ಚೆನ್ನೈ: ಹಿಂದಿ ಭಾಷೆ ಭಾರತೀಯ ಭಾಷೆಗಳ ಪ್ರತಿಸ್ಪರ್ಧಿ ಭಾಷೆಯಲ್ಲ, ಬದಲಿಗೆ ಅದು ಮಿತ್ರ ಭಾಷೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯು ಇಂಡಿಯಾ(India-Hindia)ವನ್ನು ಹಿಂಡಿಯಾವನ್ನಾಗಿ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿರುವ ಎಲ್ಲ 22 ಭಾಷೆಗಳನ್ನು ಸರ್ಕಾರದ ಅಧಿಕೃತ ಭಾಷೆಗಳೆಂದು ಘೋಷಿಸಬೇಕು. ಹಿಂದಿ ಭಾರತದ ರಾಷ್ಟ್ರೀಯ ಭಾಷೆ ಅಥವಾ ಅಧಿಕೃತ ಭಾಷೆಯಲ್ಲ. ಹಿಂದಿ ದಿವಸ್ ಬದಲಿಗೆ ನಾವು ಭಾರತೀಯ ಭಾಷೆಗಳ ದಿನವನ್ನು ಆಚರಿಸಬೇಕು ಎಂದು ಸ್ಟಾಲಿನ್ ಹೇಳಿದ್ದಾರೆ.
ಹಿಂದಿ ಮತ್ತು ಇತರ ಭಾಷೆಗಳಗಳ ಅಭಿವೃದ್ಧಿಗಾಗಿ ಮಾಡಲಾಗುತ್ತಿರುವ ವೆಚ್ಚದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ತಪ್ಪಿಸಬೇಕು. ಎನ್ಇಪಿ ಮೂಲಕ ಕೇಂದ್ರ ಸರ್ಕಾರವು ಹಿಂದಿ ಮತ್ತು ಸಂಸ್ಕೃತ ಭಾಷೆಗಳನ್ನು ಹೇರಿಕೆ ಮಾಡುತ್ತಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿದೆ ಎಂದು ತಮಿಳುನಾಡು ಸರ್ಕಾರ ಮೊದಲಿನಿಂದಲೂ ಆರೋಪಿಸಿಕೊಂಡು ಬಂದಿದೆ. ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸಲು ಕೇಂದ್ರ ಸರ್ಕಾರವು ಮುಂದಾಗಿತ್ತು. ಆಗ ಈ ವಿಷಯಕ್ಕೆ ಸಂಬಂಧಿಸಿದಂತೆ ತಮಿಳುನಾಡು ದೊಡ್ಡ ಹೋರಾಟವನ್ನು ಮಾಡಿತ್ತು.
ಅಮಿತ್ ಶಾ ಹೇಳಿದ್ದೇನು?
ಒಂದು ವಿಷಯವನ್ನು ಸ್ಪಷ್ಟಪಡಿಸುತ್ತಿದ್ದೇನೆ. ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಪ್ರತಿಸ್ಪರ್ಧಿ ಭಾಷೆಗಳೆಂದು ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹಿಂದಿ ಯಾವತ್ತೂ ದೇಶದಲ್ಲಿ ಇತರ ಭಾಷೆಗಳಿಗೆ ಪ್ರತಿಸ್ಪರ್ಧಿಯಾಗಲಾರದು. ದೇಶದ ಎಲ್ಲ ಭಾಷೆಗಳ ಮಿತ್ರ ಭಾಷೆ ಹಿಂದಿಯಾಗಿದೆ ಎಂದು ಅಮಿತ್ ಶಾ ಹೇಳಿದ್ದರು.
ಇದನ್ನೂ ಓದಿ | Hindi Diwas | ಹಿಂದಿಯಿಂದಾಗಿಯೇ ವಿಶ್ವದಲ್ಲಿ ಭಾರತಕ್ಕೆ ವಿಶೇಷ ಗೌರವ: ಪ್ರಧಾನಿ ನರೇಂದ್ರ ಮೋದಿ