ಬೆಂಗಳೂರು: ಚೀನಾದಲ್ಲಿ ಓಮಿಕ್ರಾನ್ ಉಪತಳಿ ಬಿಎಫ್.7 ಹೊಸ ಅಲೆಗೆ ಕಾರಣವಾಗುತ್ತಿರುವ ಬೆನ್ನಲ್ಲೇ ಭಾರತದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ವಿವಿಧ ಕ್ರಮ ತೆಗೆದುಕೊಳ್ಳುತ್ತಿವೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಉನ್ನತ ಮಟ್ಟದ ಸಭೆ ಆಯೋಜಿಸುವ ಮೂಲಕ ದೇಶದ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ಇದರ ಜತೆಗೆ ಕರ್ನಾಟಕದಲ್ಲೂ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಲು ಸೂಚಿಸುವುದರ ಮೂಲಕ ಸೋಂಕಿನ ವಿರುದ್ಧದ ಹೋರಾಟಕ್ಕೆ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ.
ಕರ್ನಾಟಕ ಸರ್ಕಾರವೂ ಸೋಂಕು ನಿಗ್ರಹಕ್ಕೆ ಹಲವು ರೀತಿಯ ಕ್ರಮ ತೆಗೆದುಕೊಳ್ಳುತ್ತಿದೆ. ಬೆಳಗಾವಿ ಅಧಿವೇಶನದ ಮಧ್ಯೆಯೇ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿರುವ ಕೊರೊನಾ ಪರಿಸ್ಥಿತಿ, ವೈದ್ಯಕೀಯ ಸೌಕರ್ಯ, ಮುಂಬರುವ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಸೇರಿ ಹಲವು ವಿಷಯಗಳನ್ನು ಚರ್ಚಿಸಿದರು. ಇದಾದ ಬಳಿಕವೇ ಒಳಾಂಗಣದಲ್ಲಿ ಮಾಸ್ಕ್ ಧರಿಸುವ ಸೂಚನೆ ನೀಡಲಾಯಿತು.
ಬೂಸ್ಟರ್‌ಡೋಸ್ ನೀಡಿಕೆಗೆ ಬೂಸ್ಟ್, ತಪಾಸಣೆ ಹೆಚ್ಚಳ: ಸುಧಾಕರ್
ಕರ್ನಾಟಕದಲ್ಲಿ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸುವ ನಿಯಮದ ಜತೆಗೆ ರಾಜ್ಯ ಸರ್ಕಾರವು ಹಲವು ಕ್ರಮ ತೆಗೆದುಕೊಂಡಿದೆ. “ರಾಜ್ಯದಲ್ಲಿ ಐಎಲ್‌ಐ ಮತ್ತು ಸಾರಿ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಲು ತೀರ್ಮಾನಿಸಲಾಗಿದೆ. ಬೂಸ್ಟರ್‌ಡೋಸ್ ನೀಡಿಕೆಗೆ ಆದ್ಯತೆ, ಶೇ.100ರಷ್ಟು ಸಾಧನೆ ಗುರಿ, ವಿಮಾನ ನಿಲ್ದಾಣಗಳಿಗೆ ಬರುವ ವಿದೇಶಿ ಪ್ರಯಾಣಿಕರ ತಪಾಸಣೆ, ಆಸ್ಪತ್ರೆಗಳಲ್ಲಿ ಕೃತಕ ಆಮ್ಲಜನಕ ಸಂಗ್ರಹ, ಲಭ್ಯತೆ, ಜಿಲ್ಲಾಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗಾಗಿಯೇ ಹಾಸಿಗೆ ಮೀಸಲು ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ” ಎಂದು ಮಾಹಿತಿ ನೀಡಿದರು. ಹಾಗೆಯೇ, ರಾಜ್ಯದಲ್ಲಿ ಜ್ವರದಿಂದ ಬಳಲುತ್ತಿರುವವರ ಕೊರೊನಾ ತಪಾಸಣೆ ಮಾಡಲು ಕೂಡ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹೆಚ್ಚಿನ ನಿಗಾ ಇರಲಿ, ರಾಜ್ಯಗಳಿಗೆ ಕೇಂದ್ರ ಸೂಚನೆ
ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡುವುದು ಸೇರಿ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೆ ಹಲವು ನಿರ್ದೇಶನ ನೀಡಿದೆ. “ರಾಜ್ಯ ಸರ್ಕಾರಗಳು ಪ್ರಯಾಣಿಕರು ಸೇರಿ ಎಲ್ಲರ ಮೇಲೂ ಹೆಚ್ಚಿನ ನಿಗಾ ವಹಿಸಬೇಕು. ಮಾಸ್ಕ್ ಧಾರಣೆ, ಕೊರೊನಾ ತಪಾಸಣೆ ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೆನೋಮ್ ಸೀಕ್ವೆನ್ಸಿಂಗ್‌ಗೆ ಆದ್ಯತೆ ನೀಡಬೇಕು” ಎಂದು ಕೇಂದ್ರ ಆರೋಗ್ಯ ಮನ್ಸುಖ್ ಮಂಡಾವಿಯ ರಾಜ್ಯಗಳಿಗೆ ಸೂಚಿಸಿದ್ದಾರೆ.
ಕೊರೊನಾ ಕುರಿತ ದಿನದ ಪ್ರಮುಖ ಬೆಳವಣಿಗೆಗಳು
– ಸಂಸತ್ತಿನಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಸದಸ್ಯರಿಗೆ ಸ್ಪೀಕರ್ ಓಂ ಬಿರ್ಲಾ ಸೂಚನೆ
– ಜಿ-20 ಸಭೆಗಳನ್ನು ವರ್ಚ್ಯುವಲ್ ಆಗಿಯೇ ನಡೆಸಲು ಆದ್ಯತೆ ನೀಡಬೇಕು ಎಂದು ಭಾರತ ಪ್ರತಿಪಾದನೆ
– ಕೇರಳ, ದೆಹಲಿಯಲ್ಲಿಯೂ ಕಟ್ಟೆಚ್ಚರ ವಹಿಸಿದ ಸರ್ಕಾರಗಳು, ತಪಾಸಣೆಗೆ ಹೆಚ್ಚಿನ ಆದ್ಯತೆ
– ವಿದೇಶ ಪ್ರವಾಸ ಕೈಗೊಳ್ಳದಿರಿ ಎಂದು ನಾಗರಿಕರಿಗೆ ದೇಶದ ತಜ್ಞರಿಂದ ಎಚ್ಚರಿಕೆ
– ಬಿಎಫ್.7 ಉಪತಳಿ ಬಗ್ಗೆ ಉತ್ತರ ಪ್ರದೇಶ, ಗುಜರಾತ್‌ನಲ್ಲಿ ಹೆಚ್ಚಿನ ಅಲರ್ಟ್
– ಕೊರೊನಾ ಭೀತಿಯಿಂದಾಗಿ ರಾಜಸ್ಥಾನದಲ್ಲಿ ಜನಾಕ್ರೋಶ ಯಾತ್ರೆ ರದ್ದುಪಡಿಸಿದ ಬಿಜೆಪಿ
– ಮುಂದಿನ ವಾರ ಭಾರತ್ ಬಯೋಟೆಕ್‌ನ ನಾಸಲ್ (ಮೂಗಿನ ಮೂಲಕ ನೀಡುವ) ಬೂಸ್ಟರ್ ಡೋಸ್ ಲಭ್ಯ
– ಗುಜರಾತ್‌ನಲ್ಲಿ ಚೀನಾದಿಂದ ಬಂದ ವ್ಯಕ್ತಿಯೊಬ್ಬನಿಗೆ ಸೋಂಕು, ಜೆನೋಮ್ ಸೀಕ್ವೆನ್ಸಿಂಗ್‌ಗೆ ರವಾನೆ
ಇದನ್ನೂ ಓದಿ | coronavirus | ಅಂತೆ ಕಂತೆ ಬಿಡಿ, 3ನೇ ಡೋಸ್ ಲಸಿಕೆ ಪಡೆಯಿರಿ ಎಂದ ಸುಧಾಕರ್: ಒಳಾಂಗಣದಲ್ಲಿ ಮಾಸ್ಕ್ ಕಡ್ಡಾಯ
ಮೋದಿ ಉನ್ನತ ಮಟ್ಟದ ಸಭೆ, ಹಲವು ಸೂಚನೆ
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿ, ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರು. ಹಾಗೆಯೇ, ದೇಶದ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಮರೆಯಬಾರದು. ಸರ್ಕಾರಗಳು ಕೂಡ ಇಂತಹ ಕ್ರಮಗಳಿಗೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಹಬ್ಬಗಳು, ಹೊಸ ವರ್ಷಾಚರಣೆ ಇರುವುದರಿಂದ ಹೆಚ್ಚಿನ ಜನ ಸೇರುವಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು. ಹಾಗೆಯೇ, ರಾಜ್ಯಗಳಲ್ಲಿ ಕೊರೊನಾ ತಪಾಸಣೆ ಹೆಚ್ಚಿಸಬೇಕು ಎಂದು ಕೂಡ ಸೂಚಿಸಿದರು.
ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆಯೇ?
ಸದ್ಯದ ಮಟ್ಟಿಗೆ ಭಾರತದಲ್ಲಿ ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಕಳೆದ ಒಂದು ವಾರದಲ್ಲಿ ಸರಾಸರಿ ನಿತ್ಯ 157 ಪ್ರಕರಣಗಳು ದಾಖಲಾದರೆ, ಡಿಸೆಂಬರ್ 22ರಂದು 185 ಕೇಸ್‌ಗಳು ದಾಖಲಾಗಿದ್ದವು. ಬುಧವಾರಕ್ಕೆ ದೇಶದಲ್ಲಿ 131 ಪ್ರಕರಣ ದಾಖಲಾಗಿದ್ದವು. ಪ್ರಕರಣಗಳ ಸಂಖ್ಯೆಯಲ್ಲಿ ತುಸು ಏರಿಕೆಯಾದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದಾಗಿ ಮೋದಿ ಅವರಿಗೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Coronavirus | ಕೊರೊನಾ ಭೀತಿ ಹಿನ್ನೆಲೆ ಮೋದಿ ಉನ್ನತ ಮಟ್ಟದ ಸಭೆ, ಕಠಿಣ ನಿರ್ಬಂಧ ಚರ್ಚೆಯಾಯಿತೇ?