ಬೆಂಗಳೂರು: ದೇಶದ ಇಂಡಿಯಾ ಹೆಸರಿಗೆ ʼರಿಪಬ್ಲಿಕ್ ಆಫ್ ಭಾರತ್ʼ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ರಾಜ್ಯದ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂವಿಧಾನದಲ್ಲಿ ದೇಶದ ಹೆಸರನ್ನು ಇಂಡಿಯಾ ಎಂದೇ ಉಲ್ಲೇಖಿಸಲಾಗಿದ್ದು, ಭಾರತ್ (Republic of Bharat) ಎಂದು ಮರುನಾಮಕರಣ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಭಾರತವನ್ನು ಸಂವಿಧಾನದಲ್ಲಿ ಇಂಡಿಯಾ ಎಂದೇ ಉಲ್ಲೇಖಿಸಲಾಗಿದ್ದು, ಇಂಡಿಯಾ ಎಂಬುದು ಎಲ್ಲರೂ ಒಪ್ಪಿರುವ ಹೆಸರಾಗಿದೆ. ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯ ಇಲ್ಲ ಅಭಿಪ್ರಾಯಪಟ್ಟರು.
ವಿಪಕ್ಷಗಳ ಮೈತ್ರಿಕೂಟಕ್ಕೆ ಪ್ರಧಾನಿ ಮೋದಿ ಹೆದರಿದ್ದಾರೆ ಎಂದ ಡಿಕೆಶಿ
ಕನಕಪುರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ಕನಕಪುರ: ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಹೆದರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ರಿಪಬ್ಲಿಕ್ ಆಫ್ ಇಂಡಿಯಾ ಅನ್ನು ರಿಪಬ್ಲಿಕ್ ಆಫ್ ಭಾರತ ಮಾಡಲು ಹೊರಟಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಮುಂದಿನ ಚುನಾವಣೆಯಲ್ಲಿ ಸೋಲನ್ನು ನೋಡುತ್ತಿರುವುದನ್ನು ಈ ಸಮಯದಲ್ಲಿ ಗಮನಿಸಬಹುದು. ನಮ್ಮ ದೇಶದ ನಗದಿನ ಮೇಲೆ ಇಂಡಿಯಾ ಅಂತಾ ಇದೆ. ಇದನ್ನು ಬದಲಿಸಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಇಂಡಿಯಾ ಅಲ್ಲ ಭಾರತ! ವಿಶೇಷ ಅಧಿವೇಶನದಲ್ಲಿ ದೇಶ ಮರುನಾಮಕರಣಕ್ಕೆ ವಿಧೇಯಕ! INDIA blocಗೆ ಕೇಂದ್ರ ಟಕ್ಕರ್
ನಾವೆಲ್ಲರೂ ಭಾರತೀಯರೇ. ಸೋಲಿಗೆ ಹೆದರಿ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಅವರ ಆಲೋಚನೆಗಳು ಇನ್ನು ಬಹಳ ಇವೆ. ಅವುಗಳನ್ನು ಈಗ ಹೇಳಿದರೆ ಎಲ್ಲರೂ ಶಾಕ್ ಆಗುತ್ತಾರೆ. ಅವುಗಳನ್ನು ಬೇರೆ ಸಮಯದಲ್ಲಿ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಈ ಪ್ರಸ್ತಾವನೆಯನ್ನು ವಿರೋಧಿಸುತ್ತೇನೆ. ಇಂತಹ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ನೀವು ಹೆಚ್ಚು ದಿನ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಇದನ್ನು ಮಾಡಬೇಡಿ” ಎಂದು ತಿಳಿಸಿದರು.
ವಿರೋಧ ಪಕ್ಷಗಳ ಮೈತ್ರಿ ಬಗ್ಗೆ ಕೇಳಿದಾಗ, “ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಬೆಂಗಳೂರಿನಲ್ಲಿ ಹುಟ್ಟಿತು. ಬೆಂಗಳೂರಿನಲ್ಲಿ ಬದಲಾವಣೆ ಆರಂಭವಾಯಿತು. ಇದೇ ತಿಂಗಳು 16,17ರಂದು ತೆಲಂಗಾಣದ ಹೈದರಾಬಾದ್ ನಲ್ಲಿ ಸಭೆ ಸೇರುತ್ತಿದ್ದು, ಎಲ್ಲಾ ಮೈತ್ರಿ ಪಕ್ಷಗಳು ಸೇರಿ ಮುಂದಿನ ತೀರ್ಮಾನ ಮಾಡಲಿವೆ” ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ನಿಮ್ಮ ಹೆಸರನ್ನೂ ಬದಲಾವಣೆ ಮಾಡುತ್ತಾರೆ. ಇದು ರಿಪಬ್ಲಿಕ್ ಆಫ್ ಇಂಡಿಯಾ. ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿದೆ ಎಂದು 500 ರೂ. ನೋಟು ತೋರಿಸಿದ ಅವರು, INDIA ಒಕ್ಕೂಟದಿಂದ ಬಿಜೆಪಿಗೆ ಭಯ ಬಂದಿದೆ. ನಮ್ಮ ಹೆಸರು ಎಷ್ಟು ಎಫೆಕ್ಟ್ ನೋಡಿ, ಅದಕ್ಕಾಗಿಯೇ ಹೆಸರು ಬದಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರು ಸೋಲನ್ನು ನೋಡುತ್ತಿದ್ದಾರೆ. ಎಲ್ಲದರನ್ನೂ ಹೆಸರು ಬದಲಾವಣೆ ಮಾಡಿ ಅವರ ಮಾತು ಹಾಗೂ ಸಿಗ್ನೇಚರ್‌ಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Bypolls 2023: 7 ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ ಆರಂಭ, INDIA ಬ್ಲಾಕ್‌ಗೆ ಮೊದಲ ಪರೀಕ್ಷೆ
ಏನಿದು ಇಂಡಿಯಾ-ಭಾರತ್ ವಿವಾದ?
ಇತ್ತೀಚೆಗೆ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರ G20 ಔತಣಕೂಟಕ್ಕೆ ಪ್ರತಿಪಕ್ಷಗಳಿಗೆ ಆಹ್ವಾನ ಹೋಗಿದ್ದು, ಅದರಲ್ಲಿ ʼPresident of India’ ಬದಲಿಗೆ ʼPresident of Bharatʼ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ವಿರುದ್ಧ ಟೀಕೆ ಆರಂಭಿಸಿದೆ.
ʼಇಂಡಿಯಾʼವನ್ನು ಬದಲಿಸಿ ʼಭಾರತʼವನ್ನು ಸ್ಥಾಪಿಸಬೇಕು ಎಂಬುದು ಬಿಜೆಪಿಯ ಬಹುಕಾಲದ ಆಶಯವಾಗಿದೆ. ಈ ಹಿಂದೆ ಹಿಮಂತ ಬಿಸ್ವ ಶರ್ಮಾ, ಆರೆಸ್ಸೆಸ್ ಮುಖಂಡ ಮೋಹನ ಭಾಗವತ್ ಕೂಡ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ʼಗುಲಾಮಗಿರಿ ಚಿಂತನೆʼಯಿಂದ ದೇಶವನ್ನು ವಿಮೋಚನೆಗೊಳಿಸಲು ಒತ್ತು ನೀಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಸಾಂವಿಧಾನಿಕ ಸಂಸ್ಥೆಗಳಿಂದ “ಇಂಡಿಯಾ” ಎಂಬ ಪದವನ್ನು ತೆಗೆದುಹಾಕಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಈ ಬಗ್ಗೆ ತಿದ್ದುಪಡಿ ಮಾಡಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.