್ದಾರೆ. ಅಲ್ಲಿಂದ ಸ್ಥಳೀಯರೇ ಇಬ್ಬರ ಜಗಳವನ್ನು ಬಿಡಿಸಿ ಕಳುಹಿಸಿದ್ದಾರೆ.

ಇದನ್ನೂ ಓದಿ: leopard attack: ತಿ.ನರಸೀಪುರ ತಾಲೂಕಿನಾದ್ಯಂತ 15 ದಿನದಲ್ಲಿ ಕಬ್ಬಿನ ಕಟಾವಿಗೆ ಡಿಸಿ ಸೂಚನೆ; ಚಿರತೆ ಸೆರೆ ಕಾರ್ಯಾಚರಣೆ ಚುರುಕು

ಆದರೆ ಹೊಸ್ಕಳ್ಳಿ ಗ್ರಾಮಕ್ಕೆ ಕಾರಿನಲ್ಲಿ ಬಂದ ರಮೇಶ್, ಹಣ ಕೊಡುತ್ತೇನೆ ಮನೆಯಿಂದ ಹೊರಗೆ ಬಾ ಎಂದು ಗುರುಮೂರ್ತಿಗೆ ಫೋನ್ ಮಾಡಿ ಕರೆದಿದ್ದಾನೆ. ಮನೆಯಿಂದ ಹೊರಗೆ ಬಂದ ಗುರುಮೂರ್ತಿ ಕಾರಿನ ಬಳಿ ಬರುತ್ತಿದ್ದಂತೆ ರಮೇಶ್‌ ಮಚ್ಚು ಬೀಸಿದ್ದಾನೆ. ಮಚ್ಚಿನಿಂದ ತಪ್ಪಿಸಿಕೊಳ್ಳಲು ಎಡಗೈ ಅಡ್ಡ ಕೊಟ್ಟಿದ್ದು, ತೀವ್ರ ಗಾಯಗೊಂಡಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಗುರುಮೂರ್ತಿ ಚಿಕಿತ್ಸೆ ಪಡೆಯುತ್ತಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version