Site icon Vistara News

Sirsi | ಶಿರಸಿಯಲ್ಲಿ ಪರಿವಾರ ಸಹಕಾರಿ ಸಂಘ ನಿಯಮಿತ ಇಂದು ಉದ್ಘಾಟನೆ

shrinivas hebbar

ಶಿರಸಿ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಶಿರಸಿಯಲ್ಲಿ ( Sirsi) ಪರಿವಾರ ಸಹಕಾರಿ ಸಂಘ ಇಂದು ಅಸ್ತಿತ್ವಕ್ಕೆ ಬರುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ನೂತನ ಸಹಕಾರಿ ಸಂಘವನ್ನು ಉದ್ಘಾಟಿಸಲಿದ್ದಾರೆ.

ಇದುವರೆಗೆ ಆರ್ಥಿಕ ನೆರವು ನೀಡಲು ಸಾಧ್ಯ ಆಗದ ಕುಟುಂಬಗಳಿಗೆ, ಬಡವರ ಸಂಕಷ್ಟದ ಕ್ಷಣಗಳಿಗೆ ಆಪದ್ಬಾಂಧವವಾಗಿ, ಸಹಕಾರಿ ಕ್ಷೇತ್ರದ ಮೂಲಕ ಸ್ಪಂದಿಸುವ ಆಶಯದಲ್ಲಿ ನೂತವಾಗಿ ಪರಿವಾರ ಸಹಕಾರಿ ಸಂಘ ಸ್ಥಾಪಿಸಲಾಗುತ್ತಿದೆ ಎಂದು ನೂತನ ಸಂಘದ ಅಧ್ಯಕ್ಷ, ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ತಿಳಿಸಿದ್ದಾರೆ.


ಸಮಾಜದ ಪರಿವಾರವಾಗಿ, ಸಮಾಜದಲ್ಲಿ ಕಷ್ಟದಲ್ಲಿ ಇರುವವರನ್ನು ಕೈ ಹಿಡಿದು ಮುಖ್ಯವಾಹಿನಿಗೆ ತರುವ ಆಶಯದಲ್ಲಿ ಸಂಸ್ಥೆ ಕಟ್ಟಲಾಗಿದೆ. ಸಂಸ್ಥೆಗೆ ಕೇವಲ ಲಾಭ ಮಾಡುವ ಉದ್ದೇಶ ಇಲ್ಲ. ಠೇವಣಿದಾರರಿಗೆ ಅವರ ಠೇವಣಿಗೆ ಅತಿ ಹೆಚ್ಚು ಬಡ್ಡಿದರ ಹಾಗೂ ಉಳಿದ ಕಡೆ ಇರುವ ದರಕ್ಕಿಂತ‌ ಕಡಿಮೆ ಬಡ್ಡಿಯಲ್ಲಿ ಸಾಲವನ್ನೂ ನೀಡಲಾಗುತ್ತದೆ. ಸಾಲ ಹಾಗೂ ಠೇವಣಿ ನಡುವಿನ ಬಡ್ಡಿದರ ಕಡಿಮೆ ಇರಲಿದೆ. ಜನರ ನೋವಿಗೆ, ಪ್ರಾಮಾಣಿಕ ಶ್ರಮಿಕರಿಗೆ ನೆರವಾಗುವ ಆಶಯವಿದೆ. ಸಾಲ ಪಡೆದವರು ಪ್ರಾಮಾಣಿಕವಾಗಿ ವಾಪಸ್ ಮಾಡಿ ನಮ್ಮ ಸಮಾಜಮುಖಿ ಸೇವೆಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಇಂದು ಉದ್ಘಾಟನೆ: ಗೃಹ‌ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಸಂಜೆ ೬:೧೫ಕ್ಕೆ ನಗರದ ಸಿಪಿ ಬಜಾರ್ ನಲ್ಲಿನ ಸಂಕಲ್ಪ ಕಟ್ಟಡದಲ್ಲಿ ನೂತನ ಕಚೇರಿ ಉದ್ಘಾಟಿಸಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಪರಿವಾರದ ಷೇರು ಸರ್ಟಿಫಿಕೇಟನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಶೇಷ ಠೇವಣಿ ಸರ್ಟಿಫಿಕೇಟನ್ನು ಸಚಿವ ಅರಬೈಲ್ ಶಿವರಾಮ ಹೆಬ್ಬಾರ ಬಿಡುಗಡೆಗೊಳಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ಸಹಕಾರಿ ಉಪ ನಿಬಂಧಕ ಮಂಜುನಾಥ ಆರ್, ಮೆಘಾಲೈಟ್ ಚೇರ್ಮನ್ ಎಚ್.ವಿ.ಧರ್ಮೇಶ, ವಿಸ್ತಾರ‌ ಮೀಡಿಯಾದ ಪ್ರಧಾನ ಸಂಪಾದಕ, ಟ್ರಸ್ಟಿ ಹರಿಪ್ರಕಾಶ ಕೋಣೆಮನೆ ಪಾಲ್ಗೊಳ್ಳುವರು. ಮುಖ್ಯ ಕಾರ್ಯನಿರ್ವಾಹಕ ಪ್ರಶಾಂತ‌ ಕೆ.ಎಸ್ ಇತರರು ಉಪಸ್ಥಿತರಿರುವರು.

ಸಾಧಕರಿಗೆ ಸಮ್ಮಾನ:‌ ಇದೇ ವೇಳೆ ಹಿರಿಯ ಸಹಕಾರಿಗಳಾದ ಜಿ.ಎಂ.ಹೆಗಡೆ ಹುಳಗೋಳ, ಆರ್.ಎಂ.ಹೆಗಡೆ ಬಾಳೆಸರ, ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಅವರಿಗೆ ಸಮ್ಮಾನ ಮಾಡಲಾಗುತ್ತಿದೆ. ರಾತ್ರಿ ೮ಕ್ಕೆ ಸತ್ಕಾರ ಕೂಟ ಹಮ್ಮಿಕೊಳ್ಳಲಾಗಿದೆ ಎಂದರು.

Exit mobile version