Site icon Vistara News

Inside Story: ಸಿಎಂ ಬೊಮ್ಮಾಯಿ ಚೆಕ್‌ಮೇಟ್‌ಗೆ ವಿನಯ್‌ ಕುಲಕರ್ಣಿ ಗಲಿಬಿಲಿ: ಬಿಸಿ ತುಪ್ಪವಾಯಿತು ಶಿಗ್ಗಾಂವಿ ಟಿಕೆಟ್‌

inside story cm basavaraj bommai strategy in shiggao constituency

#image_title

ಬೆಂಗಳೂರು: ಸಿಎಂ ತವರು ಕ್ಷೇತ್ರ ಎಂದ ಕೂಡಲೆ ಎಲ್ಲರ ಕಣ್ಣು ಅತ್ತ ಇರುತ್ತದೆ. ಆದರೆ ಈ ಸಾರಿ ಸಿಎಂ ಬೊಮ್ಮಾಯಿ ಶಾಸಕರಾಗಿರುವ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಚುನಾವಣೆಗೂ ಮುನ್ನವೇ ನಿಜವಾಗಿಯೂ ರೋಚಕ ಹಣಾಹಣಿ ನಡೆದಿದೆ.

ಸಿಎಂ ಬೊಮ್ಮಾಯಿ ಇದೀಗ ಮೂರು ಬಾರಿ ಜಯಿಸಿರುವ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ಪಡೆಯಬೇಕು ಎಂದು ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಸಿದ್ಧವಾಗಿದೆ. ಆದರೆ ಪರಿಸ್ಥಿತಿ ನಿರಂತರ ಬದಲಾಗುತ್ತಿದೆ.

ವಿನಯ್‌ ಕುಲಕರ್ಣಿ ಅವರ ವಿರುದ್ಧ, ಬಿಜೆಪಿ ಕಾರ್ಯಕರ್ತ ಮತ್ತಯ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೇಶ್‌ ಗೌಡ ಬರ್ಬರ ಹತ್ಯೆಯ ಆರೋಪವಿದೆ. ಈ ಕಾರಣಕ್ಕಾಗಿಯೇ ಅವರು ಧಾರವಾಡಕ್ಕೆ ಪ್ರವೇಶ ನೀಡಬಾರದು ಎಂದು ಕೋರ್ಟ್‌ ಹೇಳಿದೆ. ತಮಗೆ 1200 ಹಸುಗಳು, 2400 ಕುರಿಗಳು ಇವೆ. ಅವುಗಳನ್ನು ಸಾಕುವುದು ಪತ್ನಿ ಹಾಗು ಮಕ್ಕಳಿಗೆ ಆಗುತ್ತಿಲ್ಲ. ಈ ನಡುವೆ ಚುನಾವಣೆಯೂ ಇರುವುದರಿಂದ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಸುಪ್ರೀಂ ಮೆಟ್ಟಿಲನ್ನೂ ಏರಿದ್ದಾಯಿತು. ಆದರೆ ಸುಪ್ರೀಂಕೋರ್ಟ್‌ ಇದಕ್ಕೆ ಒಪ್ಪಿಲ್ಲ. ವಾರಕ್ಕೆ ಎರಡು ದಿನ ಸಿಬಿಐ ಕಚೇರಿಗೆ ತೆರಳಿ ಸಹಿ ಮಾಡುವ ಬದಲು ಇಂದು ದಿನ ಮಾಡಿದರಾಯಿತು ಎಂದು ಸಡಿಲಿಸಿದೆ ಅಷ್ಟೆ.

ಇದನ್ನು ಮೊದಲೇ ಊಹಿಸಿದ್ದ ಕಾಂಗ್ರೆಸ್‌ ನಾಯಕರು ಶಿಗ್ಗಾಂವಿಯಿಂದ ಕುಲಕರ್ಣಿಯವರನ್ನು ಕಣಕ್ಕಿಳಿಸಿದರೆ ಹೇಗೆ ಎಂದು ಪ್ಲಾನ್‌ ಮಾಡಿದರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ರಾಜ್ಯದ ವಿವಿಧೆಡೆ ಹೋರಾಡ ನಡೆಯುತ್ತಿತ್ತು. ಸರ್ಕಾರ ತಮ್ಮ ಮಾತು ಕೇಳುತ್ತಿಲ್ಲ ಎಂದು ಸಿಎಂ ಕ್ಷೇತ್ರ ಶಿಗ್ಗಾಂವಿಯಲ್ಲೇ ಎರಡು ಪ್ರತಿಭಟನೆಗಳು ನಡೆದವು. ಸಿಎಂ ಬೊಮ್ಮಾಯಿ 2ಎ ವಿರುದ್ಧ ಇದ್ದಾರೆ ಎಂದು ಹೇಳುತ್ತ ಪಂಚಮಸಾಲಿ ಮತಗಳನ್ನು ಒಟ್ಟಾರೆ ವೀರಶೈವ ಲಿಂಗಾಯತ ಬಾಸ್ಕೆಟ್‌ನಿಂದ ಬೇರೆ ಮಾಡುವುದು ಉದ್ದೇಶ ಎನ್ನಲಾಗಿದೆ. ಆದರೆ ಇದೆಲ್ಲವನ್ನೂ ಅರಿತ ಬೊಮ್ಮಾಯಿ, ಮೀಸಲಾತಿ ವರ್ಗೀಕರಣದಲ್ಲಿ ಅಚ್ಚರಿಯ ಹೆಜ್ಜೆ ಇಟ್ಟರು. ಕೇವಲ ಪಂಚಮಸಾಲಿ ಸಮುದಾಯಕ್ಕೆ ಬದಲಾಗಿ ಒಟ್ಟಾರೆ ವೀರಶೈವ ಲಿಂಗಾಯತ ಸಮುದಾಯವನ್ನು 2ಡಿ ವರ್ಗಕ್ಕೆ ಸೇರಿಸಿ ಮೀಸಲಾತಿ ಹೆಚ್ಚಿಸಿದರು. ಇದು ಕಾಂಗ್ರೆಸ್‌ಗೆ ತಲೆನೋವು ತಂದಿದೆ.

ಸಿಎಂ ಬೊಮ್ಮಾಯಿ ವಿರುದ್ಧ ಸತತ ಮೂರು ಬಾರಿ ಸೋಲುಂಡಿರುವ ಅಜ್ಜಂಪೀರ್‌ ಖಾದ್ರಿ ಅವರ ಹಿಂದೆ ಸಾಲಿಡ್‌ ಮುಸ್ಲಿಂ ಮತಗಳಿವೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜತೆಗೆ ಕ್ಷೇತ್ರದ ಸುಮಾರು ಶೇ.80-85 ಮುಸ್ಲಿಮರ ಮತ ಪಡೆದರೂ ಇತ್ತ ವೀರಶೈವ ಲಿಂಗಾಯತ ಮತಗಳು ಸಿಗೇ ಇದ್ದಿದ್ದರಿಂದ ಸೋಲುತ್ತಿದ್ದಾರೆ. ಖಾದ್ರಿ ಕಡೆಯಿಂದ ಮುಸ್ಲಿಂ ಮತಗಳನ್ನು ಪಡೆದು, ಇತ್ತ ವಿನಯ ಕುಲಕರ್ಣಿ ಮೂಲಕ ಪಂಚಮಸಾಲಿ ಮತ ಸಿಕ್ಕರೆ ಗೆಲುವು ಪಕ್ಕ ಎಂಬ ಲೆಕ್ಕ ಹಾಕಲಾಗಿತ್ತು.

ಆದರೆ ಇದೀಗ ಒಟ್ಟಾರೆ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಿರುವುದರಿಂದ ಕ್ಷೇತ್ರದ ಲಿಂಗಾಯತ ಮತದಾರರಲ್ಲಿದ್ದ ಸಿಟ್ಟು ಕಡಿಮೆಯಾಗಿದೆ. ಪಂಚಮಸಾಲಿಗಳ ಜತೆಗೆ ಒಟ್ಟಾರೆ ವೀರಶೈವ ಲಿಂಗಾಯತ ಸಮುದಾಯಕ್ಕೇ ಮೀಸಲಾತಿ ಸಿಕ್ಕಿತು ಎನ್ನುವ ಸಮಾಧಾನವೂ ಕೆಲವರಿಗೆ ಇದೆಯಂತೆ. ಹೇಗಿದ್ದರೂ ಧಾರವಾಡ ಜಿಲ್ಲೆ ಪ್ರವೇಶಕ್ಕೆ ಅನುಮತಿ ಸಿಗುವುದಿಲ್ಲ ಎಂದು ಶಿಗ್ಗಾಂವಿ ಕಡೆಗೆ ಹೊರಟಿದ್ದ ವಿನಯ ಕುಲಕರ್ಣಿ ಈಗ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ತಮ್ಮ ಎದುರಿನ ಪೈಪೋಟಿಯನ್ನು ಅರಿತಿದ್ದ ಸಿಎಂ ಬೊಮ್ಮಾಯಿ ಕಳೆದ ಎರಡು ತಿಂಗಳಲ್ಲಿ 14 ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಸಾವಿರಾರು ಕೋಟಿ ರೂ. ಮೊತ್ತದ ಯೋಜನೆ ಉದ್ಘಾಟನೆ, ಶಂಕುಸ್ಥಾಪನೆ ಮಾಡಿದ್ದಾರೆ. ಇದೀಗ ವಿನಯ ಕುಲಕರ್ಣಿ ಅವರಿಗೆ ದುಗುಡ ಆರಂಭವಾಗಿದೆ.

ಈಗಾಗಲೆ ಹೈಕಮಾಂಡ್‌ಗೆ ಪಟ್ಟಿ ಹೋಗಿದೆ. ಶಿಗ್ಗಾಂವಿಯಲ್ಲಿ ವಿನಯ ಕುಲಕರ್ಣಿ ಅವರಿಗೆ ಟಿಕೆಟ್‌ ಕೊಟಟ್ರೆ ಸಹಕರಿಸುವೆ ಎಂದು ಖಾದ್ರಿ ಸಹ ಹೇಳಿದ್ದಾರೆ. ಇನ್ನೇನು ಟಿಕೆಟ್‌ ಘೋಷಣೆ ಆಗಬೇಕು ಎನ್ನುವಾಗ, ಟಿಕೆಟ್‌ ಪಡೆಯುವುದು ಹೇಗೆ ಎಂಬ ಚಿಂತೆ ಮಾಡುತ್ತಿದ್ದಾರೆ. ಹಾಗೂ ಟಿಕೆಟ್‌ ನೀಡಿದರೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಆದಷ್ಟೂ ಸೆಣೆಸುವುದು ಎಂಬ ನಿರ್ಧಾರಕ್ಕೆ ವಿನಯ್‌ ಕುಲಕರ್ಣಿ ಬಂದಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಒಟ್ಟಿನಲ್ಲಿ ಸಿಎಂ ಬೊಮ್ಮಾಯಿ ಕೈಗೊಂಡ ʼರಕ್ಷಣಾತ್ಮಕʼ ನಡೆಗಳು ಎದುರಾಳಿಯನ್ನು ಚಿಂತೆಗೀಡುಮಾಡಿರುವುದಂತೂ ನಿಜ.

ಇದನ್ನೂ ಓದಿ: Inside Story : ಕಿಚ್ಚ ಸುದೀಪ್ ಅವರನ್ನ ರಾಜಕೀಯಕ್ಕೆ ಎಳೆ ತಂದರೇ ಅಮಿತ್ ಶಾ ಮಗ ಜಯ್ ಶಾ?

Exit mobile version