Site icon Vistara News

Injured Elephant | ಬೇಲೂರಲ್ಲಿ ಗಾಯಗೊಂಡ ಒಂಟಿ ಸಲಗ ಪತ್ತೆ; ಚಿಕಿತ್ಸೆ ಕೊಡಿಸದೆ ನೋಡುತ್ತ ನಿಂತ ಅರಣ್ಯ ಇಲಾಖೆ ಸಿಬ್ಬಂದಿ

beluru elephant 4

ಹಾಸನ: ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಕಾಡಾನೆಯೊಂದು ಗಾಯಗೊಂಡ (Injured Elephant) ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತೀವ್ರವಾಗಿ ನರಳಾಟ ನಡೆಸುತ್ತಿದೆ. ಇದು ೮ ಕಾಡಾನೆಗಳ ಹಿಂಡಿನ ಜತೆಗಿದ್ದ ಆನೆಯೆಂದು ಗುರುತಿಸಲಾಗಿದ್ದು, ಅವುಗಳಿಂದ ಬೇರ್ಪಟ್ಟು ಬಂದಿದೆ. ಈಗ ಕಾಫಿತೋಟವೊಂದರಲ್ಲಿ ನಿತ್ರಾಣ ಸ್ಥಿತಿಯಲ್ಲಿದೆ.

Injured Elephant

ಬೆಳಗ್ಗೆ ಕಾಫಿ ತೋಟದ ಸಮೀಪ ಆನೆಯೊಂದು ಘೀಳಿಡುತ್ತಿದ್ದ ಶಬ್ದ ಕೇಳಿದ್ದರಿಂದ ಸಮೀಪ ಹೋಗಿ ನೋಡಿದಾಗ ಒಂಟಿ ಸಲಗವೊಂದು ಗಾಯಗೊಂಡ ಸ್ಥಿತಿಯಲ್ಲಿ ನಿತ್ರಾಣಗೊಂಡಿರುವುದು ಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

Injured Elephant

ನಿತ್ರಾಣ ಸ್ಥಿತಿಯಲ್ಲಿದ್ದ ಆನೆ ಸಮೀಪ ಹೋಗಲು ಎಲ್ಲರೂ ಭಯಗೊಂಡಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಆದರೆ, ಮೊದಲೇ ಗಾಯಗೊಂಡ ಒಂಟಿ ಸಲಗವಾಗಿದ್ದರಿಂದ ಹತ್ತಿರ ಹೋಗಲು ಅವರಿಗೂ ಭಯವಾಗಿದೆ. ಆದರೂ, ಯಾವ ರೀತಿಯಲ್ಲಿ ಗಾಯವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಪಟ್ಟಿದ್ದಾರೆ.

ಇದನ್ನೂ ಓದಿ | Video Viral | ಆನೆಯನ್ನು ನಾಯಿ ಅಟ್ಟಾಡಿಸಿತೋ ಇಲ್ಲವೇ ನಾಯಿ ಜತೆ ಆನೆ ಆಟವಾಡಿತೋ; ವೈರಲ್‌ ಆಯ್ತು ವಿಡಿಯೊ!

ಯಾರಾದರೂ ಗುಂಡೇಟು ಹೊಡೆದಿದ್ದಾರೆಯೇ ಅಥವಾ ಹಾಗೆಯೇ ಗಾಯಗಳಾಗಿವೆಯೇ ಎಂಬುದನ್ನು ತಿಳಿಯಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಅದು ಗುಂಡಿನಿಂದ ಆದ ಗಾಯವಲ್ಲ ಎಂಬುದು ಗೊತ್ತಾಗಿದೆ. ಆದರೆ, ಯಾವ ರೀತಿ ಗಾಯ ಆಗಿರಬಹುದು ಎಂಬುದು ತಿಳಿದಿಲ್ಲ. ಇದೇ ವೇಳೆ ಆನೆಗೆ ಚಿಕಿತ್ಸೆ ಕೊಡಿಸಬೇಕೆಂದರೆ ಸುತ್ತಮುತ್ತ ಎಲ್ಲೂ ಅರಿವಳಿಕೆ ತಜ್ಞರು ಇಲ್ಲ. ಇದಕ್ಕಾಗಿ ಚಿಕ್ಕಮಗಳೂರಿನ ಭದ್ರಾ ಫಾರೆಸ್ಟ್‌ನಿಂದಲೇ ಬರಬೇಕಿದೆ. ಹೀಗಾಗಿ ಸದ್ಯಕ್ಕೆ ಕಾದು ನೋಡುವ ನಿರ್ಧಾರಕ್ಕೆ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿದ್ದು, ಆನೆ ತಾನಾಗಿಯೇ ಅಲ್ಲಿಂದ ನಿರ್ಗಮಿಸಲಿದೆಯೇ ಎಂಬುದನ್ನು ಕಾದುನೋಡುತ್ತಿದ್ದಾರೆ.

Injured Elephant

ಸ್ಥಳೀಯರಿಗೆ ಎಚ್ಚರಿಕೆ
ಈಗ ಆನೆಯೊಂದು ತನ್ನ ಗುಂಪಿನಿಂದ ಬೇರ್ಪಟ್ಟಿದೆ. ಆನೆಗಳ ಹಿಂಡು ಬಿಕ್ಕೋಡಿ ಸುತ್ತಮುತ್ತಲಲ್ಲೇ ಬೀಡುಬಿಟ್ಟಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇತರ ಆನೆಗಳು ಈ ಭಾಗಕ್ಕೆ ತಿರುಗಿ ಬರುವ ಸಾಧ್ಯತೆಗಳಿವೆ. ಹೀಗಾಗಿ ಸ್ಥಳೀಯರು ಈ ಬಗ್ಗೆ ಸಾಕಷ್ಟು ಗಮನ ಹರಿಸಬೇಕು. ಎಚ್ಚರಿಕೆಯಿಂದ ಸಂಚಾರ ಮಾಡಬೇಕು ಎಂದು ಸ್ಥಳೀಯರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ | Students Fall Sick | ಆನೆಕಾಲು ರೋಗ ನಿಯಂತ್ರಣ ಮಾತ್ರೆ ಸೇವನೆ; 20ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಅಸ್ವಸ್ಥ

Exit mobile version