ಶಿವಮೊಗ್ಗ: ಇಲ್ಲಿನ ಹನಸವಾಡಿ ಗೋಂಧಿಚಟ್ನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ (ಜ.೧೬) ಮಧ್ಯಾಹ್ನ ಭೋಜನ ಸೇವಿಸಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಪ್ರಕರಣದ ಬೆನ್ನಲ್ಲೇ ಮಂಗಳವಾರ (ಜ.೧೭) ಶಿವಮೊಗ್ಗ ತಾಲೂಕಿನ ಬೇರೆ ಮೂರು ಮೊರಾರ್ಜಿ ಶಾಲೆಗಳ ೬೦ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ (Student Hospitalized) ಸೇರಿದ್ದಾರೆ. ಇದು ಆಹಾರ ಪೂರೈಕೆ ಸಮಸ್ಯೆಯೇ ಎಂಬ ಅನುಮಾನವೂ ಮೂಡಿದೆ.
ಹನಸವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಸೋಮವಾರ ಭೋಜನ ಸೇವಿಸಿ ಅಸ್ವಸ್ಥಗೊಂಡಿದ್ದ ೯೩ ಮಕ್ಕಳನ್ನು ಅಂದು ರಾತ್ರಿಯೇ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇವರೆಲ್ಲರೂ ಗುಣಮುಖರಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಡಿಸ್ಚಾರ್ಜ್ ಮಾಡಲಾಗಿತ್ತು. ಈಗ ಇದರ ಬೆನ್ನಲ್ಲೇ ಗಾಜನೂರಿನ 20, ಮಲವಗೊಪ್ಪದ 30 ಹಾಗೂ ಹೊಳಲೂರಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10 ಮಕ್ಕಳು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂಬ ಮಾಹಿತಿ ಬಂದಿದೆ.
ಹನಸವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳಲ್ಲಿ ತೀವ್ರ ವಾಂತಿ ಕಾಣಿಸಿಕೊಂಡಿತ್ತು. ಹೊಟ್ಟೆ ನೋವಿನಿಂದ ಬಳಲಿದ ವಿದ್ಯಾರ್ಥಿನಿಯರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಹಾರ, ನೀರಿನಲ್ಲಿ ವ್ಯತ್ಯಾಸವಾಗಿರುವುದು ಕಾರಣ ಎಂದು ಶಂಕಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಈಗ ತಾಲೂಕಿನ ಉಳಿದ ವಸತಿ ಶಾಲೆಯಲ್ಲಿಯೂ ಮಕ್ಕಳು ಅಸ್ವಸ್ಥರಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಪೂರೈಕೆಯಲ್ಲಿ ಏನಾದರೂ ಸಮಸ್ಯೆಯಾಗಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ | Bull attack | ಸೈಕಲ್‌ನಲ್ಲಿ ಹೋಗುತ್ತಿದ್ದ 7ರ ಬಾಲಕನ ಮೇಲೆ ಗೂಳಿ ದಾಳಿ: ಕೊಂಬಿನಿಂದ ಎತ್ತಿ ಎಸೆದ ಬೀಡಾಡಿಗಳು