ಮೈಸೂರು: ಬಡವರ ಕಷ್ಟ ನಿವಾರಣೆಗಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ನಾರಾಯಣ ಮೂರ್ತಿಗೆ ಬಡವರ ಕಷ್ಟ ಗೊತ್ತಿಲ್ಲ. ಹಾಗಾಗಿ ಉಚಿತ ಕೊಡುಗೆಗಳನ್ನು (Congress Guarantee) ನೀಡದಂತೆ ಹೇಳಿದ್ದಾರೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಯಾವುದನ್ನೂ ಉಚಿತವಾಗಿ ನೀಡಬಾರದು ಎಂಬ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಬಡವರಿಗೆ ನೀಡುವ ಉಚಿತ ಯೋಜನೆಗಳ ಬಗ್ಗೆ ಮಾತನಾಡುವ ನಾರಾಯಣ ಮೂರ್ತಿ ಅವರು ಕಾರ್ಪೊರೇಟ್ ಸಂಸ್ಥೆಗಳ ಸಾವಿರಾರು ಕೋಟಿ ರೂ. ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಏಕೆ ಖಂಡಿಸಿಲ್ಲ. ಉಚಿತ ಕೊಡುಗೆಗಳ ವಿಚಾರದಲ್ಲಿ ನಾರಾಯಣಮೂರ್ತಿ ನೀಡಿರುವ ಹೇಳಿಕೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಆಗಿದೆ ಕಿಡಿಕಾರಿದ್ದಾರೆ.
ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಈ ಪ್ರಕರಣನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಭ್ರೂಣ ಪತ್ತೆ ಮತ್ತು ಹತ್ಯೆ ಎರಡೂ ಕೂಡ ಕಾನೂನು ಬಾಹಿರ. ಈ ಪ್ರಕಣರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | ಮೊಗಸಾಲೆ ಅಂಕಣ: ಲೋಕಸಭೆ ಚುನಾವಣೆಗೆ ತಯಾರಿ ಮತ್ತು ರಾಜ್ಯ ಬಿಜೆಪಿಯ ತಳಮಳ
ಪಂಚರಾಜ್ಯಗಳ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಈ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲ್ಲ. ಒಂದು ರೀತಿಯ ಹವಾ ಸೃಷ್ಟಿಯಾಗಬಹುದು. ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿ ಮೇಲುಗೈ ಸಾಧಿಸಲಿದೆ ಎಂದು ಹೇಳಿದರು.
ನಾರಾಯಣಮೂರ್ತಿ, ಮೋದಿ ಬದುಕಲು ಗ್ಯಾರಂಟಿ ಕೊಟ್ಟಿಲ್ಲ: ಶಿವರಾಜ ತಂಗಡಗಿ
ಕೊಪ್ಪಳ: ನಾರಾಯಣಮೂರ್ತಿ, ಮೋದಿ ಬದುಕುವುದಕ್ಕಾಗಿ ಗ್ಯಾರಂಟಿ ಯೋಜನೆ ನೀಡಿಲ್ಲ. ಬಡವರು ಜನ ಸಾಮಾನ್ಯರು ಬದುಕಬೇಕಾಗಿದೆ. ಅದಕ್ಕಾಗಿ ಗ್ಯಾರಂಟಿ ಯೋಜನೆ ನೀಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಉಚಿತ ಯೋಜನೆಗಳ ಬಗ್ಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ 72 ಸ್ಥಾನ ಗೆಲ್ಲಲಿದೆ. ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಜಾರಿ ಮಾಡಲಾಗಿದೆ. ತೆಲಂಗಾಣದಲ್ಲಿ ಆರು ಗ್ಯಾರಂಟಿ ಯೋಜನೆ ಘೋಷಣೆ ಮಾಡಲಾಗಿದೆ. ಜನ ಕಾಂಗ್ರೆಸ್ ಪರವಾಗಿದ್ದು, ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಿತ್ತುಕೊಂಡು ಹೋಗುತ್ತದೆ ಎಂದು ತಿಳಿಸಿದರು.
ಈಶ್ವರಪ್ಪ ಕಾಂಗ್ರೆಸ್‌ಗೆ ನೆಲೆ ಇಲ್ಲ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲು ಈಶ್ವರಪ್ಪ ಶಿವಮೊಗ್ಗದಲ್ಲಿ ನೆಲೆ ಕಂಡುಕೊಳ್ಳಲಿ, ಅವರಿಗೇ ಟಿಕೆಟ್ ಇಲ್ಲ. ಇನ್ನೇನು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿ ಕಾರಿದರು.
ಸೋನಿಯಾ ಗಾಂಧಿಗೆ ನಾನು ತಲೆ ಬಾಗುವುದಿಲ್ಲ ಎಂಬ ಜನಾರ್ದನರೆಡ್ಡಿ ಹೇಳಿಕೆಗೆ ಸ್ಪಂದಿಸಿ, ನಾವೇನೂ ಅವರಿಗೆ ತಲೆ ಬಾಗು ಎಂದು ಹೇಳಿಲ್ಲ ಎಂದರು.
ಇದನ್ನೂ ಓದಿ | CM Siddaramaiah : ಪ್ಯಾಲೆಸ್ತೀನ್ ಪರ ನಾಟಕ ತಡೆದ ಪೊಲೀಸರು; ಸಿಎಂ ಸಿದ್ದರಾಮಯ್ಯ ಗರಂ!
ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಹಿಂಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕ್ರಮ ಬದ್ಧವಾಗಿ ಸಿಬಿಐಗೆ ವಹಿಸಿಲ್ಲ. ಸಚಿವ ಸಂಪುಟದಲ್ಲಿ ಈ ಕುರಿತು ಕೂಲಂಕಷವಾಗಿ ಚರ್ಚೆಯಾಗಿ ನಿರ್ಧರಿಸಲಾಗಿದೆ ಎಂದರು.
ನಾಗೇಂದ್ರ ಮೇಲಿನ ಪ್ರಕರಣ ಹಿಂಪಡೆದಿಲ್ಲ ಎಂಬ ಜನಾರ್ದನರಡ್ಡಿ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ನಾಗೇಂದ್ರ ಬಗ್ಗೆ ಜನಾರ್ದನರೆಡ್ಡಿ ವಿಚಾರ ಮಾಡುವುದು ಬೇಡ, ಅವರು ನಾಗೇಂದ್ರ ಪ್ರಕರಣದಿಂದಲೂ ಬಚಾವ್ ಆಗಬಹುದು ಎಂದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ