ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಚೆನ್ನಾಗಿಯೇ ಬಳಸುತ್ತಿವೆ. ಬಿಜೆಪಿಗೆ ಇದು ರಾಷ್ಟ್ರೀಯ ವಿಚಾರಗಳ ವಿಜೃಂಭಣೆಯಾದರೆ, ಕಾಂಗ್ರೆಸ್ ಪಕ್ಷಕ್ಕೆ ತಾನೇ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಎಂಬ ಹೆಮ್ಮೆ. ಇದರ ನಡುವೆ, ಇದರ ಲಾಭವನ್ನು ಎತ್ತಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿವೆ. ಇದರ ಭಾಗವಾಗಿಯೇ ಬೆಂಗಳೂರಿನಲ್ಲಿ ನಡೆಯುತ್ತಿದೆ, ಫ್ರೀ ಟಿಕೆಟ್ ಪಾಲಿಟಿಕ್ಸ್!
ಹೌದು, ಸ್ವಾತಂತ್ರ್ಯ ದಿನದಂದು ಕಾಂಗ್ರೆಸ್ ಮೆಟ್ರೋದಲ್ಲಿ ೨೫ ಸಾವಿರ ಟಿಕೆಟ್ ಬುಕ್ ಮಾಡಿದೆ. ಬಿಎಂಟಿಸಿ ಆವತ್ತು ಇಡೀ ದಿನ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.
ಕಾಂಗ್ರೆಸ್ ಆಗಸ್ಟ್ ೧೫ರಂದು ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ. ಅಂದು ಬೆಂಗಳೂರಿನ ಪ್ರಧಾನ ರೈಲು ನಿಲ್ದಾಣದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ಭಾರಿ ಬೃಹತ್ ಪಾದಯಾತ್ರೆಯನ್ನು ಆಯೋಜಿಸಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಕ್ಷಾಂತರ ಜನರ ರ‍್ಯಾಲಿ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ ಕಾಲು ನಡಿಗೆಗೆ ಬರುವವರಿಗಾಗಿ ಮೆಟ್ರೊ ಟಿಕೆಟ್ ಬುಕ್ ಮಾಡಿದೆ.
ಕಾಂಗ್ರೆಸ್ ಪಾದಯಾತ್ರೆಗೆ ನೊಂದಾಯಿಸಿಕೊಂಡವರಿಗೆ ಫ್ರೀ ಟಿಕೆಟ್ ದೊರೆಯಲಿದೆ. ಕೆಂಗೇರಿ, ಗೊರುಗುಂಟೆಪಾಳ್ಯ, ಕೆ.ಆರ್ ಪುರಂ ಕಡೆಯಿಂದ ಬರುವ ಕಾರ್ಯಕರ್ತರು ನ್ಯಾಷನಲ್ ಕಾಲೇಜು ಮೈದಾನಕ್ಕೆ ಬರುವುದಕ್ಕೆ ಕಾಂಗ್ರೆಸ್ ನಾಯಕರು ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ.
ಈ ನಡುವೆ, ಸರಕಾರ ಬಿಎಂಟಿಸಿ ಮೂಲಕ ಬೆಂಗಳೂರಿನ ಜನರಿಗೆ ದೊಡ್ಡ ಕೊಡುಗೆ ನೀಡಿದೆ. ಆಗಸ್ಟ್ ೧೪ರಿಂದ ಆಗಸ್ಟ್ ೧೫ರ ರಾತ್ರಿ ೧೨ ಗಂಟೆವರೆಗೆ ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ಮಾಡುವವರು ಟಿಕೆಟ್‌ಗೆ ಹಣ ಕೊಡಬೇಕಾಗಿಲ್ಲ ಎಂದು ಪ್ರಕಟಿಸಿದೆ.
ಇದನ್ನೂ ಓದಿ| Har Ghar tiranga | ವಿಧಾನ ಸೌಧದ ಮುಂದೆ ತ್ರಿವರ್ಣ ವೈಭವ, ನಾನೂ ಯುವಕನಾದೆ ಎಂದ ಸಿಎಂ ಬೊಮ್ಮಾಯಿ