Site icon Vistara News

Rain News | ರಾಜ್ಯದಲ್ಲಿ ಸತತ ಮಳೆ, ಭರ್ತಿಯತ್ತ ಸಾಗಿದ ಪ್ರಮುಖ ಜಲಾಶಯಗಳು

ಬೆಂಗಳೂರು: ರಾಜ್ಯದ ಬಹುತೇಕ ಕಡೆ ಭಾರಿ ಪ್ರಮಾಣದಲ್ಲಿ ಮಳೆ ಆಗುತ್ತಿದ್ದು, ನೀರಿನ ಹರಿವಿನಲ್ಲಿ ಹೆಚ್ಚಳವಾಗಿದೆ. ಹಾಗೆಯೇ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಹೀಗಾಗಿ ಪ್ರಮುಖ ಜಲಾಶಯಗಳು ತುಂಬಲು ಆರಂಭಿಸಿದ್ದು, ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವು ಹೆಚ್ಚಳ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೆಆರ್‌ಎಸ್ ಡ್ಯಾಂಗೆ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಿಂದ ಯಾವುದೇ ಕ್ಷಣದಲ್ಲಾದರೂ ನೀರು ಬಿಡುಗಡೆ ಸಾಧ್ಯತೆಯಿದೆ ಎಂದು ಕಾವೇರಿ ನದಿ ಪಾತ್ರದ ಜನರಿಗೆ ಕಾವೇರಿ ನೀರಾವರಿ ನಿಗಮ ಮುನ್ನೆಚ್ಚರಿಕೆ ನೀಡಿದೆ. ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಜನರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಸದ್ಯ ಕೆಆರ್‌ಎಸ್ ಡ್ಯಾಂ 116.94 ಅಡಿ ಭರ್ತಿಯಾಗಿದ್ದು (ಗರಿಷ್ಠ ಮಟ್ಟ- 124.80 ಅಡಿ), ಡ್ಯಾಂಗೆ 33,602 ಕ್ಯೂಸೆಕ್ ಒಳ ಹರಿವು ಇದ್ದು, 3,624 ಕ್ಯೂಸೆಕ್ ಹೊರಹರಿವು ಇದೆ.

ತುಂಗಭದ್ರಾ ಡ್ಯಾಂಗೆ ಅಪಾರ ಪ್ರಮಾಣದ ನೀರು
ಕೊಪ್ಪಳ : ಮಲೆನಾಡಿನಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ ತುಂಗಭದ್ರಾ ಜಲಾಶಯಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಸದ್ಯ 60941 ಕ್ಯೂಸೆಕ್ ಒಳಹರಿವು ಇದ್ದು, 58.212 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 105 ಟಿಎಂಸಿ ಇದ್ದು, ಸದ್ಯ 1609.85 ಅಡಿ ನೀರು ಸಂಗ್ರಹವಾಗಿದೆ (ಗರಿಷ್ಠ ಮಟ್ಟ 1633 ಅಡಿ). ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದೆ. ಅಪಾರ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಸಂತಸ ಉಂಟಾಗಿದ್ದು, ಜುಲೈ 10ರಿಂದ ಜಲಾಶಯದ ನಾಲೆಗಳಿಗೆ ನೀರು ಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇದನ್ನೂ ಓದಿ | Rain News | ರಾಜ್ಯಾದ್ಯಂತ ಭಾರಿ ಮಳೆ: ಕೊಡಗಲ್ಲಿ ಮನೆ ಕುಸಿತ, ಭೂಕುಸಿತ ಪ್ರದೇಶಗಳೆಡೆ ಸಚಿವರ ಜಂಟಿ ಭೇಟಿ

ಭದ್ರಾ ಜಲಾಶಯದಲ್ಲಿ 163.9 ಅಡಿ ನೀರು
ಶಿವಮೊಗ್ಗ: ಜಿಲ್ಲೆಯ ಭದ್ರಾ ಜಲಾಶಯದಲ್ಲಿ ಸದ್ಯ 163.9 ಅಡಿ ನೀರಿದ್ದು (ಗರಿಷ್ಠ ಮಟ್ಟ-186 ಅಡಿ), ಜಲಾಶಯದ ಒಳಹರಿವು 31667 ಕ್ಯೂಸೆಕ್ ಇದ್ದು, ಹೊರಹರಿವು 139 ಕ್ಯೂಸೆಕ್ ಇದೆ. ಡ್ಯಾಂ ಒಟ್ಟು ಸಾಮರ್ಥ್ಯ 71.535 ಟಿಎಂಸಿ ಇದ್ದು, ಸದ್ಯ 46.495 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ಲಿಂಗನಮಕ್ಕಿ ಜಲಾಶಯದಲ್ಲಿ ಸದ್ಯ 1769.05 ಅಡಿ ನೀರಿದ್ದು‌ (ಗರಿಷ್ಠ ಮಟ್ಟ-1819 ಅಡಿ), ಒಳಹರಿವು 57638 ಕ್ಯೂಸೆಕ್ ಇದ್ದು, ಹೊರಹರಿವು-2444.68 ಕ್ಯೂಸೆಕ್‌ ಇದೆ. ಡ್ಯಾಂ ಒಟ್ಟು ಸಾಮರ್ಥ್ಯ 151.64 ಟಿಎಂಸಿ ಇದ್ದು, ಸದ್ಯ 38.36 ಟಿಎಂಸಿ ನೀರು ಸಂಗ್ರಹವಾಗಿದೆ.

ನಾರಾಯಣಪುರ ಜಲಾಶಯ ಭರ್ತಿಗೆ ಒಂದು ಅಡಿ ಬಾಕಿ
ರಾಯಚೂರು: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಜಲಾಶಯ ಭರ್ತಿಗೆ ಕೇವಲ ಒಂದು ಮೀಟರ್ ಮಾತ್ರ ಬಾಕಿ ಇದೆ. ಡ್ಯಾಂನಲ್ಲಿ 491.2 ಮೀಟರ್‌ನಷ್ಟು ನೀರು ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದಿಂದ ಕೃಷ್ಣ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಗ್ರಾಮಗಳ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಹೇಮಾವತಿ ನದಿ ಪಾತ್ರದ ಜನರಿಗೆ ಎಚ್ಚರಿಕೆ
ಹಾಸನ: ಜಿಲ್ಲೆಯ ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಹೇಮಾವತಿ ಜಲಾಶಯಕ್ಕೆ 16660 ಕ್ಯೂಸೆಕ್ ಒಳಹರಿವು ಇದೆ. ಹೇಮಾವತಿ ಡ್ಯಾಂ ತುಂಬಲು 9 ಅಡಿ ಬಾಕಿ ಇದ್ದು, ನದಿಗೆ ಒಳಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಮಯದಲ್ಲಾದರೂ ನೀರು ಬಿಡುಗಡೆ ಸಾಧ್ಯತೆಯಿದೆ. ಹೀಗಾಗಿ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮ ಹಾಗೂ ಗೊರೂರು ಹೇಮಾವತಿ ಯೋಜನಾ ವೃತ್ತದ ಇಂಜಿನಿಯರ್‌ ತಿಳಿಸಿದ್ದಾರೆ.

ಇದನ್ನೂ ಓದಿ | Rain News | ಮಹಾರಾಷ್ಟ್ರ ಮಳೆಗೆ ಬೆಳಗಾವಿ ತತ್ತರ; ಅಪಾಯಮಟ್ಟದತ್ತ ನದಿಗಳು, ಸೇತುವೆಗಳು ಜಲಾವೃತ

Exit mobile version