Site icon Vistara News

Innovation Hub | ಕರಾವಳಿ ತೀರದ ಉದ್ದಿಮೆಗೆ ಉತ್ತೇಜನ; ಮಂಗಳೂರು ಇನ್ನೋವೇಶನ್ ಹಬ್ ಸ್ಥಾಪನೆ: ಸಚಿವ ಅಶ್ವತ್ಥನಾರಾಯಣ

innovation Hub mangalore

ಮಂಗಳೂರು: ರಾಜ್ಯದ ಕರಾವಳಿ ತೀರದ ಜಿಲ್ಲೆಗಳಲ್ಲಿ ಉದ್ದಿಮೆಗಳ ಬೆಳವಣಿಗೆಯನ್ನು ಉತ್ತೇಜಿಸಲು ನಗರದಲ್ಲಿ 2 ಲಕ್ಷ ಚದರ ಅಡಿ ವಿಸ್ತಾರದ ಮಂಗಳೂರು ಇನ್ನೋವೇಶನ್ ಹಬ್ (Innovation Hub) ಸ್ಥಾಪಿಸಲಾಗುವುದು. ಈ ಹಬ್‌ ಅನ್ನು ಕಿಯೋನಿಕ್ಸ್ ಮೂಲಕ ನಿರ್ಮಿಸಲಾಗುವುದು. ಜತೆಗೆ ಮಂಗಳೂರು ಔದ್ಯಮಿಕ ಕ್ಲಸ್ಟರ್‌ಗೆ 25 ಕೋಟಿ ರೂಪಾಯಿಗಳ ಬೀಜ ನಿಧಿ ಕೊಡಲಾಗಿದೆ ಎಂದು ಐಟಿ-ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮಂಗಳೂರು ಕ್ಲಸ್ಟರ್ ವತಿಯಿಂದ ಆಯೋಜಿಸಲಾಗಿರುವ ಮಂಗಳೂರು ಟೆಕ್ನೋವಾನ್ಜಾ ಅಂಗವಾಗಿ ಶನಿವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ಫೋಸಿಸ್ ಮತ್ತು ಇತರ ಕಂಪನಿಗಳ ಸಹಕಾರ ಪಡೆದು 2 ಲಕ್ಷ ಚದರಡಿ ವಿಸ್ತೀರ್ಣದ ಜಾಗದ ವ್ಯವಸ್ಥೆ ಮಾಡಿಕೊಂಡು ‘ಮಂಗಳೂರು ಇನ್ನೋವೇಶನ್ ಹಬ್’ ಸ್ಥಾಪಿಸಲು ಅನುವು ಮಾಡಿಕೊಡಲಾಗುವುದು. ಇದು ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉದ್ದಿಮೆಗಳ ಬೆಳವಣಿಗೆಗೆ ಇಂಬು ನೀಡಲಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಭಾಗವು ಮೊದಲಿನಿಂದಲೂ ಬ್ಯಾಂಕಿಂಗ್ ಚಟುವಟಿಕೆಗೆ ಹೆಸರಾಗಿದೆ.‌ ಅದಕ್ಕೆ ಪೂರಕವಾದ ಕಾರ್ಯ ಪರಿಸರ ಇಲ್ಲಿದೆ.‌ ಇದನ್ನು ಗಮನದಲ್ಲಿರಿಸಿಕೊಂಡು ಮಂಗಳೂರು ವಲಯವನ್ನು ಫಿನ್ ಟೆಕ್ ಹಬ್ ಆಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ವಿವರಿಸಿದರು. ಮಂಗಳೂರು ಕ್ಲಸ್ಟರ್‌ನಲ್ಲಿ 50 ಫಿನ್ಟೆಕ್ ಕಂಪನಿಗಳನ್ನು ಸ್ಥಾಪಿಸಬೇಕು ಎನ್ನುವುದು ಸರ್ಕಾರದ ಗುರಿ ಆಗಿದೆ. ಈ ಮೂಲಕ 2030ರ ವೇಳೆಗೆ ರಾಜ್ಯವು ನಡೆಸಲು ಉದ್ದೇಶಿಸಿರುವ 500 ಬಿಲಿಯನ್ ಡಾಲರ್ ವಹಿವಾಟಿನಲ್ಲಿ ಅರ್ಧದಷ್ಟು ಕೊಡುಗೆ ಈ ಭಾಗದ ಉದ್ದಿಮೆಗಳಿಂದಲೇ ಬರುವಂತೆ ಆಗಬೇಕು ಎಂದು ಅವರು ಆಶಿಸಿದರು.

ಬೆಂಗಳೂರು ನಗರವು ದೇಶದ ಸಿಲಿಕಾನ್ ವ್ಯಾಲಿ ಎಂದು ಹೆಸರಾಗಿರುವಂತೆ ಮಂಗಳೂರು ನಗರವು ದೇಶದ ‘ಸಿಲಿಕಾನ್ ಬೀಚ್’ ಎಂದು ಹೆಸರಾಗಬೇಕೆಂದು ‌ಸಚಿವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸರ್ಕಾರವು ವಿವಿಧ ಕಂಪನಿಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಿತು. ಜತೆಗೆ ಸಚಿವರು ಕ್ಯಾಶ್ ಫ್ರೀ ಕಂಪನಿಯ ಮಂಗಳೂರು ಕಚೇರಿಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ ಕಟೀಲ್, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಇದ್ದರು. ಐಟಿ-ಬಿಟಿ ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಉದ್ಯಮಿ ಮೋಹನ್ ದಾಸ್ ಪೈ, ಕೆಡಿಇಎಂ ಅಧ್ಯಕ್ಷ ಬಿ ವಿ ನಾಯ್ಡು, ರಾಜ್ಯ ಸರ್ಕಾರದ ಸ್ಟಾರ್ಟ್ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಐಟಿ ನಿರ್ದೇಶಕ ಡಾ.ಶಿವಶಂಕರ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ | Private Hospital | ಖಾಸಗಿ ಆಸ್ಪತ್ರೆಗಳಲ್ಲಿ ಬೇಕಾಬಿಟ್ಟಿ ಬಿಲ್ಲಿಂಗ್‌; ಪಾರದರ್ಶಕತೆ ಇಲ್ಲದ್ದಕ್ಕೆ ಸಚಿವ ಡಾ. ಕೆ. ಸುಧಾಕರ್‌ ಅಸಮಾಧಾನ

Exit mobile version