ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಉಸ್ತುವಾರಿ ಹೊತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ಮಾಡಿದ ಇಂದಿರಾ ಕ್ಯಾಂಟೀನ್ (Indira Canteen) ನಂಬರ್ ಅಮಾನ್ಯ ಎಂಬ ಸಂದೇಶ ಬಂದಿರುವುದು ಮುಜುಗರ ಉಂಟುಮಾಡಿದೆ.
ಬಿಜೆಪಿ ಅವಧಿಯಲ್ಲಿ ಬಹಳಷ್ಟು ಕಡೆ ಸ್ಥಗಿತವಾಗಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಈಗ ಸರ್ಕಾರ ಮತ್ತೆ ಆರಂಭಿಸುವುದಾಗಿ ತಿಳಿಸಿದೆ ಹಾಗೂ ಹೋಟೆಲ್ ರೀತಿಯಲ್ಲಿ ವೈವಿಧ್ಯಮಯ ಮೆನು ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಈ ಕುರಿತು ಪರಿಶೀಲನೆ ನಡೆಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಬೆಳಗ್ಗೆ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ್ದಾರೆ.
ಮೊದಲಿಗೆ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಚೊಕ್ಕಸಂದ್ರ ವಾರ್ಡ್ ಇಂದಿರಾ ಕ್ಯಾಂಟೀನ್‌ಗೆ ಬಂದಿದ್ದಾರೆ. ಆದರೆ ಆ ಅಷ್ಟೊತ್ತಿಗಾಗಲೆ ತಿಂಡಿ ಖಾಲಿ ಆಗಿತ್ತು. ಅಲ್ಲಿಂದ ಹೊರಟು ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಇಂದಿರಾ ಕ್ಯಾಂಟೀನ್‌ಗೆ ಡಿಕೆಶಿ ಭೇಟಿ ನೀಡಿದರು.
ಈ ವೇಳೆ ಉಪ್ಪಿಟ್ಟು ಕೇಸರಿಬಾತ್ ಪಡೆದ ಡಿ.ಕೆ. ಶಿವಕುಮಾರ್, ತಮ್ಮ ಪಕ್ಕದಲ್ಲಿ ಆಹಾರ ಸೇವಿಸುತ್ತಿದ್ದ ರಾಮಚಂದ್ರ ಎಂಬ ನಾಗರಿಕರೊಂದಿಗೆ ಮಾತುಕತೆ ನಡೆಸಿದರು. ಊಟ ತಿಂಡಿ ಚೆನ್ನಾಗಿದೆಯೇ ಎಂದು ಕೇಳಿದರು. ಇಲ್ಲಿ 5 ರೂ. ಬದಲಿಗೆ 10 ರೂ. ಪಡೆದಿದ್ದಾರೆ ಎಂದು ರಾಮಚಂದ್ರ ಅವರು ತಿಳಿಸಿದರು. ಇದರಿಂದ ಕೋಪಗೊಂಡ ಡಿ.ಕೆ. ಶಿವಕುಮಾರ್, ನಾಗರಿಕರು ಕುಂದುಕೊರತೆಗಳಿಗೆ ಕರೆ ಮಾಡಿ ಎಂದು ಹೊರಗೆ ನೀಡಿದ್ದ ನಂಬರ್‌ಗೆ ತಮ್ಮ ಮೊಬೈಲಿಂದಲೇ ಕರೆ ಮಾಡಿದರು.
ಆದರೆ ಆ ಕರೆ ಕನೆಕ್ಟ್ ಆಗಲಿಲ್ಲ. ʼನೀವು ಕರೆ ಮಾಡುತ್ತಿರುವ ಸಂಖ್ಯೆ ಅಮಾನ್ಯವಾಗಿದೆ. ನೀವು ಕರೆ ಮಾಡುತ್ತಿರುವ ಸಂಖ್ಯೆಯನ್ನು ಪುನಃ ಪರಿಶೀಲಿಸಿ” ಎಂಬ ಆಟೋಮೇಟೆಡ್ ಸಂದೇಶ ಬಂದಿದೆ. ಇದರಿಂದ ಬೇಸರಗೊಂಡ ಶಿವಕುಮಾರ್, ಇಂದಿರಾ ಕ್ಯಾಂಟೀನ್ ಸಿಬ್ಬಂದಿಯನ್ನು ಕರೆದರು. ನೋಡಪ್ಪ ನೀನು ಇಲ್ಲಿ ಕೆಲ ಮಾಡೋಗು. ನೀವು ಐದು ರೂ. ಎನ್ನುತ್ತೀಯ, ಇವರು 10 ರೂ. ಎನ್ನುತ್ತಿದ್ದೀಯ ಎಂದರು. ಅದಕ್ಕೆ ಸಿಬ್ಬಂದಿ, ಅವರು ಎರಡು ಪ್ಲೇಟ್ ಕೇಳಿದರು ಅದಕ್ಕೆ 10 ರೂ. ಪಡೆಯಲಾಗಿದೆ ಎಂದು ಉತ್ತರಿಸಿದರು. ಹೋಗಲಿ ಬಿಡು, ಇವರೇನೋ ಹೇಳುತ್ತಿದ್ದಾರೆ. ಈಗ ನಾನು ತಿಂಡಿ ತಿನ್ನುತ್ತಾ ಇದ್ದೀನಿ ಬಿಟ್ಟುಬಿಡು ಎಂದಿದ್ದಾರೆ.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಮ್ಮ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್. ಬೆಳಗ್ಗೆ ಮೊದಲಿಗೆ ತಿಂಡಿ ಮಾಡೋಣ ಎಂದು ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿದ್ದೆ. ಆದರೆ ಅಲ್ಲಿ ಖಾಲಿಯಾಗಿತ್ತು. ಇನ್ನೊಂದು ಕಡೆ 5 ರೂ ಬದಲಿಗೆ 10 ರೂ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲಿರುವ ಸಿಬ್ಬಂದಿ ಕೂಡ ಸುಳ್ಳು ಹೇಳುತ್ತಿದ್ದಾರೆ. ಫೋನ್ ನಂಬರ್ ಚೆಕ್ ಮಾಡ್ದೆ ಸಿಕ್ಕಿಲ್ಲ. ಇದನ್ನು ಬಹಳ ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ. ಎಲ್ಲವನ್ನೂ ರಿಪೇರಿ ಮಾಡ್ತೀನಿ. ಜನಪ್ರತಿನಿಧಿಗಳು ವಿಸಿಟ್ ಮಾಡೊದಕ್ಕೆ ಸೂಚಿಸುತ್ತೇವೆ ಎಂದರು.