ಬೆಂಗಳೂರು: ಇಂದು ದೇಶಾದ್ಯಂತ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ (Independence Day 2024). ಈ ಪ್ರಯುಕ್ತ ರಾಜ್ಯದಲ್ಲಿಯೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯ ಮಟ್ಟದ 78ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಕೈಗೊಳ್ಳಲಾಗಿದೆ. ಬೆಳಿಗ್ಗೆ 8.58ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮೈದಾನದಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಧ್ವಜಾರೋಹಣ ನೆರವೇರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ತೆರೆದ ಜೀಪಿನಲ್ಲಿ ಪೆರೇಡ್ ಪರಿವೀಕ್ಷಿಸಿ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ನಂತರ ಈ ಬಾರಿ ಅಂಗಾಂಗ ದಾನ ಮಾಡಿದ 64 ಕುಟುಂಬ ಸದಸ್ಯರನ್ನು ಸನ್ಮಾನಿಸಲಿದ್ದಾರೆ. ಜತೆಗೆ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಿದ್ದಾರೆ.
1,150 ಮಂದಿಯಿಂದ ಪಥಸಂಚಲನ
ಇನ್ನು ಈ ಬಾರಿ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್, ಗೋವಾ ಪೊಲೀಸ್ ತಂಡ ಸೇರಿದಂತೆ ವಿವಿಧ ಇಲಾಖೆಯ 35 ತುಕಡಿಯಗಳ 1,150 ಮಂದಿಯಿಂದ ಪಥ ಸಂಚಲನ ನೆರವೇರಲಿದೆ. ನಗರದ ವಿವಿಧ ಶಾಲೆಗಳ 1,450 ವಿದ್ಯಾರ್ಥಿಗಳು ಹಾಗೂ 400 ಎನ್‌ಎಸ್ಎಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಂಗೇರಲಿದೆ.
ಪೊಲೀಸರಿಂದ ಭದ್ರತೆ
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಣೆಕ್ ಷಾ ಮೈದಾನದ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಾಣೆಕ್ ಷಾ ಮೈದಾನದ ಸುತ್ತ 1,583 ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆಗಾಗಿ 10 ಡಿಸಿಪಿ, 17 ಎಸಿಪಿ, 43 ಪೊಲೀಸ್ ಅಧಿಕಾರಿಗಳು, 112 ಪಿಎಸ್‌ಐ, 62 ಎಎಸ್ಐ, 511 ಎಚ್‌ಸಿ, ಪಿಸಿ, 72 ಮಹಿಳಾ ಪೊಲೀಸರು ಕಣ್ಗಾವಲು ಇರಿಸಿದ್ದಾರೆ. ಇನ್ನು ಸಂಚಾರ ವ್ಯವಸ್ಥೆಯ ನಿಯಂತ್ರಣಕ್ಕೆ 3 ಡಿಸಿಪಿ, 6 ಎಸಿಪಿ, 19 ಪೊಲೀಸ್ ಅಧಿಕಾರಿಗಳು, 32 ಮಹಿಳಾ ಪಿಎಸ್‌ಐ, 111 ಎಎಸ್ಐ, 430 ಎಚ್‌ಸಿ, ಪಿಸಿಗಳನ್ನು ನಿಯೋಜಿಸಲಾಗಿದೆ.
100 ಸಿಸಿ ಕ್ಯಾಮೆರಾ ವ್ಯವಸ್ಥೆ
ಮೈದಾನದ ಸುತ್ತ ಭದ್ರತೆ ಮತ್ತು ಸುರಕ್ಷತೆಗಾಗಿ 100 ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಮೂರು ಬ್ಯಾಗೇಜ್ ಸ್ಕ್ಯಾನರ್, 100 ಕೆಎಸ್‌ಆರ್‌ಪಿ ಮತ್ತು ಸಿಆರ್ ತುಕಡಿ, ಎರಡು ಅಗ್ನಿ ಶಾಮಕ ವಾಹನ, ಎರಡು ಆ್ಯಂಬುಲೆನ್ಸ್ ವಾಹನ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, ಬಾಂಬ್ ನಿಷ್ಕ್ರಿಯ ದಳ ತಂಡಗಳನ್ನೂ ಸಜ್ಜುಗೊಳಿಸಲಾಗಿದೆ. ಅಲ್ಲದೆ ನಗರದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದು, ಅಗತ್ಯ ಬಂದೊಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆ ಮುನ್ನಚ್ಚರಿಕೆ ವಹಿಸಿದೆ.
ರಾಜ್ಯದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಘೋಷಣೆ
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜ್ಯದ ಹಲವು ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ (President’s Medal) ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ (India Govt) ಈ ಘೋಷಣೆ ಹೊರಡಿಸಿದೆ. ರಾಜ್ಯದ 20 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಒಲಿದಿದೆ. ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಘೋಷಣೆಯಾಗಿದೆ. ಐಎಸ್‌ಡಿ, ಎಡಿಜಿಪಿ ಎಂ. ಚಂದ್ರಶೇಖರ್ ಹಾಗೂ ಅಗ್ನಿಶಾಮಕ ದಳದ ಸೀನಿಯರ್ ಕಮಾಂಡರ್ ಬಸವಲಿಂಗಪ್ಪ ಅವರಿಗೆ ಅತ್ಯುತ್ತಮ ಸೇವಾ ಪದಕ ಘೋಷಿಸಲಾಗಿದೆ.
ಇದನ್ನೂ ಓದಿ: Independence day 2024: ಕೆಂಪು ಕೋಟೆ ಮೇಲೆ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದ Live ಇಲ್ಲಿ ವೀಕ್ಷಿಸಿ