ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವದ ಸೂರ್ಯಯಾನ ಆದಿತ್ಯ ಎಲ್ 1 ಮಿಷನ್ ಮೂರನೇ ಕಕ್ಷೆಯ (Aditya L1 Mission) ಬದಲಾವಣೆಯನ್ನೂ ಪೂರ್ಣಗೊಳಿಸಿದೆ. ಸೆಪ್ಟೆಂಬರ್ 10ರ ಬೆಳಗಿನ ಜಾವ ಆದಿತ್ಯ ಎಲ್ 1 ಮಿಷನ್ ಮೂರನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಕುರಿತು ಇಸ್ರೋ ಫೋಟೊ ಸಮೇತ ಮಾಹಿತಿ ಹಂಚಿಕೊಂಡಿದೆ.
“ಸೂರ್ಯನ ಲ್ಯಾಗ್ರೇಂಜ್ ಪಾಯಿಂಟ್‌ನತ್ತ ಸಾಗುತ್ತಿರುವ ಆದಿತ್ಯ ಎಲ್ 1 ಮಿಷನ್ ಮೂರನೇ ಬಾರಿ ಕಕ್ಷೆ ಬದಲಾವಣೆ ಮಾಡಿದೆ. ಬೆಂಗಳೂರಿನಲ್ಲಿರುವ ಐಎಸ್‌ಟಿಆರ್‌ಎಸಿ ಸಂಸ್ಥೆ ಮೂಲಕ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ನೂತನ ಕಕ್ಷೆಯಲ್ಲಿ 296 ಕಿ.ಮೀ x 71,767 ಕಿ.ಮೀ ವೇಗದಲ್ಲಿ ಮಿಷನ್ ಚಲಿಸುತ್ತಿದೆ. ನಾಲ್ಕನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಸೆಪ್ಟೆಂಬರ್ 15ರಂದು ಮಧ್ಯಾಹ್ನ 2 ಗಂಟೆಗೆ ಕೈಗೊಳ್ಳಲಾಗುತ್ತದೆ” ಎಂದು ಇಸ್ರೋ ಮಾಹಿತಿ ನೀಡಿದೆ.
ಇಸ್ರೋ ಹಂಚಿಕೊಂಡ ಮಾಹಿತಿ
ಸೆಪ್ಟೆಂಬರ್ 2ರಂದು ಆದಿತ್ಯ ಎಲ್ 1 ಮಿಷನ್ ಉಡಾವಣೆಯಾಗಿದ್ದು, ಸೆಪ್ಟೆಂಬರ್ 3ರಂದು ಮೊದಲ ಕಕ್ಷೆ ಬದಲಾವಣೆಯನ್ನು ಯಶಸ್ವಿಯಾಗಿ ಪೂರೈಸಿತು. ಸೆಪ್ಟೆಂಬರ್ 5ರಂದು ಎರಡನೇ ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡಿತು. ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡ ನಂತರ ಅಧ್ಯಯನ ನಡೆಸಲು ಉದ್ದೇಶಿಸಿರುವ ಲ್ಯಾಂಗ್ರೇಜ್ ಪಾಯಿಂಟ್‌ನತ್ತ (L1 Point) ಆದಿತ್ಯ ಎಲ್ 1 ಮಿಷನ್ ಸಾಗಲಿದೆ. ಲ್ಯಾಗ್ರೇಂಜ್ ಪಾಯಿಂಟ್ ತಲುಪಲು ಮಿಷನ್‌ಗೆ 125 ದಿನ ಬೇಕು.
ಇದನ್ನೂ ಓದಿ: Aditya L1 Mission: ಸೂರ್ಯ, ಚಂದ್ರನ ಚೆಂದದ ಸೆಲ್ಫಿ ಕಳುಹಿಸಿದ ಆದಿತ್ಯ ಎಲ್ 1; ನೀವೂ ನೋಡಿ
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಿಷನ್ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್ ಸೆಪ್ಟೆಂಬರ್ 2ರಂದು ನಭಕ್ಕೆ ಹಾರಿದೆ. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್ 1 ಮಿಷನ್ ಬೇರ್ಪಟ್ಟಿದೆ. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್ 1 ಮಿಷನ್ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್ ಸಂಚರಿಸಿ ಅಧ್ಯಯನ ನಡೆಸಲಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.