ಬೆಂಗಳೂರು: ಕರ್ನಾಟಕವೂ ಸೇರಿ ದೇಶದ ಹಲವೆಡೆ ವಂದೇ ಭಾರತ್ (Vande Bharat Express) ರೈಲುಗಳ ಸಂಚಾರ ಆರಂಭವಾಗಿದೆ. ಅತ್ಯಾಧುನಿಕ ಸೌಕರ್ಯ, ಹೆಚ್ಚಿನ ವೇಗದ ಕಾರಣಕ್ಕಾಗಿ ರೈಲುಗಳು ಗಮನ ಸೆಳೆದಿವೆ. ಆದರೆ, ರೈಲುಗಳ ಟಿಕೆಟ್ ದರವು ಜಾಸ್ತಿಯಾದ ಕಾರಣ ಹೆಚ್ಚಿನ ಜನ ವಂದೇ ಭಾರತ್, ಅನುಭೂತಿ ಎಕ್ಸ್‌ಪ್ರೆಸ್ ಹಾಗೂ ವಿಸ್ಟಾಡೋಮ್‌ನಂತಹ ಎಸಿ ಚೇರ್ ಕಾರ್ ಹಾಗೂ ಎಕ್ಸಿಕ್ಯೂಟಿವ್ ರೈಲುಗಳಿಗೆ ರೈಲ್ವೆ ಇಲಾಖೆಯು ಡಿಸ್ಕೌಂಟ್ ಘೋಷಿಸಿದೆ.
ಹೌದು, ವಂದೇ ಭಾರತ್, ಅನುಭೂತಿ ಎಕ್ಸ್‌ಪ್ರೆಸ್ ಹಾಗೂ ವಿಸ್ಟಾಡೋಮ್‌ನಂತಹ ಎಸಿ ಚೇರ್ ಕಾರ್ ಹಾಗೂ ಎಕ್ಸಿಕ್ಯೂಟಿವ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಟಿಕೆಟ್ ದರದಲ್ಲಿ ರೈಲ್ವೆ ಇಲಾಖೆಯು ಶೇ.25ರಷ್ಟು ರಿಯಾಯಿತಿ ಘೋಷಿಸಿದೆ. ಕಳೆದ ಒಂದು ತಿಂಗಳಲ್ಲಿ ಇಂತಹ ಬಹುತೇಕ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಒಟ್ಟು ಆಸನಗಳಿಗಿಂತ ಶೇ.50ರಷ್ಟು ಕಡಿಮೆ ಇರುವುದರಿಂದ ರೈಲ್ವೆ ಇಲಾಖೆಯು ಪ್ರಯಾಣಿಕರನ್ನು ಸೆಳೆಯಲು ಡಿಸ್ಕೌಂಟ್ ಘೋಷಿಸಿದೆ.
ರೈಲುಗಳಲ್ಲಿ ಪ್ರಯಾಣಿಸುವವರಿಗೆ ಟಿಕೆಟ್ ಮೂಲ ದರಕ್ಕೆ ಅನ್ವಯವಾಗುವಂತೆ ಡಿಸ್ಕೌಂಟ್ ನೀಡಲಾಗುತ್ತದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ರೈಲ್ವೆ ಇಲಾಖೆಯು ಡಿಸ್ಕೌಂಟ್ ಘೋಷಿಸಿದೆ. ಈಗಾಗಲೇ ಟಿಕೆಟ್ ರಿಸರ್ವ್ ಮಾಡಿದವರಿಗೆ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ. ಒಟ್ಟು ಆಸನದ ಶೇ.50ಕ್ಕಿಂತ ಕಡಿಮೆ ಜನ ಪ್ರಯಾಣಿಸುತ್ತಿದ್ದರೆ ರೈಲು ಹೊರಡುವ ಸ್ಥಳದಿಂದ ನಿಗದಿತ ಸ್ಥಳಕ್ಕೆ (End To End) ಮಾತ್ರವಲ್ಲ, ಮಧ್ಯದ ಸ್ಟೇಷನ್‌ನಲ್ಲಿ ಇಳಿಯುವವರಿಗೂ ಡಿಸ್ಕೌಂಟ್ ಅನ್ವಯವಾಗುತ್ತದೆ. ಕಳೆದ 30 ದಿನಗಳಲ್ಲಿ ಒಟ್ಟು ಆಸನಗಳಲ್ಲಿ ಶೇ.50ಕ್ಕಿಂತ ಕಡಿಮೆ ಜನ ಪ್ರಯಾಣಿಸಿದರೆ ಈ ರಿಯಾಯಿತಿ ಅನ್ವಯವಾಗಲಿದೆ.
ಇದನ್ನೂ ಓದಿ: Vande Bharat Express: ಧಾರವಾಡ- ಬೆಂಗಳೂರು ವಂದೇ ಭಾರತ್ ಸಂಚಾರ ಶುರು; ಆರೇ ಗಂಟೇಲಿ ರಾಜಧಾನಿಗೆ!
ಕರ್ನಾಟಕದಲ್ಲಿ ದರ ಎಷ್ಟು?
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಧಾರವಾಡಕ್ಕೆ: ಎಕ್ಸಿಕ್ಯೂಟಿವ್ ಎಸಿ ಚೆಯರ್ ಕಾರ್‌ನಲ್ಲಿ 1165 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ 2010 ರೂ. ಇದೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹುಬ್ಬಳ್ಳಿಗೆ ಎಕ್ಸಿಕ್ಯೂಟಿವ್ ಎಸಿ ಚೆಯರ್ ಕಾರ್‌ನಲ್ಲಿ 1135 ರೂ. ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ 2180 ರೂ. ಇದೆ. ಇದರಿಂದಾಗಿ ಹೆಚ್ಚಿನ ಪ್ರಯಾಣಿಕರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದರು.