ಬೆಂಗಳೂರು: ಪ್ರಾಮಾಣಿಕತೆ ಇನ್ನೂ ಜೀವಂತವಾಗಿವೆ ಎಂದು ಎತ್ತಿ ತೋರಿಸುವ ಎರಡು ಘಟನೆಗಳು ರಾಜ್ಯದಲ್ಲಿ ನಡೆದಿವೆ. ಮಂಡ್ಯದಲ್ಲಿ ವ್ಯಕ್ತಿಯೋರ್ವ ತಾನು ಉಳಿದುಕೊಂಡಿದ್ದ ಹೋಟೆಲ್ ರೂಂನಲ್ಲಿ ಸಿಕ್ಕ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದ್ದರೆ, ವಿಜಯಪುರದಲ್ಲಿ ಆಟೋ ಚಾಲಕ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ಚಿನ್ನ ಮತ್ತು ಅಮೂಲ್ಯ ದಾಖಲೆಗಳನ್ನು ಅವರಿಗೇ ಮರಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಹೋಟೆಲ್ ರೂಂನಲ್ಲಿ ಸಿಕ್ಕ 33 ಗ್ರಾಂ ಚಿನ್ನದ ಸರವನ್ನ, ಮೈಸೂರಿನ ಚಂದ್ರಶೇಖರ್ ಪೋಲಿಸರಿಗೆ ಒಪ್ಪಿಸಿದ್ದಾರೆ.
33 ಗ್ರಾಂ ಚಿನ್ನದ ಈ ಸರದ ಮೌಲ್ಯ 1,69,785 ರೂ.ಗಳಾಗಬಹುದೆಂದು ಅಂದಾಜಿಸಲಾಗಿದೆ. ಲಾಡ್ಜ್‌ನ ರೂಂ ಒಳಗೆ ಸಿಕ್ಕರೂ ಈ ಸರವನ್ನು ತಾವು ಇಟ್ಟುಕೊಳ್ಳದೆ ಪೊಲೀಸರಿಗೆ ಒಪ್ಪಿಸಿ ಚಂದ್ರಶೇಖರ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಮೈಸೂರಿನ ಚಂದ್ರಶೇಖರ್ ಟ್ರಾಕ್ಟರ್ ಶೂರೂಂನಲ್ಲಿ ಕೆಲಸ ಮಾಡುತ್ತಿದ್ದು, ಮದುವೆಯೊಂದರಲ್ಲಿ ಭಾಗವಹಿಸಲು ಗುರವಾರ ನಾಗಮಂಗಲಕ್ಕೆ ಬಂದಿದ್ದರು. ರಾತ್ರಿ ಉಳಿಯಲು ಖಾಸಗಿ ಲಾಡ್ಜ್‌ಗೆ ಹೋದಾಗ ಅಲ್ಲಿ ಈ ಸರ ಸಿಕ್ಕಿದೆ. ವಾರಸುದಾರರಿಗೆ ಈ ಸರವನ್ನು ಮರಳಿಸುವಂತೆ ಅವರು ಪೊಲೀಸರಲ್ಲಿ ಮನವಿಮಾಡಿದ್ದಾರೆ.
ಇಂತಹದೆ ಇನ್ನೊಂದು ಘಟನೆ ವಿಜಯಪುರದಲ್ಲಿ ನಡೆದಿದೆ. ಅಬ್ದುಲ್ ರಜಾಕ್ ಕಾಖಂಡಕಿ ಎಂಬ ಆಟೋ ಚಾಲಕರೊಬ್ಬರು ತಮ್ಮ ಆಟೋದಲ್ಲಿ ಬಿಟ್ಟು ಹೋಗಿದ್ದ ಗ್ರಾಹಕರೊಬ್ಬರ ಲಕ್ಷಾಂತರ ಮೌಲ್ಯದ ಚಿನ್ನ, ಎಲ್‌ಐಸಿ ಬಾಂಡ್ ಹಾಗೂ ನಗದನ್ನು ಮರಳಿ ಮಾಲೀಕರಿಗೆ ನೀಡಿ ಪ್ರಾಮಾಣಿಕತೆ ತೋರಿಸಿದ್ದಾರೆ.
ಅಶೋಕ ಗಬ್ಬೂರ ಎಂಬುವರು ಕೆಲಸದ ಒತ್ತಡದಲ್ಲಿ ಆಟೋದಲ್ಲಿಯೇ ಚಿನ್ನ ಮತ್ತು ಇನ್ನಿತರ ದಾಖಲೆಗಳಿದ್ದ ಬ್ಯಾಗನ್ನು ಬಿಟ್ಟು ಹೋಗಿದ್ದರು. ಆದರೆ ಆಟೋ ಚಾಲಕ ಅಬ್ದುಲ್ ರಜಾಕ್ ಕಾಖಂಡಕಿ ಸಂಚಾರಿ ಪೊಲೀಸ ಠಾಣೆಗೆ ಆಗಮಿಸಿ ಪಿಎಸ್ಐ ಸಂಜಯ್ ಕಲ್ಲೂರ ಸಮ್ಮುಖದಲ್ಲಿ ಚಿನ್ನಾಭರಣಗಳ ಮಾಲೀಕ ಅಶೋಕ ಅವರಿಗೆ ಅವೆಲ್ಲವನ್ನೂ ಒಪ್ಪಿಸಿದ್ದಾರೆ. ಆಟೋ ಚಾಲಕ ಕಾಖಂಡಕಿ ಅವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸರು ಅವರನ್ನು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮಾನವೀಯತೆ ಮೆರೆದ ಪೊಲೀಸರು, ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ ಆಸ್ಪತ್ರೆಗೆ