ಬೆಂಗಳೂರು: ಹೆತ್ತು-ಹೊತ್ತು ಸಲಹಿದವಳನ್ನು ಸ್ವಂತ ಮಗಳೇ ಬೀದಿಪಾಲು ಮಾಡಿದ ಅಮಾನವೀಯ ಘಟನೆ (Inhuman Behaviour) ನಡೆದಿದೆ. ಕಾರಲ್ಲಿ ಕಳ್ಳರಂತೆ ಬಂದ ಈ ಪಾಪಿಗಳು, ಕೊರೆಯುವ ಚಳಿಯಲ್ಲಿ ವಯಸ್ಸಾದ ವೃದ್ಧೆಯನ್ನು ರಾತ್ರೋರಾತ್ರಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ವಿ.ಕಲ್ಲಹಳ್ಳಿಯಲ್ಲಿ ಈ ದುಷ್ಕೃತ್ಯವು ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
80 ವರ್ಷದ ಗ್ರೇಸಿ ಪೀಟರ್ ಎಂಬವರನ್ನು ಅವರ ಸ್ವಂತ ಮಗಳು ಹಾಗೂ ಅಳಿಯನೇ ಬೀದಿಪಾಲು ಮಾಡಿದ್ದಾರೆ. ಗ್ರೇಸಿ ಪೀಟರ್ ದೊಮ್ಮಸಂದ್ರದಲ್ಲಿದ್ದ ಮಗಳು ಆಶಾರಾಣಿ, ಅಳಿಯ ಮಂಜುನಾಥ್ ಹಾಗೂ ಮೊಮ್ಮಕ್ಕಳ ಜತೆ ವಾಸವಿದ್ದರು.
ಅಳಿಯ ಮಂಜುನಾಥ್ ದಿನನಿತ್ಯ ಕುಡಿದು ಬಂದು ಅತ್ತೆ ಗ್ರೇಸಿ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶದ್ಧಗಳಿಂದ ನಿಂದಿಸುತ್ತಿದ್ದ. ವೃದ್ಧೆಯ ಕಾಲು ಮುರಿದಿದ್ದರು, ಇದರಿಂದಾಗಿ ನರಳಾಡುತ್ತಿದ್ದರು. ನಿನ್ನೆ ಶುಕ್ರವಾರ ತಡರಾತ್ರಿ ಕಾರಿನಲ್ಲಿ ಬಂದ ಆಶಾರಾಣಿ ದಂಪತಿ ಹೆತ್ತ ತಾಯಿಯನ್ನು ಸರ್ಜಾಪುರದ ಕಲ್ಲಹಳ್ಳಿಯ ದೇವಾಲಯದ ಬಳಿ ಬಿಟ್ಟು ಪರಾರಿ ಆಗಿದ್ದರು.
ಬೆಳಗ್ಗೆ ದೇವಾಲಯಕ್ಕೆ ಬಂದಾಗ ಚಳಿಯಲ್ಲಿ ನಡುಗುತ್ತಿದ್ದ ವೃದ್ಧೆಯನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಬಳಿಕ ಆಟೋ ಮೂಲಕ ಬನ್ನೇರುಘಟ್ಟದ air humanitarian homesಗೆ ರವಾನೆ ಮಾಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಜತೆಗೆ ಮಕ್ಕಳ ಹೊಡೆದು ಗಾಯಗೊಂಡು ನರಳಾಡುತ್ತಿದ್ದ ಹಿರಿಜೀವಕ್ಕೆ ಆಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Road Accident : ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿ; ಮಸಣ ಸೇರಿದ ಸರ್ಕಾರಿ ಶಾಲಾ ಶಿಕ್ಷಕ
ಕುಡಿದು ಬಂದು ಹೊಡಿತಾಳೆ ಬಡಿತಾಳೆ ನನ್ ಮಗಳು!
ಬೆಂಗಳೂರು: ಕುಡಿದು ಬಂದು ಮಗಳು ಹೊಡೆದು ಬಡಿದು ಮಾಡುತ್ತಾಳೆ (Assault Case) ಎಂದು ಪೋಷಕರು ದೂರಿದ್ದಾರೆ. ಇತ್ತ ಹೆತ್ತವರೇ ನನ್ನ ಕೊಲೆಗೆ ಯತ್ನಿಸಿದ್ದಾರೆ ಎಂದು ಮಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಗೀತಾರಾಣಿ (67) ಮತ್ತು ರಾಮಚಂದ್ರಪ್ಪ (73) ಎಂಬ ದಂಪತಿ ತಮ್ಮ ಹಿರಿಯ ಮಗಳಾದ ಧಾತ್ರಿ (42) ಎಂಬಾಕೆ ವಿರುದ್ಧ ದೂರು ನೀಡಿದ್ದಾರೆ. ಮಗಳು ಧಾತ್ರಿಗೆ ಪತಿ ಇಲ್ಲದ ಕಾರಣಕ್ಕೆ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದಾಳೆ. ಹೀಗಿರುವಾಗ ಕಳೆದ ಜ.3ರಂದು ಕುಡಿದು ಬಂದು ಗಲಾಟೆ ಮಾಡಿ, ದೊಣ್ಣೆಯಲ್ಲಿ ಹೊಡೆದು ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಈ ಹಿಂದೆಯೂ ಕುಡಿದು ಗಲಾಟೆ ಮಾಡಿದ್ದರಿಂದ ಪೊಲೀಸ್ ಕೇಸ್ ಆಗಿತ್ತು. ಬಳಿಕ ತಣ್ಣಗೆ ಆಗಿದ್ದವಳು ಇದೀಗ ಮತ್ತೆ ಕುಡಿದು ಗಲಾಟೆ ಮಾಡುವುದನ್ನು ಶುರು ಮಾಡಿದ್ದಾಳೆ ಎಂದು ಗೀತಾರಾಣಿ ಆರೋಪಿಸಿದ್ದಾರೆ. ತಾಯಿ ಗೀತಾರಾಣಿ ಸರ್ಕಾರಿ ನೌಕರರಾಗಿ ನಿವೃತ್ತಿ ಹೊಂದಿದ್ದಾರೆ. ಈ ನಡುವೆ ಮನೆ ವಿಲ್ ತನ್ನ ಹೆಸರಿಗೆ ಬರೆಯದಿದ್ದರೆ ಕೊಲೆ ಮಾಡುವುದಾಗಿ ಮಗಳು ಬೆದರಿಕೆ ಹಾಕುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Road Accident : ಆಯತಪ್ಪಿ ಕಂದಕ್ಕೆ ಉರುಳಿದ ಬಸ್; ಒಬ್ಬ ಸಾವು, 25 ಮಂದಿಗೆ ಗಾಯ
ಹೆತ್ತವರಿಂದ ಕೊಲೆ ಯತ್ನ
ತಾಯಿ-ಮಗಳು ಇಬ್ಬರು ಪರಸ್ಪರ ಪೊಲೀಸರು ದೂರು ನೀಡಿದ್ದಾರೆ. ಮನೆಗೆ ಕರೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಗಳು ಧಾತ್ರಿಯೂ ಆರೋಪಿಸಿದ್ದಾರೆ. ಆಸ್ತಿಗೆ ಸಂಬಂಧಿಸಿದಂತೆ ನನಗೂ ಮತ್ತು ನನ್ನ ತಂದೆ-ತಾಯಿ, ತಂಗಿ ನಡುವೆ ಕೋರ್ಟ್‌ನಲ್ಲಿ ಪರಸ್ಪರ ಓ.ಎಸ್ ಕೇಸ್‌ಗಳಿವೆ. ಹೀಗಿರುವಾಗ ಕಳೆದ ಜನವರಿ 3ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಮ್ಮ ತಾಯಿ ಗೀತಾರಾಣಿ ಮನೆಗೆ ಕರೆದರು.
ಏನೆಂದು ವಿಚಾರಿಸಲು ಮನೆಯೊಳಗೆ ಹೋದ ನನಗೆ ತಂದೆ ರಾಮಚಂದ್ರಪ್ಪ, ತಂಗಿ ದಿಗಂತ ಎದುರಾದರು. ಮನೆಯೊಳಗೆ ಕಾಲಿಟ್ಟ ಕೂಡಲೇ ನನ್ನನ್ನು ಒಳಗೆ ನೂಕಿ ಬೀಳಿಸಿದರು. ನನ್ನ ತಂಗಿ ಹಿಂದಿನಿಂದ ಬಂದು ಜೋರಾಗಿ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾಳೆ. ನಮ್ಮ ಅಮ್ಮ ಚಾಕುವಿನಿಂದ ಇರಿಯಲು ಬಂದಾಗ ತಪ್ಪಿಸಿಕೊಳ್ಳುವಾಗ ನನ್ನ ಬಲಗೈ ಬೆರಳುಗಳಿಗೆ ಗಾಯವಾಗಿದೆ. ನನ್ನ ತಲೆಗೆ ಪೆಟ್ಟಾಗಿ ನೆಲಕ್ಕೆ ಬಿದ್ದಾಗ, ತಂದೆ ರಾಮಚಂದ್ರಪ್ಪ ಕಾಲಿನಿಂದ ಒದ್ದರು ಎಂದು ಧಾತ್ರಿ ಆರೋಪಿಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ನಿನಗೊಂದು ಗತಿ ಕಾಣಿಸುತ್ತೀವಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮನೆಯವರ ವಿರುದ್ಧ ದೂರು ನೀಡಿದ್ದಾಳೆ.
ಸದ್ಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಈ ಗಲಾಟೆ ಸಂಸಾರದ ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ