ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಏರಿಕೆ ಮಾಡಲು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿತ್ತು. ಇದೀಗ ಸುಗ್ರೀವಾಜ್ಞೆ ಆದೇಶ ಪ್ರತಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾನುವಾರ ಅಂಕಿತ ಹಾಕಿದ್ದಾರೆ.
ರಾಜ್ಯಪಾಲರ ಅಂಕಿತದಿಂದ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳು ಹಾಗೂ ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ ಹೆಚ್ಚಳವಾಗಿದೆ. ಇದರಿಂದ ರಾಜ್ಯ ಸರ್ಕಾರ, ಎಸ್‌ಸಿ ಮೀಸಲಾತಿ ಶೇ. 15 ರಿಂದ 17ಕ್ಕೆ, ಎಸ್‌ಟಿ ಮೀಸಲಾತಿ ಶೇ.3ರಿಂದ 7ಕ್ಕೆ ಏರಿಸಿ, ಸಂವಿಧಾನದ 9ನೇ ಪರಿಚ್ಛೇದದ ಅಡಿಯಲ್ಲಿ ರಕ್ಷಣೆ ಪಡೆದು ಮೀಸಲಾತಿ ಘೋಷಣೆಗೆ ಸಂಬಂಧಪಟ್ಟಂತೆ ರಾಜ್ಯ ಪತ್ರ ಹೊರಡಿಸಿದೆ.
ಇದನ್ನೂ ಓದಿ | Bharat Jodo | ಕರ್ನಾಟಕ ಯಾತ್ರೆ ಮುಗಿಸಿದ ರಾಹುಲ್: ರಾಜ್ಯದ ಜನತೆಗೆ ಬರೆದ ಪತ್ರದಲ್ಲೇನಿದೆ?
ಎಸ್‌ಸಿ ಎಸ್‌ಟಿ ಮೀಸಲಾತಿ ಏರಿಸಿ ಸುಗ್ರೀವಾಜ್ಞೆ ಆದೇಶ ಹೊರಡಿಸುವಂತೆ ಒತ್ತಾಯಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಹೋರಾಟ ಮುಂದುವರಿಸಿದ್ದರು. ಹೀಗಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಕ್ರಮ ಕೈಗೊಂಡಿದೆ.
ಎಸ್‌ಟಿ ಎಸ್‌ಟಿ ಮೀಸಲಾತಿ ಏರಿಕೆ ಬೆನ್ನಲ್ಲೇ ಇತರ ಸಮುದಾಯಗಳಿಂದಲೂ ಮೀಸಲಾತಿಗೆ ಒತ್ತಾಯ ಕೇಳಿಬಂದಿದೆ. ಈಗಾಗಲೇ ಒಕ್ಕಲಿಗ, ಪಂಚಮಸಾಲಿ, ಕುರುಬ ಸಮುದಾಯಗಳಿಂದ ಮೀಸಲಾತಿ ಏರಿಕೆ ಮಾಡುವಂತೆ ಒತ್ತಾಯ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಆಯಾ ಸಮುದಾಯದ ಸ್ವಾಮೀಜಿಗಳು ಮೀಸಲಾತಿ ಏರಿಸುವಂತೆ ಆಗ್ರಹಿಸಿ, ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ.
ಸರ್ಕಾರಕ್ಕೆ ಲಾಭವೇನು?
ಮೀಸಲಾತಿ ಏರಿಕೆಯಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಸಿ ಎಸ್‌ಟಿ ಮತಗಳನ್ನು ಸೆಳೆಯಲು ಬಿಜೆಪಿ ಸರ್ಕಾರಕ್ಕೆ ಅನುಕೂಲವಾಗಿದೆ. ಅಹಿಂದ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಮೀಸಲಾತಿ ಏರಿಕೆ ಮಾಡಿರಲಿಲ್ಲ. ನಮ್ಮ ಅವಧಿಯಲ್ಲಿ ಈ ಕೆಲಸವಾಯಿತು ಎಂದು ಬಿಜೆಪಿಗೆ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲೂ ಇದರ ಲಾಭ ಪಡೆಯಲು ಅನುಕೂಲವಾಗಲಿದೆ. ಮೀಸಲಾತಿ ಏರಿಕೆಯಿಂದ ಸರ್ಕಾರದ ವಿರುದ್ಧ ಕಾಂಗ್ರೆಸ್ ಬಳಸುತ್ತಿದ್ದ 40 ಪರ್ಸೆಂಟ್ ಕಮಿಷನ್ ಆರೋಪಗಳಿಂದ ಬಚಾವ್ ಆಗಬಹುದು. ಮೀಸಲಾತಿ ಲಾಭ ಪಡೆಯಲಿರುವ ಸಮುದಾಯಗಳ ಮತಗಳು ಇನ್ನಷ್ಟು ಹೆಚ್ಚು ಬಿಜೆಪಿ ಕಡೆ ಬರುವ ಸಾಧ್ಯತೆ ಇದೆ.
ರಾಜ್ಯಪಾಲರ ಅಂಕಿತ ಸಂತಸದ ಸಂಗತಿ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಕರ್ನಾಕಟದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವ ಬಗ್ಗೆ ನ್ಯಾಯಮೂರ್ತಿ ನಾಗಮೋಹನದಾಸ ಅವರ ಶಿಫಾರಸುಗಳನ್ನು ಒಪ್ಪಿ ಆಧ್ಯಾದೇಶವನ್ನು ಮಾಡಲು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿರುವುದು ಗೊತ್ತಿದೆ. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿರುವುದು ಸಂತಸದ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಇಂದು ಅಧಿಕೃತವಾದ ವಿಶೇಷ ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ. ಇದರಿಂದ ಇನ್ನು ಮುಂದೆ ಅನುಸೂಚಿತ ಜಾತಿಯ ಮೀಸಲಾತಿ ಪ್ರಮಾಣ 15 ರಿಂದ 17ಕ್ಕೆ ಏರಲಿದ್ದು, ಅನುಸೂಚಿತ ಪಂಗಡಗಳ ಮೀಸಲಾತಿ ಪ್ರಮಾಣ ಶೇ.3 ರಿಂದ 7ಕ್ಕೆ ಏರಿಸಲಾಗಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರವು ಮೀಸಲಾತಿ ಪ್ರಮಾಣ ಹೆಚ್ಚಿಸಿ ಬದ್ಧತೆಯಿದ ನಡೆದುಕೊಂಡಿದೆ. ಈ ಮೂಲಕ ಅನುಸೂಚಿತ ಜಾತಿ ಮತ್ತು ಪಂಗಡಗಳ ಜನಾಂಗಕ್ಕೆ ನಮ್ಮ ಸರ್ಕಾರ ದೀಪಾವಳಿ ಕೊಡುಗೆ ಕೊಟ್ಟಿದೆ. ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕಿರುವ ರಾಜ್ಯಪಾಲರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಆಧ್ಯಾದೇಶಕ್ಕೆ ವಿಧಾನ ಮಂಡಲದ ಎರಡೂ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಮಹಿಳೆಯ ಕಪಾಳಕ್ಕೆ ಹೊಡೆದ ವಿ.ಸೋಮಣ್ಣ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ: Sorry ಎಂದ ಸಚಿವ