Site icon Vistara News

ಆಗಸ್ಟ್ 1ರಿಂದ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಘಟಕ ಕಾರ್ಯಾರಂಭ ಸಾಧ್ಯತೆ; ಸಿಬ್ಬಂದಿಗೆ ಸಂಭ್ರಮ

infosys

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ (infosys) ಘಟಕ ಆಗಸ್ಟ್ 1ರಿಂದ ಕಾರ್ಯಾರಂಭ ಮಾಡುವ ಸಾಧ್ಯತೆಗಳಿವೆ. ಈ ಬಗ್ಗೆ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ʼಸ್ಟಾರ್ಟ್ ಇನ್ಫೋಸಿಸ್ʼ ಅಭಿಯಾನ ನಡೆಸುತ್ತಿದ್ದ ಕಂಪನಿಯ ಸಿಬ್ಬಂದಿ ಮತ್ತು ಟೆಕ್ಕಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಕಳೆದ ಜೂನ್ 22 ರಂದು ಇನ್ಫೋಸಿಸ್ ಸಂಸ್ಥೆ, ಇಂದೋರ್, ನಾಗಪುರ್, ಕೊಯಂಬತ್ತೂರ್ ಸೇರಿ 6 ನಗರಗಳಲ್ಲಿನ ಹೊಸದಾಗಿ ಆರಂಭಿಸಿದ ತನ್ನ ಕಚೇರಿಗಳಲ್ಲಿ ಕಾರ್ಯಾರಂಭ ಮಾಡುವುದಾಗಿ ಪ್ರಕಟಿಸಿತ್ತು. ಆದರೆ ಹುಬ್ಬಳ್ಳಿಯಲ್ಲಿ ಸಿದ್ಧವಾಗಿರುವ ಕಚೇರಿಯನ್ನು ಆರಂಭಿಸುವ ಕುರಿತು ಹೇಳಿಕೆ ನೀಡಿರಲಿಲ್ಲ.

ಹೀಗಾಗಿ ಉತ್ತರ ಕರ್ನಾಟಕದ ವೃತ್ತಿಪರರು ಒಟ್ಟಾಗಿ ʼಸ್ಟಾರ್ಟ್ ಇನ್ಫೋಸಿಸ್ʼ ಹುಬ್ಬಳ್ಳಿ ತಂಡ ರಚನೆ ಮಾಡಿಕೊಂಡು, ಹುಬ್ಬಳಿಯ ಘಟಕವನ್ನೂ ಪ್ರಾರಂಭಿಸಲು ಕರ್ನಾಟಕ ಸರ್ಕಾರ ಮತ್ತು ಇನ್ಫೋಸಿಸ್ ಸಂಸ್ಥೆಯನ್ನು ಒತ್ತಾಯಿಸಲು ಆರಂಭಿಸಿದ್ದರು. ಹತ್ತು ಸಾವಿರ ಪತ್ರ ಕಳಿಸುವ ಅಭಿಯಾನಕ್ಕೂ ಚಾಲನೆ ನೀಡಿದ್ದರು. ಈಗ ಇನ್ಫೋಸಿಸ್ ಘಟಕ ಕಾರ್ಯಾರಂಭ ಮಾಡುವ ಮೂಲಕ ಉತ್ತರ ಕರ್ನಾಟಕ ಭಾಗದ ಜನರ ಬೇಡಿಕೆಗೆ ಸ್ಪಂದಿಸಿರುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ | ಇನ್ಫೋಸಿಸ್‌ನಿಂದ ಎರಡನೇ ಸ್ತರದ ನಗರಗಳಲ್ಲಿ 4 ಹೊಸ ಕಚೇರಿಗಳ ನಿರ್ಮಾಣ

ಹಿನ್ನೆಲೆ: 2012 ರಲ್ಲಿ ಹುಬ್ಬಳ್ಳಿಯಲ್ಲಿ ಐಟಿ ವಿಶೇಷ ಆರ್ಥಿಕ ವಲಯ (ಎಸ್ಇಝೆಡ್) ಸ್ಥಾಪಿಸಲು ಇನ್ಫೋಸಿಸ್ ಸಂಸ್ಥೆಯು ಸರ್ಕಾರದಿಂದ 50 ಎಕರೆ ಭೂಮಿ ಪಡೆದುಕೊಂಡಿತ್ತು. 2018ರವರೆಗೆ ಇಲ್ಲಿ ಎಲ್ಲ ಸೌಕರ್ಯಗಳಿಂದ ಸುಸಜ್ಜಿತವಾದ ಘಟಕ ಸಿದ್ಧವಾಗಿದೆ. 1500ಕ್ಕೂ ಹೆಚ್ಚು ಕಂಪ್ಯೂಟರ್ ವೃತ್ತಿಪರರಿಗೆ ಉದ್ಯೋಗಾವಕಾಶ ಕಲ್ಪಿಸಿ ಸಾಫ್ಟ್ ವೇರ್ ರಫ್ತಿನ ವಹಿವಾಟು ನಡೆಸುವ ಸಾಮರ್ಥ್ಯ ಸೃಷ್ಟಿಸಲಾಗಿದೆ.

ಘಟಕದ ನಿರ್ಮಾಣ ಕಾರ್ಯಗಳು ಪೂರ್ಣಗೊಂಡು 5 ವರ್ಷ ಕಳೆದರೂ ಹುಬ್ಬಳಿಯ ಘಟಕ ಕಾರ್ಯಾರಂಭ ಆಗದೆ ಇರುವುದರಿಂದ ಅವಳಿ ನಗರದ ಮತ್ತು ಉತ್ತರ ಕರ್ನಾಟಕದ ಜನರ ಐಟಿ ಉದ್ಯಮ ಈ ಭಾಗದಲ್ಲಿ ಪಸರಿಸುವ ಕನಸ್ಸು ಕನಸಾಗಿಯೇ ಉಳಿದಿತ್ತು. ಇನ್ಫೋಸಿಸ್ ಇಲ್ಲಿ ಕಾರ್ಯಾರಂಭ ಮಾಡದೇ ಇರುವುದು ಕರ್ನಾಟಕ ಸರ್ಕಾರದ ‘ಬಿಯಾಂಡ್ ಬೆಂಗಳೂರು’ (ಬೆಂಗಳೂರಿನಾಚೆ) ನೀತಿಗೂ ಹಿನ್ನಡೆಯಾಗಿತ್ತು.

ಇದೀಗ ಇನ್ಫೋಸಿಸ್ ಸಂಸ್ಥೆ ತನ್ನ ಸಿಬ್ಬಂದಿಗೆ ಹುಬ್ಬಳ್ಳಿಯಲ್ಲಿ ವಿಶ್ವದರ್ಜೆಯ ಸೌಕರ್ಯಗಳನ್ನು ಹೊಂದಿದ ಘಟಕ (ಹುಬ್ಬಳ್ಳಿ ಡಿಸಿ) ಆಗಸ್ಟ್ 1 ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ಸ್ಟಾರ್ಟ್ ಇನ್ಫೋಸಿಸ್ ಹುಬ್ಬಳ್ಳಿ ತಂಡದ ಪ್ರಮುಖರಾದ ವೈಮಾನಿಕ ವಿಜ್ಞಾನಿ ಸಂತೋಷ ನರಗುಂದ, ಶಾಮ ನರಗುಂದ, ಉದಯ ಪೇಂಡ್ಸೆ, ವಿಜಯ ಸಾಯಿ, ನಚಿಕೇತ ಜಮಾದಾರ ಸಂತಸ ವ್ಯಕ್ತಪಡಿಸಿದ್ದಾರೆ. ಅಭಿಯಾನದಲ್ಲಿ ಭಾಗಿಯಾದ ಎಲ್ಲ ವೃತ್ತಿಪರರಿಗೆ ಮತ್ತು ಅಭಿಯಾನಕ್ಕೆ ಬೆಂಬಲ ಸೂಚಿಸಿದ ಸಾವಿರಾರು ಜನರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ | ಟಾಪ್‌ 3 ಐಟಿ ಕಂಪನಿಗಳ ಪೈಕಿ ಇನ್ಫೋಸಿಸ್‌ನಿಂದ ಉದ್ಯೋಗಿಗಳ ವಲಸೆ ಹೆಚ್ಚು

Exit mobile version