ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಉತ್ಸಾಹದಿಂದ ಬಂದಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರನ್ನು ಪೊಲೀಸರು ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ತಿಮ್ಮಕ್ಕ ಅವರು ಬರುವುದು ನಿಗದಿತ ಸಮಯಕ್ಕಿಂತ ತಡವಾಗಿತ್ತು. ಅವರಿಗೆ ವಿವಿಐಪಿ ಗೇಟ್ ನಂಬರ್ 3 ರಲ್ಲಿ ಪ್ರವೇಶವಿತ್ತು. ಸಮಯ ಮೀರಿದ್ದರಿಂದ ಪೊಲೀಸರು ಅವರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಪದ್ಮ ಪುರಸ್ಕೃತ ವೃಕ್ಷ ಮಾತೆ ವಾಪಸ್ ಹೋಗಬೇಕಾಯಿತು.
ರಸ್ತೆ ಬದಿಯಲ್ಲಿ ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿ ಸಾಲು ಮರದ ತಿಮ್ಮಕ್ಕ ಎಂದೇ ಖ್ಯಾತರಾದ ತಿಮ್ಮಕ್ಕ ಅವರು ಪದ್ಮ ಪುರಸ್ಕೃತೆ. ಅದರ ಜತೆ ರಾಜ್ಯದ ಪರಿಸರ ರಾಯಭಾರಿಯೂ ಹೌದು. ಕಳೆದ ಬಾರಿ ಪದ್ಮ ಪುರಸ್ಕಾರ ಪಡೆದಾಗ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ತಲೆಗೆ ಕೈ ಇಟ್ಟು ಆಶೀರ್ವಾದ ಮಾಡಿದ ದೃಶ್ಯ ಎಲ್ಲರ ಗಮನ ಸೆಳೆದಿತ್ತು. ಪ್ರಧಾನಿ ಮೋದಿ ಅವರು ಕೂಡಾ ಹಲವು ಬಾರಿ ತಿಮ್ಮಕ್ಕ ಅವರ ಸಾಧನೆಯನ್ನು ಉಲ್ಲೇಖಿಸಿದ್ದಾರೆ. ಇಂಥ ಸಾಧಕಿ ಈಗ ಸ್ವಲ್ಪ ಮಟ್ಟಿಗಿನ ಅನಾರೋಗ್ಯವನ್ನೂ ಹೊಂದಿದ್ದಾರೆ. ಅದರೂ ಅಮೃತ ಮಹೋತ್ಸವಕ್ಕೆ ಬಂದಿದ್ದರು
ಆದರೆ, ಅವರನ್ನು ಸರಿಯಾಗಿ ಗುರುತಿಸದೆ, ತಡವಾಯಿತು ಎಂಬ ಕಾರಣ ನೀಡಿ ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ. ಶಿಷ್ಟಾಚಾರ ಪಾಲನೆ ಹೆಸರಿನಲ್ಲಿ ದೇಶಕ್ಕೆ ಹೆಸರು ತಂದ, ನಿಸ್ವಾರ್ಥ ಸಾಧಕಿ ಮೌನವಾಗಿಯೇ ಕೈಬೀಸುತ್ತಾ ಮರಳಿದರು. ಅದರ ನಡುವೆ ನೂರಾರು ಮಂದಿ ಅವರ ಜತೆ ಸೆಲ್ಫಿ ತೆಗೆದುಕೊಂಡು ಅವರೆಂಥ ಸಾಧಕಿ ಎನ್ನುವುದನ್ನು ಸ್ಮರಿಸಿದರು.
ಇದನ್ನೂ ಓದಿ| Amrit Mahotsav: ಹುತಾತ್ಮ ಯೋಧರ ಕುಟುಂಬಕ್ಕೆ ನೌಕರಿ, 25 ಲಕ್ಷ ರೂ, ಕಾಯಕ ಯೋಗಿಗಳಿಗೆ 50,000 ರೂ. ಸಹಾಯಧನ