ಬೆಂಗಳೂರು: ಅದ್ಯಾಕೊ ಪ್ರತಿ ಬಾರಿ ವಿಧಾನಸಭೆ ಚುನಾವಣೆ ಬಂದಾಗಲೂ ಹಳೆ ಮೈಸೂರು ಭಾಗದ ವರುಣ ಕ್ಷೇತ್ರಕ್ಕೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹೆಸರಿಗೂ ತಳುಕುಹಾಕಿಕೊಳ್ಳುತ್ತದೆ. ವೀರಶೈವ ಲಿಂಗಾಯತ ಸಮುದಾಯದ ಜತೆಗೆ ಬೇರೆ ಸಮುದಾಯಗಳೂ ತನ್ನ ಜತೆಯಲ್ಲಿದ್ದು, ಅದೆಲ್ಲವೂ ನಿರಾತಂಕವಾಗಿ ವಿಜಯೇಂದ್ರ ಅವರಿಗೆ ವರ್ಗಾವಣೆ ಆಗಬೇಕು ಎಂಬ ಯಡಿಯೂರಪ್ಪ ಕನಸಿಗೆ ಅಡ್ಡಿಗಳು ಎದುರಾಗುತ್ತಲೇ ಇವೆ. ಆದರೆ ಎರಡು ಸಲ ಹಿನ್ನಡೆ ಅನುಭವಿಸಿರುವ ಯಡಿಯೂರಪ್ಪ ಅವರು ಇದೀಗ ಮೂರನೇ ಸಲ ಈ ವರುಣ ಉಸಾಬರಿಯೇ ಬೇಡ ಎಂದು ಪುತ್ರನನ್ನು ಶಿಕಾರಿಪುರಕ್ಕೆ ಎಳೆದುಕೊಂಡು ಹೋಗಿದ್ದಾರೆ.
2018ರಲ್ಲಿ ವಿಧಾನಸಭೆ ಚುನಾವಣೆಗಳು ಘೋಷಣೆಯಾಗುವ ವೇಳೆಗೆ ಹಳೇ ಮೈಸೂರು ಭಾಗದಲ್ಲಿ ವಿಜಯೇಂದ್ರ ಹೆಸರು ಪ್ರಚಾರದಲ್ಲಿತ್ತು. ವರುಣದಲ್ಲಿ ಸಿದ್ದರಾಮಯ್ಯ ಪುತ್ರ ಸ್ಪರ್ಧೆ ಮಾಡುತ್ತಾರೆ ಎಂದು ಗೊತ್ತಾದ ಕೂಡಲೆ ಬಿಜೆಪಿಯಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒತ್ತಾಯ ಹೆಚ್ಚುತ್ತಾ ಹೋಯಿತು. ವಿಜಯೇಂದ್ರ ಬಂದ್ರೆ ಈ ಭಾಗದಲ್ಲಿ ಲಿಂಗಾಯತರು ಬಿಜೆಪಿ ಕಡೆ ವಾಲುತ್ತಾರೆ ಎನ್ನೋ ಲೆಕ್ಕಾಚಾರ.
ಇದರ ಜತೆಗೇ, ಯಡಿಯೂರಪ್ಪ ಅವರದ್ದು ಮಂಡ್ಯ ಜಿಲ್ಲೆಯ ಬೂಕನಕೆರೆ. ಇದೇ ಲಿಂಕ್ ಹಿಡಿದುಕೊಂಡು ವಿಜಯೇಂದ್ರ ಹಳೆ ಮೈಸೂರಲ್ಲಿ ಸ್ಪರ್ಧಿಸಿದರೆ ಪಕ್ಷ ಗಟ್ಟಿಯಾಗುತ್ತದೆ. ಬಿಜೆಪಿ ಇತಿಹಾಸದಲ್ಲೆ ಕರ್ನಾಟಕದಲ್ಲಿ ಒಂದು ಬಾರಿಯೂ ಗೆಲ್ಲದೇ ಇದ್ದ ಜಿಲ್ಲೆ ಎಂದರೆ ಅದು ಮಂಡ್ಯವಾಗಿತ್ತು. ಇದಕ್ಕೆ ಸರಿಯಾಗಿ ಕೆ.ಆರ್. ಪೇಟೆ ಬೈ ಎಲೆಕ್ಷನ್ ನಲ್ಲಿ ನಾರಾಯಣ ಗೌಡರನ್ನು ವಿಜಯೇಂದ್ರ ಮತ್ತು ತಂಡ ಗೆಲ್ಲಿಸಿಕೊಂಡು ಬಂದಿತ್ತು.
ಆದರೆ ಇನ್ನೇನು ನಾಮಪತ್ರ ಸಲ್ಲಿಸಬೇಕು ಎನ್ನೋ ದಿನ ಯಡಿಯೂರಪ್ಪರನ್ನು ಕರೆದ ಹೈಕಮಾಂಡ್ ನಾಯಕರು, ವಿಜಯೇಂದ್ರಗೆ ಟಿಕೆಟ್ ಮಿಸ್ ಎಂದರು. ಅಷ್ಟೇ ಅಲ್ಲದೆ, ಈ ವಿಚಾರವನ್ನು ನೀವೇ ಘೋಷಣೆ ಮಾಡಿ ಎಂದು ಕಳಿಸಿಬಿಟ್ಟರು. ಯಡಿಯೂರಪ್ಪ ಸಹ ಭಾರವಾದ ಹೃದಯದಲ್ಲಿ ಇದನ್ನು ಘೋಷಿಸಿದರು.
ನಂತರ 2021ರಲ್ಲಿ ವಿಧಾನ ಪರಿಷತ್ ಚುನಾವಣೆಗಳು ಎದುರಾದಾಗ ಪಕ್ಷದಿಂದ ನಾಮನಿರ್ದೇಶನಕ್ಕೆ ಅವಕಾಶವಿತ್ತು. ಕೋರ್ ಕಮಿಟಿ ಸಭೆಯಲ್ಲಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ, ವಿಜಯೇಂದ್ರ ಹೆಸರೆತ್ತಿದರು. ಅವರ ಹೆಸರನ್ನು ಡೆಲ್ಲಿಗೆ ಶಿಫಾರಸು ಮಾಡೋಣ, ನಾನು ಟಿಕೆಟ್ ತರ್ತೀನಿ ಎಂದರು. ಆದರೆ ಡೆಲ್ಲಿ ವರಿಷ್ಠರು ಈ ಮಾತಿಗೆ ಒಪ್ಪಲೇ ಇಲ್ಲ. ತಮ್ಮ ಪುತ್ರನಿಗೇ ಪರಿಷತ್ ಟಿಕೆಟ್ ಕೊಡಿಸೋಕೆ ಆಗಲಿಲ್ಲ ಅಂತ ಯಡಿಯೂರಪ್ಪ ಅವರ ಕುರಿತು ಹಗುರ ಮಾತುಗಳು ಹರಿದಾಡಿದವು. ವಿಜಯೇಂದ್ರ ಅವರಿಗೂ ಇದು ಹಿನ್ನಡೆ ಆಗಿತ್ತು.
ಅದಕ್ಕಾಗಿಯೇ ಈಗಾಗಲೆ ಯಡಿಯೂರಪ್ಪ ಅವರು ತಮ್ಮ ಚುನಾವಣಾ ನಿವೃತ್ತಿ ಘೋಷಿಸಿ ವಿಜಯೇಂದ್ರ ಹೆಸರನ್ನು ಘೊಷಿಸಿಬಿಟ್ಟಿದ್ದಾರೆ. ಇದೀಗ ಮೂರನೇ ಬಾರಿ ಮತ್ತೆ ವರುಣ ಕ್ಷೇತ್ರಕ್ಕೆ ವಿಜಯೇಂದ್ರ ಹೆಸರು ಹರಿದಾಡುತ್ತಿದೆ. ಸಿದ್ದರಾಮಯ್ಯ ಸ್ಪರ್ಧೆ ಮಾಡುವುದು ಕನ್ಫರ್ಮ್ ಆದ ನಂತರ ವಿಜಯೇಂದ್ರ ಸ್ಪರ್ಧೆಗೆ ಒತ್ತಡ ಹೆಚ್ಚಾಗಿದೆ. ಆದರೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಹೋಗಿ, ಇತ್ತ ಶಿಕಾರಿಪುರದಲ್ಲೇ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದರೆ ಎಂದು ಯಡಿಯೂರಪ್ಪ ಆತಂಕಿತರಾಗಿದ್ದಾರೆ. ವರುಣದಲ್ಲಿ ವೀರಶೈವ ಲಿಂಗಾಯತರ ಮತಗಳೂ ಸಾಕಷ್ಟಿವೆ. ಈ ಭಾಗದಲ್ಲಿ ವಿ. ಸೋಮಣ್ಣ ಪ್ರಭಾವ ಇದೆ. ಅದನ್ನು ಬಳಸಿ ಏನಾದರು ವಿಜಯೇಂದ್ರರನ್ನು ಸೋಲಿಸಿದರೆ ಭವಿಷ್ಯವೇ ಕತ್ತಲಿಗೆ ಹೋಗುತ್ತದೆ. ಅಕಸ್ಮಾತ್ ಗೆದ್ದರೂ, ಸಿದ್ದರಾಮಯ್ಯ ಅವರನ್ನು ಕೊನೆ ಚುನಾವಣೆಯಲ್ಲಿ ಸೋಲಿಸಿ ಅವಮಾನಕಾರಿಯಾಗಿ ಮನೆಗೆ ಕಳಿಸಿದ ಕಳಂಕ ಅಂಟಿಕೊಂಡುಬಿಡುತ್ತದೆ. ಎಂಬ ಭಯ ಆರಂಭವಾಗಿದೆ. ಇದು ಕುರುಬ ಸಮುದಾಯದ ಶಾಶ್ವತ ವಿರೋಧಕ್ಕೂ ಕಾರಣ ಆಗಬಹುದು ಎಂದು ಲೆಕ್ಕ ಹಾಕಿದ್ದಾರೆ.
ಅತ್ತ ವರುಣಕ್ಕೆ ಹೊರಟಿದ್ದ ವಿಜಯೇಂದ್ರ ಅವರನ್ನು ಕರೆದ ಯಡಿಯೂರಪ್ಪ, ಸೀದಾ ಶಿಕಾರಿಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ವಿಜಯೇಂದ್ರ ವರುಣದಲ್ಲಿ ಸ್ಪರ್ಧೆ ಮಾಡಲ್ಲ. ಶಿಕಾರಿಪುರಕ್ಕೆ ಕರೆದುಕೊಂಡು ಬಂದಿದ್ದೇನೆ ನೋಡಿ ಎಂದು ಜನರಿಗೆ ಹೇಳಿದ್ದಾರೆ. ನನಗೆ ನೀಡಿದ ಪ್ರೀತಿ, ವಿಶ್ವಾಸವನ್ನು ವಿಜಯೇಂದ್ರಗೂ ನೀಡಿ ಎಂದು ಮನವಿ ಮಾಡಿದ್ದಾರೆ. ಪುತ್ರನಿಗೆ ಮೂರನೇ ಬಾರಿ ತೊಂದರೆ ಆಗದಂತೆ ಕಾಪಾಡುವ ಸಲುವಾಗಿ ಯಡಿಯೂರಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ಸ್ಪಷ್ಟ.
ಇದನ್ನೂ ಓದಿ: Inside Story : ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪರನ್ನೇ ಕೆಣಕಿದ ಸಾಹುಕಾರ್!