ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿರುವುದರಿಂದ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಅಣೆಕಟ್ಟುಗಳಿಂದ ಅಪಾರ ಪ್ರಮಾಣದ ನೀರು ಹೊರ ಬಿಡಲಾಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಯಾವ ಜಲಾಶಯಗಳು ಎಷ್ಟು ನೀರಿನ ಮಟ್ಟವನ್ನು ಹೊಂದಿವೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಒಂದು ಟಿಎಂಸಿ ನೀರು ಬಂದರೆ ಭರ್ತಿಯಾಗಲಿದೆ ಕೆಆರ್‌ಎಸ್
ಮಂಡ್ಯ: ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆರ್ಭಟ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ನೆರೆಯ ಭೀತಿ ಹೆಚ್ಚಾಗಿದೆ. ಡ್ಯಾಂನಿಂದ 75,000 ರಿಂದ 1,50,000 ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇದೆ. ಆಸ್ತಿ ಪಾಸ್ತಿ, ಜಾನುವಾರು ರಕ್ಷಣೆಗೆ ಮುಂಜಾಗ್ರತಾ ಕ್ರಮ ವಹಿಸುವಂತೆ ಕಾವೇರಿ ನೀರಾವರಿ ನಿಗಮ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಾಹಿತಿ ನೀಡಿದ್ದಾರೆ. 1,50,000 ಕ್ಯೂಸೆಕ್ ನೀರು ಬಿಡುಗಡೆ ಮಾಡಿದರೆ ಕೆಲವು ಗ್ರಾಮಗಳಿಗೆ ನೀರು ನುಗ್ಗುವ ಭೀತಿಯಿದ್ದು, ನೂರಾರು ಎಕರೆ ಜಮೀನು ಜಲಾವೃತವಾಗುವ ಸಾಧ್ಯತೆ ಇದೆ. ಕೆಆರ್‌ಎಸ್ ಅಣೆಕಟ್ಟು ಸಂಪೂರ್ಣ ಭರ್ತಿ ಹಂತದಲ್ಲಿದ್ದು, ಅಣೆಕಟ್ಟೆ ತುಂಬಲು ೦.೮ ಅಡಿ (೧ ಅಡಿಗಿಂತಲೂ ಕಡಿಮೆ) ಇದೆ. ಇನ್ನು ಟಿಎಂಸಿ ಲೆಕ್ಕಾಚಾರದಲ್ಲಿ ಹೇಳುವುದಾದರೆ 1 ಟಿಎಂಸಿ ನೀರಿನ ಅಗತ್ಯವಿದೆ. 124.80 ಅಡಿ ಎತ್ತರದ ಡ್ಯಾಂನಲ್ಲಿ 124.00 ಅಡಿ ನೀರು ಭರ್ತಿಯಾಗಿದೆ. ಡ್ಯಾಂಗೆ 65,635 ಕ್ಯೂಸೆಕ್ ಒಳಹರಿವಿದ್ದು, 62,043 ಕ್ಯೂಸೆಕ್ ಹೊರಹರಿವು ಇದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 48.336 ಟಿಎಂಸಿ ಸಂಗ್ರಹವಾಗಿದೆ.
ತುಂಗಭದ್ರಾ ಜಲಾಶಯದಿಂದ ಅಪಾರ ನೀರು ಬಿಡುಗಡೆ
ಕೊಪ್ಪಳ/ವಿಜಯನಗರ: ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ನದಿ ಮೂಲಕ 123577 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ. ಜಲಾಶಯಕ್ಕೆ 106582 ಕ್ಯೂಸೆಕ್ ನೀರು ಒಳ ಹರಿವು ಇದ್ದು, ಒಟ್ಟು 105.788 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ಈಗ 99.468 ಟಿಎಂಸಿ ನೀರು ಸಂಗ್ರಹವಿದೆ. ನದಿಗೆ ಇನ್ನಷ್ಟು ನೀರು ಹೆಚ್ಚಾದರೆ ಕೃಷಿ ಭೂಮಿಗೆ ನೀರು ನುಗ್ಗುವ ಸಾಧ್ಯತೆ ಇದೆ. ತುಂಗಭದ್ರಾ ಜಲಾಶಯಕ್ಕೆ ಹೆಚ್ಚುತ್ತಲೇ ಒಳ ಹರಿವು ಪ್ರಮಾಣ ಹೆಚ್ಚುತ್ತಿದ್ದು, 30 ಗೇಟ್‌ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಅಪಾರ ಪ್ರಮಾಣ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ವಿಜಯನಗರದ ಜಿಲ್ಲೆಯ ಹಂಪಿಯ ಹಲವು ಸ್ಮಾರಕಗಳು ಮುಳುಗಡೆಯಾಗಿವೆ.
ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳ
ಹಾಸನ: ಜಿಲ್ಲೆಯ ಹಲವೆಡೆ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಸದ್ಯ 33164 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ 35350 ಕ್ಯೂಸೆಕ್ ಹೊರಹರಿವು ಇದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿ ಇದ್ದು, ಈಗ ಜಲಾಶಯದಲ್ಲಿನ ನೀರಿನ ಮಟ್ಟ 2920.30 ಅಡಿ ಇದೆ. ಜಲಾಶಯ ಭರ್ತಿಗೆ 1.70 ಅಡಿ ಮಾತ್ರ ಬಾಕಿ ಇದ್ದು, 37.103 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 35.460 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ | Rain News | ಮಳೆಗೆ ಕೊಚ್ಚಿ ಹೋದ ರಸ್ತೆ: ನೀರಲ್ಲಿ ಹೋಮವಾಯ್ತು ಸಾರ್ವಜನಿಕರ ತೆರಿಗೆ ಹಣ
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಗುರುವಾರದ ನೀರಿನ ಮಟ್ಟ
ಜಲಾಶಯ | ಗರಿಷ್ಠ ಮಟ್ಟ (ಅಡಿಗಳಲ್ಲಿ) | ಇಂದಿನ ಮಟ್ಟ (ಅಡಿಗಳಲ್ಲಿ) | ಒಳ ಹರಿವು (ಕ್ಯೂಸೆಕ್) | ಹೊರ ಹರಿವು (ಕ್ಯೂಸೆಕ್) |
ಕೆಆರ್‌ಎಸ್ | 124.80 | 124.00 | 65,635 | 62,043 |
ಲಿಂಗನಮಕ್ಕಿ | 1,819 | 1787.30 | 56138 | 87.85 |
ಆಲಮಟ್ಟಿ | 1,704.72 | 1,697.11 | 1,12,244 | 1,18,158 |
ನಾರಾಯಣಪುರ | 1,614.92 | 1611.64 | 1,28,000 | 1,33,188 |
ಮಲಪ್ರಭಾ | 2,079.50 | 2061.00 | 12393 | 194 |
ಘಟಪ್ರಭಾ | 2,175.00 | 2127.700 | 18576 | 119 |
ತುಂಗಾಭದ್ರಾ | 1,633 | 1631.48 | 1,06,582 | 1,23,577 |
ಭದ್ರಾ | 186 | 183.2 | 43,051 | 1037 |
ಹೇಮಾವತಿ | 2,922 | 2,920.30 | 33,164 | 35,350 |
ನಾರಾಯಣಪುರ ಜಲಾಶಯದಲ್ಲಿ 28.77 ನೀರು ಸಂಗ್ರಹ
ರಾಯಚೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ರಣಭೀಕರ ಮಳೆಯಿಂದ ಜಿಲ್ಲೆಯ ರಾಯಚೂರಿನ ನಾರಾಯಣಪುರ ಜಲಾಶಯಕ್ಕೆ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ಸದ್ಯ ಜಲಾಶಯದ ಒಳಹರಿವು 1,28,000 ಕ್ಯೂಸೆಕ್ ಇದ್ದು, 1,33,188 ಕ್ಯೂಸೆಕ್ ಹೊರಹರಿವು ಇದೆ. 18 ಗೇಟ್ ಮೂಲಕ 1,27,188 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, 6000 ಕ್ಯೂಸೆಕ್ ನೀರನ್ನು ಪವರ್ ಹೌಸ್‌ಗೆ ಬಿಡುಗಡೆ ಮಾಡಿದ್ದಾರೆ. 33.31 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 28.77 ಟಿಎಂಸಿ ನೀರು ಸಂಗ್ರಹವಾಗಿದೆ.
ನವೀಲುತೀರ್ಥ ಜಲಾಶಯ
ಬೆಳಗಾವಿ: ಜಿಲ್ಲೆಯ ನವೀಲುತೀರ್ಥ ಜಲಾಶಯ (ಮಲಪ್ರಭಾ ನದಿ)ಯ ಗರಿಷ್ಠ ಮಟ್ಟ 2079.50 ಅಡಿ ಇದ್ದು, ಈಗ 2061.00 ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 12393 ಕ್ಯೂಸೆಕ್ ಒಳ ಹರಿವು ಇದ್ದು, 194 ಕ್ಯೂಸೆಕ್ ಅನ್ನು ಮಾತ್ರ ಹೊರಕ್ಕೆ ಬಿಡಲಾಗುತ್ತಿದೆ.
ಘಟಪ್ರಭಾ ನದಿ
ಬೆಳಗಾವಿ: ಜಿಲ್ಲೆಯ ರಾಜಾ ಲಖಮಗೌಡ ಜಲಾಶಯದ (ಘಟಪ್ರಭಾ ನದಿ) ಗರಿಷ್ಠ ಮಟ್ಟ- 2175.00 ಅಡಿ ಇದ್ದು, ಪ್ರಸ್ತುತ 2127.700 ಅಡಿ ನೀರು ಸಂಗ್ರಹವಾಗಿದೆ. 18576 ಕ್ಯೂಸೆಕ್ ಒಳ ಹರಿವು ಇದ್ದು, 119 ಕ್ಯೂಸೆಕ್ ಹೊರ ಹರಿವು ಇದೆ. ಘಟಪ್ರಭಾ ಭರ್ತಿಗೆ ಇನ್ನೂ ಭಾರಿ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ.
ಆಲಮಟ್ಟಿ ಜಲಾಶಯದ ನದಿ ಪಾತ್ರದ ಜನರಿಗೆ ಎಚ್ಚರಿಕೆ
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂಗೆ ಒಳ ಹರಿವು ಹಾಗೂ ಹೊರಹರಿವಿನಲ್ಲಿ ಹೆಚ್ಚಳವಾಗಿದೆ. ಅಣೆಕಟ್ಟೆಗೆ 1,12,244 ಕ್ಯೂಸೆಕ್ ಒಳ ಹರಿವು ಇದ್ದು, 1,18,158 ಕ್ಯೂಸೆಕ್ ಹೊರ ಹರಿವು ಇದೆ. 519.60 ಮೀಟರ್ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ 517.28 ಮೀಟರ್ ನೀರು ಭರ್ತಿಯಾಗಿದೆ. ಒಟ್ಟಾರೆಯಾಗಿ 123.08 ಟಿಎಂಸಿ ಸಂಗ್ರಹ ಸಾಮರ್ಥ್ಯವಿದ್ದು, ಹಾಲಿ 87.992 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ನದಿಯಲ್ಲಿ ಜನರು ಇಳಿಯಬಾರದು ಹಾಗೂ ಜಾನುವಾರುಗಳನ್ನು ಬಿಡಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಲಿಂಗನಮಕ್ಕಿ ಜಲಾಶಯ
ಶಿವಮೊಗ್ಗ: ಜಿಲ್ಲೆಯ ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ ಇದ್ದು, ಈಗ 1787.30 ಅಡಿ ನೀರು ಸಂಗ್ರಹವಾಗಿದೆ. ಡ್ಯಾಂ ಒಳಹರಿವು 56138 ಕ್ಯೂಸೆಕ್ ಇದ್ದು, ಹೊರಹರಿವು: 87.85 ಕ್ಯೂಸೆಕ್ ಇದೆ. 151.64 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 67.987 ಟಿಎಂಸಿ ನೀರು ಸಂಗ್ರಹವಾಗಿದೆ.
ಭರ್ತಿಯತ್ತ ಭದ್ರಾ ಜಲಾಶಯ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿರುವ ಭದ್ರಾ ಜಲಾಶಯ ಭರ್ತಿಗೆ ಕೇವಲ ಮೂರು ಅಡಿ ಬಾಕಿ ಇದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಒಳಹರಿವು 43051 ಕ್ಯೂಸೆಕ್ ಇದೆ. 1037 ಕ್ಯೂಸೆಕ್ ಹೊರಹರಿವು ಇದ್ದು, 71.535 ಟಿಎಂಸಿ ಸಾಮರ್ಥ್ಯದ ಜಲಾಶಯದಲಿ 61.340 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ | ಮತ್ತೆ ಮತ್ತೆ ಕರೆಯುವ ಮಳೆಗಾಲದ ಹಿಮಾಲಯ: ಟಾಪ್ 5 ಚಾರಣಗಳು!