ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು (Indira Canteen) ಪುನಾರಂಭ ಮಾಡುವುದರ ಜತೆಗೆ ಆಹಾರ ಪಟ್ಟಿಯಲ್ಲೂ ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇಂದಿರಾ ಕ್ಯಾಂಟೀಂನ್ ಕುರಿತು ಅಧಿಕಾರಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಪ್ರತಿ ವಾರ್ಡಿಗೆ ಒಂದರಂತೆ ಕನಿಷ್ಠ 250 ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿವರೆಗೂ ಇಂದಿರಾ ಕ್ಯಾಂಟಿನ್‌ಗೆ ಬಿಬಿಎಂಪಿ ವತಿಯಿಂದ ಶೇ.70, ಹಾಗೂ ಸರ್ಕಾರದಿಂದ ಶೇ.30 ವೆಚ್ಚ ಭರಿಸಲಾಗುತ್ತಿತ್ತು. ಆದರೆ ಈಗ ಬಿಬಿಎಂಪಿಯು ಶೇ.50 ಹಾಗೂ ಸರ್ಕಾರ ಶೇ.50 ವೆಚ್ಚ ಭರಿಸಲು ತೀರ್ಮಾನಿಸಲಾಗಿದೆ ಎಂದರು.
ಬೆಂಗಳೂರು ಹೊರತು ಪಡಿಸಿ ರಾಜ್ಯದ ವಿವಿಧೆಡೆಗಳಲ್ಲಿ ಇಂದಿರಾ ಕ್ಯಾಂಟೀನ್ ವೆಚ್ಚದಲ್ಲಿ ಸರ್ಕಾರ ಶೇ. 70 ಹಾಗೂ ಸ್ಥಳೀಯ ನಗರ ಸಭೆಗಳು ಶೇ.30 ಭರಿಸಬೇಕೆಂದು ತೀರ್ಮಾನಿಸಲಾಗಿದೆ. ರಾಜ್ಯದ ಯಾವೆಲ್ಲ ಸ್ಥಳಗಳಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕೆನ್ನುವ ಸ್ಥಳಗಳ ಪಟ್ಟಿಯನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್‌ನಲ್ಲಿ ದೊರೆಯುವ ಆಹಾರದ ಕ್ರಮವನ್ನು ಬದಲಾಯಿಸಲಾಗುತ್ತದೆ. ಆಹಾರದ ಗುಣಮಟ್ಟ, ಪ್ರಮಾಣ ಹಾಗೂ ಶುಚಿತ್ವ ಕಾಪಾಡಲು ಸೂಚಿಸಲಾಗಿದೆ. ದರ ಪರಿಷ್ಕರಣೆ ಇಲ್ಲ. ವಲಯವಾರು ಕರೆಯಲಾಗುವ ಟೆಂಡರ್ ಪ್ರಕ್ರಿಯೆ ನಂತರ ಇಂದಿರಾ ಕ್ಯಾಂಟೀನ್ ಯೋಜನೆಗೆ ಪುನಃ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Free Bus Service : ವಿದ್ಯುತ್ ದರ ಏರಿಕೆಯಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರವಿಲ್ಲ : ಸಿಎಂ ಸಿದ್ದರಾಮಯ್ಯ