Site icon Vistara News

India Canada Row: ಕೆನಡಾ ಉಪಟಳ; ಬೆಂಗಳೂರಲ್ಲಿ ವೀಸಾ ಸೇವೆ ಸ್ಥಗಿತ, 17 ಸಾವಿರ ಜನ ಅತಂತ್ರ!

India Canada Row

India Canada Row: Justin Trudeau Suspends Visa Service In Bengaluru, Chandigarh

ಒಟ್ಟಾವ/ಬೆಂಗಳೂರು: ಕೆಲ ದಿನಗಳಿಂದ ತುಸು ಕಡಿಮೆಯಾಗಿದ್ದ ಭಾರತ ಹಾಗೂ ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು (India Canada Row) ಈಗ ಮತ್ತೆ ಉಲ್ಬಣಗೊಂಡಿದೆ. ಭಾರತದ ಸೂಚನೆ ಮೇರೆಗೆ 41 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಂಡ ಬೆನ್ನಲ್ಲೇ ಕೆನಡಾ ಮತ್ತೊಂದು ಉದ್ಧಟತನ ಮಾಡಿದೆ. ಬೆಂಗಳೂರು (Bengaluru) ಹಾಗೂ ಚಂಡೀಗಢದಲ್ಲಿ ವೀಸಾ (Visa Service) ಹಾಗೂ ರಾಜತಾಂತ್ರಿಕ ನೆರವಿನ ಸೇವೆ ಒದಗಿಸುವುದಿಲ್ಲ ಎಂದು ಕೆನಡಾ ಸರ್ಕಾರ ಘೋಷಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹಳಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಬೆಂಗಳೂರು, ಚಂಡೀಗಢ ಹಾಗೂ ಮುಂಬೈನಲ್ಲಿರುವ 41 ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಅವರ ಸಹಾಯಕ ಸಿಬ್ಬಂದಿಯನ್ನು ಕೆನಡಾ ವಾಪಸ್‌ ಕರೆಸಿಕೊಂಡ ಕಾರಣ ಮೂರೂ ನಗರಗಳಲ್ಲಿ ತಾತ್ಕಾಲಿಕವಾಗಿ ವೀಸಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ವಾಸ್ತವದಲ್ಲಿ, ಭಾರತವು ಹೆಚ್ಚುವರಿ ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳಿ ಎಂದು ಸೂಚಿಸಿದ್ದಕ್ಕೆ ಪ್ರತಿಯಾಗಿಯೇ ಕೆನಡಾ ಇಂತಹ ಉದ್ಧಟತನದ ತೀರ್ಮಾನ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

17 ಸಾವಿರ ಜನರ ಸ್ಥಿತಿ ಅತಂತ್ರ

ಬೆಂಗಳೂರು, ಮುಂಬೈ, ಚಂಡೀಗಢದಲ್ಲಿ ತಾತ್ಕಾಲಿಕವಾಗಿ ವೀಸಾ ಸೇವೆಯನ್ನು ಸ್ಥಗಿತಗೊಳಿಸಿದ ಕಾರಣ ಸುಮಾರು 17,500 ಅರ್ಜಿಗಳ ಪರಿಸ್ಥಿತಿ ಅತಂತ್ರವಾಗಿದೆ ಎಂದು ತಿಳಿದುಬಂದಿದೆ. ಮೂರೂ ನಗರಗಳಲ್ಲಿ ಇಷ್ಟು ಭಾರತೀಯರು ಕೆನಡಾ ವೀಸಾಕ್ಕಾಗಿ ಅರ್ಜಿ ಹಾಕಿದ್ದರು. ಈಗ ವೀಸಾ ಸೇವೆ ನಿಲ್ಲಿಸಿದ ಕಾರಣ ಇಷ್ಟೂ ಜನರಿಗೆ ತೊಂದರೆಯಾಗಲಿದೆ ಎಂದು ತಿಳಿದುಬಂದಿದೆ. ಭಾರತವು ಈಗಾಗಲೇ ಕೆನಡಾಗೆ ವೀಸಾ ಸೇವೆಯನ್ನು ಸ್ಥಗಿತಗೊಳಿಸಿದೆ. ದೆಹಲಿಯಲ್ಲಿ ಮಾತ್ರ ಕೆನಡಾ ವೀಸಾ ಸೇವೆ ಮುಂದುವರಿಯುತ್ತಿದೆ ಎಂದು ತಿಳಿದುಬಂದಿದೆ.

ಆಕ್ರೋಶ ವ್ಯಕ್ತಪಡಿಸಿದ ಕೆನಡಾ

ಭಾರತದಲ್ಲಿರುವ ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳಿ ಎಂಬುದಾಗಿ ಭಾರತ ಸೂಚನೆ ನೀಡಿರುವುದಕ್ಕೆ ಕೆನಡಾ ವಿದೇಶಾಂಗ ಸಚಿವೆ ಮೆಲಾನೀ ಜೋಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭಾರತವು ಅಕ್ಟೋಬರ್‌ 20ರೊಳಗೆ ಕೆನಡಾ ರಾಜತಾಂತ್ರಿಕರ ರಾಜತಾಂತ್ರಿಕ ವಿನಾಯಿತಿ ರದ್ದುಗೊಳಿಸಲಾಗುವುದು ಎಂದು ಸೂಚಿಸಿದೆ. ಇದು ಅನೈತಿನಕ ನಿರ್ಧಾರವಾಗಿದೆ. ಇದರಿಂದಾಗಿ ಭಾರತದಲ್ಲಿರುವ 41 ರಾಜತಾಂತ್ರಿಕರು ಹಾಗೂ ಅವರ 42 ಸಿಬ್ಬಂದಿಯು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳಲಾಗುತ್ತಿದೆ” ಎಂದು ಟ್ವೀಟ್‌ ಮಾಡಿದ್ದಾರೆ. ಚಂಡೀಗಢ, ಬೆಂಗಳೂರು, ಮುಂಬೈನಲ್ಲಿರುವ ರಾಜತಾಂತ್ರಿಕರನ್ನು ಕೆನಡಾ ವಾಪಸ್‌ ಕರೆಸಿಕೊಂಡಿದೆ.

ಇದನ್ನೂ ಓದಿ: India Canada Row: ಭಾರತದ ವಾರ್ನಿಂಗ್‌ಗೆ ಬೆಚ್ಚಿದ ಕೆನಡಾ; 41 ರಾಜತಾಂತ್ರಿಕರು ವಾಪಸ್!

ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು. ಈಗ ಬಿಕ್ಕಟ್ಟು ಮತ್ತೊಂದು ಹಂತ ತಲುಪಿದೆ.

Exit mobile version