Site icon Vistara News

IT Raid: ಎಸ್‌.ಎಂ ಕೃಷ್ಣ ಸಹೋದರಿ ಮನೆ ಮೇಲೆ ಐಟಿ ದಾಳಿ, ಬ್ಯಾಡಗಿಯಲ್ಲಿ ಕೈ ಮುಖಂಡನಿಗೆ ಬಿಸಿ

IT Raid on SM Krishnas sisters house in Bangalore

IT Raid on SM Krishnas sisters house in Bangalore

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ (Karnataka Election 2023) ಹಿನ್ನೆಲೆಯಲ್ಲಿ ನಡೆಯುತ್ತಿದೆ ಎಂದು ಹೇಳಲಾದ ಆದಾಯ ತೆರಿಗೆ ಅಧಿಕಾರಿಗಳ ದಾಳಿಯ ಬಿಸಿ ಇದೀಗ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ (Former CM SM Krishna) ಅವರ ಸಹೋದರಿಗೂ ತಟ್ಟಿದೆ.

ಬೆಂಗಳೂರಿನ ಕೋರಮಂಗಲದ ಫಸ್ಟ್‌ ಬ್ಲಾಕ್‌ನಲ್ಲಿ ವಾಸವಾಗಿರುವ ಎಸ್‌.ಎಂ. ಕೃಷ್ಣ ಅವರ ಸಹೋದರಿ ಎಸ್‌.ಎಂ. ಸುನೀತಾ ಅವರ ಮನೆಗೆ ಈ ದಾಳಿ ನಡೆಸಿದೆ. ಸುಮಾರು ಎಂಟು ಮಂದಿ ಆಧಿಕಾರಿಗಳು, ಹಲವಾರು ವಾಹನಗಳಲ್ಲಿ ಆಗಮಿಸಿ ದಾಳಿ ಮಾಡಿ ಮಾಡಿದ್ದಾರೆ.

ಬಾಗ್ಮನೆ ಹೆಸರಿನಲ್ಲಿರುವ ನಿವಾಸ ಇದಾಗಿದ್ದು, ಈ ಮನೆಯಲ್ಲದೇ, ಬಾಗ್ಮನೆ ಬಿಲ್ಡರ್ಸ್‌ ಕಚೇರಿಗಳ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ. ಇದೇ ಈ ಕುಟುಂಬಕ್ಕೆ ಸೇರಿದ ಟ್ರಾನ್ ಇನ್ಸೈನಿಯಾ ಅಪಾರ್ಟ್ಮೆಂಟ್ ಮೇಲೆಯೂ ದಾಳಿ ಮಾಡಲಾಗಿದೆ.

ಆದಾಯ ತೆರಿಗೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ತಪಾಸಣೆ ನಡೆಸುತ್ತಿದ್ದು, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಇದು ಯಾವ ಕಾರಣಕ್ಕೆ ನಡೆದ ದಾಳಿ, ಇದಕ್ಕೂ ಚುನಾವಣೆಗೂ ಸಂಬಂಧವಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಬ್ಯಾಡಗಿಯಲ್ಲಿ ಕೈ ಮುಖಂಡನ ಮನೆಯಿಂದ 2 ಕೋಟಿ ರೂ. ವಶಕ್ಕೆ

ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ವಾಸವಾಗಿರುವ ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೆ ಕೂಡಾ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿರುವ ವಿದ್ಯಾನಗರದ ನಿವಾಸ ಇದಾಗಿದೆ. ಚನ್ನಬಸಪ್ಪ ಹುಲ್ಲತ್ತಿ ಅವರು ಮಾಜಿ ಎಪಿಎಂಸಿ ಅಧ್ಯಕ್ಷರಾಗಿದ್ದಾರೆ.

ಬ್ಯಾಡಗಿ ಪಟ್ಟಣದಲ್ಲಿರುವ ಕಾಂಗ್ರೆಸ್‌ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಅವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು.

ಮುಂಜಾನೆ ಈ ಮನೆಗೆ ದಾಳಿ ನಡೆದಿದ್ದು, ಮಧ್ಯಾಹ್ನದ ಹೊತ್ತಿಗೆ ಅದು ಮುಕ್ತಾಯಗೊಂಡಿದ್ದು, ಐಟಿ ಅಧಿಕಾರಿಗಳು ಮನೆಯಿಂದ ಹೊರ ತೆರಳಿದ್ದಾರೆ. ಅಧಿಕಾರಿಗಳು ಆಭರಣ ಸೇರಿದಂತೆ 2 ಕೋಟಿ 84 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅದೇ ಹೊತ್ತಿಗೆ ಹಲವು ದಾಖಲೆ ಪತ್ರಗಳನ್ನು ಕೂಡಾ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು, ಮೈಸೂರು ದಾಳಿಯಲ್ಲಿ 20 ಕೋಟಿ ಮೌಲ್ಯದ ನಗ ನಗದು ಸಿಕ್ಕಿತ್ತು

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಬೆಂಗಳೂರು ಹಾಗೂ‌ ಮೈಸೂರಿನಲ್ಲಿ ಫೈನಾನ್ಶಿಯರ್‌ಗಳ ಮನೆಗಳ ಮೇಲೆ ದಾಳಿ ನನಡೆಸಿ 20 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದರು.

ಮೈಸೂರು ಮತ್ತು ಬೆಂಗಳೂರಿನ ಶಾಂತಿನಗರ, ಕಾಕ್ಸ್ ಟೌನ್, ಶಿವಾಜಿ ನಗರ, ಆರ್‌ಎಂವಿ ಬಡಾವಣೆ, ಕನಿಂಗ್‌ ಹ್ಯಾಮ್‌ ರಸ್ತೆ, ಸದಾಶಿವ ನಗರ, ಕುಮಾರಪಾರ್ಕ್ ವೆಸ್ಟ್ ಸೇರಿದಂತೆ ಹಲವು ಕಡೆಗಳಲ್ಲಿ ವಾಸವಾಗಿರುವ ದೊಡ್ಡ ದೊಡ್ಡ ಫೈನಾನ್ಸಿಯರ್‌ಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಟೀಂ ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಲೆಕ್ಕಕ್ಕೆ ಸಿಗದೇ ಅಕ್ರಮವಾಗಿ ಸಂಗ್ರಹ ಮಾಡಿಕೊಂಡಿದ್ದ ಕಂತೆ ಕಂತೆ ಹಣ ವಶಪಡಿಸಿಕೊಂಡಿದ್ದಾರೆ.

ದಾಳಿಗೊಳಗಾದ ಫೈನಾನ್ಶಿಯರ್‌ಗಳಲ್ಲಿ ಕೆಲವರು ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಫಂಡ್ ಮಾಡಲು ಹಣ ಸಂಗ್ರಹ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಇನ್ನು ಕೆಲವರು ನೆಪ ಮಾತ್ರಕ್ಕೆ ಫೈನಾನ್ಶಿಯರ್‌ಗಳಂತಿದ್ದು, ಅವರು ರಾಜಕಾರಣಿಗಳ ಬೇನಾಮಿ ವ್ಯವಹಾರ ನೋಡಿಕೊಳ್ಳುವವರು. ದಾಳಿ ವೇಳೆ ಪತ್ತೆಯಾದ ಕೆಲ ದಾಖಲೆಗಳು ಹಾಗೂ ಪೈನಾನ್ಶಿಯರ್‌ಗಳು ನಡೆಸಿರುವ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ : Karnataka Election 2023 : ಪುಷ್ಪಗಳ ಹಾಸಿನ ಮೇಲೆ ಮೋದಿ ರೋಡ್‌ ಶೋ ; ಅರಳೀತೆ ಕಮಲ?

Exit mobile version