Site icon Vistara News

ಇಂದು ರಾಷ್ಟ್ರೀಯ ಡೆಂಗ್ಯೂ ದಿನ: ರಾಜಧಾನಿಯಲ್ಲಿ ಹೆಚ್ಚುತ್ತಿದೆ ಪ್ರಕರಣ

ಬೆಂಗಳೂರು: ರಾಷ್ಟ್ರೀಯ ಡೆಂಗ್ಯೂ ದಿನದಂದು ಅಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದುವರೆಗೆ ಕೊರೊನಾದ ಕಾಟದ ಆತಂಕದಲ್ಲಿದ್ದ ಜನರಿಗೆ ಈಗ ಹೊಸ ತಲೆನೋವೊಂದು ಶುರುವಾಗಿದ್ದು, ಡೆಂಗ್ಯೂನಿಂದ ಪಾರಾಗುವುದು ಹೇಗಪ್ಪಾ ಎಂದು ಚಿಂತಿಸಲಾರಂಭಿಸಿದ್ದಾರೆ.

2020ರಲ್ಲಿನ ಡೆಂಗ್ಯೂ ಪ್ರಕರಣಕ್ಕೆ ಹೋಲಿಸಿದರೆ ಈ ವರ್ಷ ಈಗಾಗಲೇ ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಇದು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ವರ್ಷ ಇದುವರೆಗೆ 7,393 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಇತರ ಭಾಗಗಳಿಂದಲೂ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

2019ರಲ್ಲಿ ರಾಜ್ಯದಾದ್ಯಂತ 91,091 ಮಂದಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 18,183 ಮಂದಿ ಡೆಂಗ್ಯೂ ಬಂದಿರುವುದು ಖಚಿತಪಟ್ಟಿತ್ತು, ಆ ವರ್ಷ 17 ಜನ ಮೃತಪಟ್ಟಿದ್ದರು. 2020 ರಲ್ಲಿ 21,904 ಮಾದರಿ ಪರೀಕ್ಷೆ ನಡೆಸಿದ್ದು, 3,823 ಮಂದಿ ಡೆಂಗ್ಯೂ ಬಂದಿರುವುದು ಖಚಿತವಾಗಿತ್ತು., 5 ಜನ ಸಾವನ್ನಪ್ಪಿದ್ದರು,

ಈ ವರ್ಷ ಈಗಾಗಲೇ 7,393 ಡೆಂಗ್ಕ್ಕೆಯೂ ಪ್ರಕರಣಗಳು ವರದಿಯಾಗಿದೆ. ಬೆಂಗಳೂರಿನಲ್ಲಿ ಅತ್ಯಧಿಕ ಎಂದರೆ 1,629 .ಪ್ರಕರಣಗಳು ಪತ್ತೆಯಾಗಿವೆ.

ಡೆಂಗ್ಯೂ ಮುನ್ನೆಚ್ಚರಿಕೆ ಕ್ರಮ

ಜಿಲ್ಲಾವಾರು ಡೆಂಗ್ಯೂ ಪಟ್ಟಿಯಲ್ಲಿ ದ.ಕನ್ನಡ, ಉಡುಪಿ, ಬಳ್ಳಾರಿ, ಕಲಬುರಗಿ, ಕೋಲಾರ ಅಗ್ರ ಸ್ಥಾನ ಪಡೆದಿವೆ.
ಯಾದಗಿರಿ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರದಲ್ಲಿ ಎರಡಂಕಿ ಡೆಂಗ್ಯೂ ಪ್ರಕರಣ ವರದಿಯಾಗಿವೆ.

ಅಧಿಕ ಪ್ರಕರಣಗಳು ಪತ್ತೆಯಾದ ಜಿಲ್ಲೆಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಸ್ವಯಂಸೇವಕರಿಂದ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ಅಯೋಜಿಸಲಾಗುತ್ತಿದೆ.

ಡೆಂಗ್ಯೂ ಲಕ್ಷಣಗಳೇನು?
– ಇದ್ದಕ್ಕಿದ್ದಂತೆ ತೀವ್ರ ಜ್ವರ
– ವಿಪರೀತ ತಲೆನೋವು
– ಮೈ-ಕೈ ನೋವು
– ಕೀಲುಗಳಲ್ಲಿ ವಿಪರೀತ ನೋವು
– ವಾಕರಿಕೆ, ವಾಂತಿ
– ಆಂತರಿಕ ರಕ್ತಸ್ರಾವ
– ಒಸಡುಗಳಲ್ಲಿ ರಕ್ತಸ್ರಾವ

ಇದನ್ನೂ ಓದಿ| Acid Attack | ಯುವತಿ ಆರೋಗ್ಯದಲ್ಲಿ ಚೇತರಿಕೆ; ಇನ್ನೂ ಪತ್ತೆಯಾಗದ ಆರೋಪಿ

Exit mobile version