Site icon Vistara News

Inside Story: ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯತ ಸಿಎಂ ಎಂಬ ವಾಗ್ದಾನ: ಹಾಗಾದರೆ ಮುಖ್ಯಮಂತ್ರಿ ಆಗುವವರು ಯಾರು?

#image_title

ಈ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಆಗಬೇಕು ಎಂದು ಕಾಂಗ್ರೆಸ್ ನಲ್ಲಿನ ಹಗ್ಗಜಗ್ಗಾಟ ಸುಮಾರು ಒಂದು ವರ್ಷ ಹಳೆಯದು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಬಹಿರಂಗವಾಗಿ ನಡೆಯುತ್ತಿದ್ದ ಸಿಎಂ ಜಂಗಿಕುಸ್ತಿಯನ್ನು ನಾಲ್ಕು ಗೋಡೆಯೊಳಗೆ ಸೀಮಿತ ಮಾಡುವಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಯಶಸ್ವಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ಸಿಎಂ ಕುರಿತು ಮಾತುಗಳು ಕೇಳಿದ್ದು ಬಹುತೇಕ ಇಲ್ಲವೇ ಇಲ್ಲ. ಅದು ಸೈಲೆಂಟ್ ಆಗಿದೆ. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಸಿಎಂ ಮಾತು ಕೇಳಿ ಬರುತ್ತಿದೆ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಬಹಳ ದೊಡ್ಡ ಅಲೆ ಏಳುತ್ತದೆ ಎಂದು ಭಾವಿಸಲಾಗಿತ್ತು. ಹಾಗೆ ನೋಡಿದರೆ ಅವರ ಜತೆಗೆ ಬಹಳಷ್ಟು ಸ್ಥಳೀಯ ನಾಯಕರೂ ತೆರಳಿದರು. ಆದರೆ ನಿಜವಾಗಿ ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದ್ದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಾಗ.

ಶೆಟ್ಟರ್ ಜತೆಗೆ ಇಲ್ಲಿಯವರೆಗೆ ಪ್ರಮುಖ ಅಥವಾ ಸ್ಥಳೀಯ ಮುಖಂಡರು ಪಕ್ಷ ತೊರೆದಿದ್ದು ಕಂಡಿಲ್ಲ. ಆದರೆ ಶೆಟ್ಟರ್ ಎಬ್ಬಿಸಿರುವ ಅಲೆ ದೊಡ್ಡದಾಗಿದೆ. ಅವರು ತಮಗೆ ಮಾತ್ರ ಅನ್ಯಾಯವಾಗಿದೆ ಎಂದು ಹೇಳುತ್ತಿಲ್ಲ. ಬದಲಿಗೆ ಈ ನಿರ್ಧಾರದ ಹಿಂದೆ ನೇರವಾಗಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇದ್ದಾರೆ ಎಂದು ಆರೋಪ ಮಾಡಿದ್ದಾರೆ. ಜತೆಗೆ ಪರೋಕ್ಷವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧವೂ ಮಾತನಾಡಿದ್ದಾರೆ. ಇದು ಕೇವಲ ಶೆಟ್ಟರ್‌ಗೆ ಮಾಡಿರುವ ಅನ್ಯಾಯ ಅಲ್ಲ. ಇಡೀ ವೀರಶೈವ ಲಿಂಗಾಯತ ಸಮುದಾಯವನ್ನು ಹಿಮ್ಮೆಟ್ಟಿಸಲಾಗುತ್ತಿದೆ. ಚುನಾವಣೆ ನಂತರದಲ್ಲಿ ಯಾವ್ಯಾವ ಲಿಂಗಾಯತರು ಸಿಎಂ ಆಕಾಂಕ್ಷಿಗಳು ಆಗಬಹುದಾಗಿತ್ತೊ ಅವರೆಲ್ಲರನ್ನೂ ಬದಿಗೆ ಸರಿಸಿ, ತಮ್ಮ ಮಾತು ಕೇಳುವ, ಲಿಂಗಾಯತ ಸಮುದಾಯದ ಜೂನಿಯರ್ ಗಳನ್ನು ತಂದು ಹಾಕುತ್ತಿದ್ದಾರೆ. ಒಮ್ಮೆ ಡಿ.ವಿ. ಸದಾನಂದಗೌಡ ಬಿಟ್ಟು, ಬಿಜೆಪಿ ಸರ್ಕಾರ ರಚನೆಯಾದಾಗಲೆಲ್ಲ ಲಿಂಗಾಯತರನ್ನೇ ಸಿಎಂ ಮಾಡಲಾಗಿದೆ, ಈ ಬಾರಿ ಬದಲಾವಣೆ ಮಾಡುವ ನಿರ್ಧಾರ ಮಾಡಿದ್ದಾರೆ ಎಂಬ ಸಂದೇಶವನ್ನು ಶೆಟ್ಟರ್ ರವಾನೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಬಿಜೆಪಿಯಲ್ಲಿ ಈ ಕುರಿತ ಚರ್ಚೆ ನಡೆಯುತ್ತಿರುವುದೂ ನಿಜ.

ಇದನ್ನೂ ಓದಿ: Inside Story: ಶೆಟ್ಟರ್, ಸವದಿಗೆ ಕಾಂಗ್ರೆಸ್ ರೆಡ್ ಕಾರ್ಪೆಟ್; ಲಿಂಗಾಯತರಿಗೆ ಅವಮಾನ ಮಾಡಿದ ಶಾಪ ವಿಮೋಚನೆಯ ಲೆಕ್ಕಾಚಾರ!

ಈ ಚರ್ಚೆಯನ್ನು ಚುನಾವಣೆಗೆ ಮುನ್ನವೇ ಬಹಿರಂಗಪಡಿಸುತ್ತಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಶೆಟ್ಟರ್‌ ಈ ಲೆವೆಲ್ಲಿಗೆ ರೆಬಲ್‌ ಆಗಬಹುದು ಎಂದು ಬಿಜೆಪಿ ನಾಯಕರು ನಿರೀಕ್ಷೆ ಮಾಡಿರಲಿಲ್ಲ. ಇದೇ ಕಾರಣಕ್ಕೆ ಬಿ.ಎಸ್. ಯಡಿಯೂರಪ್ಪ ಅವರ ಮನೆಯಲ್ಲಿ ಏಪ್ರಿಲ್ 19ರಂದು ರಾತ್ರಿ ಸಭೆ ಸೇರಿದ ವೀರಶೈವ ಲಿಂಗಾಯತ ಸಮುದಾಯದ ಬಿಜೆಪಿ ನಾಯಕರು ಚರ್ಚಿಸಿದ್ದಾರೆ. ಯಡಿಯೂರಪ್ಪ ಅವರ ಜತೆಗೆ ಸದಾ ಸಮರ ಸಾರುವ ಬಸನಗೌಡ ಪಾಟೀಲ್ ಯತ್ನಾಳ್, ವಿ. ಸೋಮಣ್ಣ ಸಹ ಈ ಸಭೆಗೆ ಆಗಮಿಸಿದ್ದರು. ಈ ಬಾರಿಯೂ ಲಿಂಗಾಯತ ಸಿಎಂ ಎಂದು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಇದೇ ಅಸ್ತ್ರವನ್ನು ಕಾಂಗ್ರೆಸ್ ಬಳಕೆ ಮಾಡಿಕೊಂಡು ಪಕ್ಷಕ್ಕೆ ಹೊಡೆತ ನೀಡುತ್ತದೆ ಎಂದು ಒತ್ತಾಯಿಸಿದ್ದಾರೆ. ಘೋಷಣೆ ಮಾಡಿದ್ದರೂ, ಕಡೇ ಪಕ್ಷ ಆ ರೀತಿ ಪರೋಕ್ಷ ಸುಳಿವುಗಳನ್ನಾದರೂ ಪಕ್ಷ ನೀಡಬೇಕು ಎಂದು ಒತ್ತಾಯ ಮಾಡಿದ್ದರು.

ಈ ಬೆಳವಣಿಗೆ ನಡೆದ ದಿನವೇ ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಸ್ವತಃ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉಪಸ್ಥಿತರಿದ್ದು ಆಡಿದ ಮಾತು ಬಿಜೆಪಿ ವಲಯದಲ್ಲಿ ಗಂಭೀರ ಚರ್ಚೆ ಆಗುತ್ತಿದೆ. ನಡ್ಡಾಗೂ ಮೊದಲು ಮಾತನಾಡಿದ ಚಿತ್ರನಟ ಕಿಚ್ಚ ಸುದೀಪ್, ಬೊಮ್ಮಾಯಿ ಮಾಮ ಸಿಎಂ ಆಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ ಅವರಿಗೆ ಅತಿ ಕಡಿಮೆ ಸಮಯ ಸಿಕ್ಕಿತು, ಇನ್ನೂ ಹೆಚ್ಚು ಸಮಯ ಸಿಗಬೇಕು ಎಂದಿದ್ದರು. ನಂತರ ಮಾತನಾಡಿದ ಜೆ.ಪಿ. ನಡ್ಡಾ, “ಇವತ್ತು ನಾಮಪತ್ರವನ್ನು ಕೇವಲ ಒಬ್ಬ ಎಂಎಲ್ಎ ಗೆಲ್ಲಿಸಲು ಸಲ್ಲಿಸುತ್ತಿಲ್ಲ. ಕರ್ನಾಟಕದ ಅಭಿವೃದ್ಧಿಯ ದಿಕ್ಕನ್ನು ನಿರ್ಧರಿಸುವ ಮಾರ್ಗ ಎನ್ನುವುದು ನೆನಪಿರಲಿ. ಇವತ್ತು ಇಲ್ಲಿ ಉತ್ಸಾಹಿ, ಚಪ್ಪಾಳೆ ಸದ್ದು ಕೇಳಿದರೆ, ಬೊಮ್ಮಾಯಿ ಅವರನ್ನು ಮುಂದಿನ ಐದು ವರ್ಷ ವಿಧಾನಸಭೆಗೆ ಕಳಿಸಲು ತೀರ್ಮಾನಿಸಿದ್ದೀರ ಎಂದರ್ಥ” ಎಂದರು.

ಈ ಮಾತು ಬಿಜೆಪಿಯಲ್ಲಿ, ಮುಂದಿನ ಐದು ವರ್ಷಕ್ಕೆ ಬೊಮ್ಮಾಯಿಯೇ ಸಿಎಂ ಎಂದು ನಡ್ಡಾ ಪರೋಕ್ಷವಾಗಿ ಹೇಳಿದರು ಎಂದು ಚರ್ಚೆ ಆಗುತ್ತಿದೆ. ಇದಕ್ಕೆ ಅನುಗುಣವಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಬಿಜೆಪಿ ಮತ್ತೊಮ್ಮೆ ಬೊಮ್ಮಾಯಿ ಎನ್ನುವ ಘೋಷಣೆ ಮೊಳಗುತ್ತಿದೆ. ನನಗೆ ಮೋದಿಯವರ ಕಾರ್ಯದ ಬಗ್ಗೆ ಗೌರವವಿದೆ, ಆದರೆ ನಾನು ಬೊಮ್ಮಾಯಿ ಮಾಮಗೆ ಮಾತ್ರ ಪ್ರಚಾರ ಮಾಡುತ್ತೇನೆ ಎಂಬ ಕಿಚ್ಚ ಸುದೀಪ್ ಮಾತುಗಳೂ ಇವೆಲ್ಲಕ್ಕೂ ಒಂದಕ್ಕೊಂದು ತಾಳೆಯಾಗುತ್ತಿವೆ. ಈಗಾಗಲೆ ಆದೇಶ ಮಾಡಿರುವ ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳವನ್ನು ಅನುಷ್ಠಾನವನ್ನೂ ಮಾಡುತ್ತೇನೆ ಎಂದು ಬೊಮ್ಮಾಯಿ ಆಗಿಂದಾಗ ಹೇಳಿರುವುದು ಇದೀಗ ಬಿಜೆಪಿ ವಲಯದಲ್ಲಿ ಸಿಎಂ ಕುರಿತ ಚರ್ಚೆಗೆ ನಾಂದಿ ಹಾಡಿದೆ.

ಇದನ್ನೂ ಓದಿ: Karnataka Elections : ಲಿಂಗಾಯತರನ್ನು ಬಿಟ್ಟೇ ಪಕ್ಷ ಕಟ್ಟಬೇಕು ಎಂದು ಬಿಜೆಪಿಯಲ್ಲಿ ಚರ್ಚೆ: ಲಕ್ಷ್ಮಣ್‌ ಸ್ಫೋಟಕ ಹೇಳಿಕೆ

Exit mobile version